ಸ್ವಚ್ಛ ಬಾದಾಮಿ ನಮ್ಮೆಲ್ಲರ ಜವಾಬ್ದಾರಿ: ಕಸ ವಿಂಗಡಣೆ ಕಡ್ಡಾಯ, ನಿಯಮ ಉಲ್ಲಂಘಿಸಿದವರಿಗೆ ದಂಡ – ಪುರಸಭೆ ಸಾರ್ವಜನಿಕ ಪ್ರಕಟಣೆ
ಬಾಗಲಕೋಟೆ, 17 ಜುಲೈ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಪುರಸಭೆ ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ಪೌರಸಭೆಗಳ ಘನತ್ಯಾಜ್ಯ ನಿರ್ವಹಣೆಯ ಮಾದರಿ ಉಪವಿಧಿಗಳು–2019ರ ಅನ್ವಯ ಘನತ್
ಕಸ


ಬಾಗಲಕೋಟೆ, 17 ಜುಲೈ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ

ಬಾದಾಮಿ ಪಟ್ಟಣವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಪುರಸಭೆ ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ಪೌರಸಭೆಗಳ ಘನತ್ಯಾಜ್ಯ ನಿರ್ವಹಣೆಯ ಮಾದರಿ ಉಪವಿಧಿಗಳು–2019ರ ಅನ್ವಯ ಘನತ್ಯಾಜ್ಯ ನಿರ್ವಹಣೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ಪಟ್ಟಣದ ಪರಿಸರ ಸಂರಕ್ಷಣೆ, ಸಾರ್ವಜನಿಕ ಆರೋಗ್ಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿರುವ ಪುರಸಭೆ, ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಪುರಸಭೆಯ ವಾಹನಕ್ಕೆ ಮಾತ್ರ ನೀಡುವಂತೆ ಮನವಿ ಮಾಡಿದೆ. ರಸ್ತೆ, ಚರಂಡಿ, ಉದ್ಯಾನ, ಬಸ್ ನಿಲ್ದಾಣ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯದಂತೆ ನಾಗರಿಕರಿಗೆ ಸೂಚಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮೂತ್ರವಿಸರ್ಜನೆ ಅಥವಾ ಬಯಲು ಮಲವಿಸರ್ಜನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಟ್ಟಡ ನಿರ್ಮಾಣ ಹಾಗೂ ಕೆಡವುವ ಸಂದರ್ಭದಲ್ಲಿ ಉಂಟಾಗುವ ತ್ಯಾಜ್ಯವನ್ನು ನಿಯಮಾನುಸಾರವೇ ವಿಲೇವಾರಿ ಮಾಡಬೇಕು ಎಂದು ತಿಳಿಸಲಾಗಿದೆ. ಕಸವನ್ನು ಸುಡುವುದು, ಅನಧಿಕೃತವಾಗಿ ಸುರಿಯುವುದು ಅಥವಾ ಹೂಳುವುದು ಕಾನೂನುಬಾಹಿರವಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಅಂಗಡಿಗಳು, ಹೋಟೆಲ್ಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರು ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ಪುರಸಭೆಗೆ ಹಸ್ತಾಂತರಿಸಬೇಕು. ಮೀನು, ಕೋಳಿ ಹಾಗೂ ಕಸಾಯಿಖಾನೆ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಕಸದ ಬುಟ್ಟಿಗಳ ಹೊರಗೆ ಸುರಿಯುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.

ಈ ಎಲ್ಲ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕರ್ನಾಟಕ ಪೌರಸಭೆಗಳ ಘನತ್ಯಾಜ್ಯ ನಿರ್ವಹಣೆಯ ಮಾದರಿ ಉಪವಿಧಿಗಳು–2019ರ ಪ್ರಕಾರ ನಿಗದಿತ ದಂಡ ಅಥವಾ ಜುಲ್ಮಾನೆ ವಿಧಿಸಲಾಗುವುದು ಎಂದು ಪುರಸಭೆ ಸ್ಪಷ್ಟಪಡಿಸಿದೆ.

ಸ್ವಚ್ಛ ಬಾದಾಮಿ – ಸುಂದರ ಬಾದಾಮಿ ಎಂಬ ಘೋಷವಾಕ್ಯದೊಂದಿಗೆ ಪುರಸಭೆ ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಪಟ್ಟಣದ ಸ್ವಚ್ಛತೆ ಕೇವಲ ಪುರಸಭೆಯ ಹೊಣೆಗಾರಿಕೆಯಲ್ಲ, ಪ್ರತಿಯೊಬ್ಬ ನಾಗರಿಕರ ಕರ್ತವ್ಯವೂ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಸವನ್ನು ವಿಂಗಡಿಸೋಣ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡೋಣ, ಪರಿಸರವನ್ನು ಸಂರಕ್ಷಿಸೋಣ ಹಾಗೂ ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ಬಾದಾಮಿಯನ್ನು ನಿರ್ಮಿಸೋಣ. ನಮ್ಮ ಬಾದಾಮಿ – ನಮ್ಮ ಹೆಮ್ಮೆ, ಸ್ವಚ್ಛತೆ ನಮ್ಮ ಹೊಣೆ ಎಂಬ ಸಂದೇಶದೊಂದಿಗೆ ಮುಖ್ಯಾಧಿಕಾರಿಗಳು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande