ಎನ್ಎಫ್ಎಚ್ಎಸ್-6 ಫ್ಯಾಕ್ಟ್ಶೀಟ್ನಲ್ಲಿ ಆರೋಗ್ಯ ಮತ್ತು ಪೌಷ್ಟಿಕಾಂಶ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ
ನವದೆಹಲಿ, 07 ಜೂನ್ (ಹಿ.ಸ.) : ಆ್ಯಂಕರ್ : ದೇಶದ ಆರೋಗ್ಯ, ಪೌಷ್ಟಿಕಾಂಶ ಮತ್ತು ಜನಸಂಖ್ಯೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಒಳಗೊಂಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (ಎನ್ಎಫ್ಎಚ್ಎಸ್-6) ಫ್ಯಾಕ್ಟ್ಶೀಟ್ ಅನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದೆ.
ಆರೋಗ್ಯ ಸಚಿವಾಲಯ


ನವದೆಹಲಿ, 07 ಜೂನ್ (ಹಿ.ಸ.) :

ಆ್ಯಂಕರ್ : ದೇಶದ ಆರೋಗ್ಯ, ಪೌಷ್ಟಿಕಾಂಶ ಮತ್ತು ಜನಸಂಖ್ಯೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಒಳಗೊಂಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (ಎನ್ಎಫ್ಎಚ್ಎಸ್-6) ಫ್ಯಾಕ್ಟ್ಶೀಟ್ ಅನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಆರೋಗ್ಯ ಸೇವೆಗಳ ವಿಸ್ತರಣೆ, ಲಸಿಕಾ ವ್ಯಾಪ್ತಿಯ ಹೆಚ್ಚಳ, ಮಾತೃ-ಶಿಶು ಆರೋಗ್ಯ ಸೇವೆಗಳ ಸುಧಾರಣೆ ಹಾಗೂ ಸ್ತನ್ಯಪಾನದ ಕ್ಷೇತ್ರದಲ್ಲಿ ಸಾಧನೆಯಂತಹ ಹಲವು ಸಕಾರಾತ್ಮಕ ಬೆಳವಣಿಗೆಗಳು ದಾಖಲಾಗಿವೆ.

ಫ್ಯಾಕ್ಟ್ಶೀಟ್ ಪ್ರಕಾರ, ದೇಶದ ಸಾಮಾನ್ಯ ಜನರಿಗೆ ಮಾತೃ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಲಭ್ಯತೆ ಹೆಚ್ಚಾಗಿದೆ. ಗರ್ಭಿಣಿಯರಿಗೆ ನೀಡಲಾಗುವ ಪ್ರಸವಪೂರ್ವ ಆರೈಕೆ ಸೇವೆಗಳ ಬಳಕೆಯಲ್ಲಿ ಏರಿಕೆ ಕಂಡುಬಂದಿದ್ದು, ಮಕ್ಕಳ ಲಸಿಕಾ ಕಾರ್ಯಕ್ರಮದ ವ್ಯಾಪ್ತಿಯೂ ವಿಸ್ತರಿಸಿದೆ. ಶಿಶುಗಳ ಸ್ತನ್ಯಪಾನಕ್ಕೆ ಸಂಬಂಧಿಸಿದ ಸೂಚಕಗಳಲ್ಲಿಯೂ ಉತ್ತಮ ಪ್ರಗತಿ ದಾಖಲಾಗಿದೆ.

ಈ ಬಾರಿ ಮೊದಲ ಬಾರಿಗೆ ಜನಸಂಖ್ಯೆಯ ರಚನೆ, ಹಿರಿಯ ನಾಗರಿಕರ ಪ್ರಮಾಣ, ಆರ್ಥಿಕ ಒಳಗೊಳ್ಳುವಿಕೆ, ತೀವ್ರ ಅತಿಸಾರದ ಹರಡುವಿಕೆ ಹಾಗೂ ಸ್ತನ್ಯಪಾನಕ್ಕೆ ಸಂಬಂಧಿಸಿದ ವಿಸ್ತೃತ ಮಾಹಿತಿಯನ್ನು ಫ್ಯಾಕ್ಟ್ಶೀಟ್ನಲ್ಲಿ ಸೇರಿಸಲಾಗಿದೆ. ಒಟ್ಟು 101 ಪ್ರಮುಖ ಸೂಚಕಗಳ ಸ್ಥಿತಿಯನ್ನು ಈ ವರದಿ ಒಳಗೊಂಡಿದೆ.

ಕೆಲವು ವಲಯಗಳಲ್ಲಿ ಕುಟುಂಬ ಯೋಜನೆ, ಮಕ್ಕಳ ಆರೋಗ್ಯ, ಮಹಿಳಾ ಆರೋಗ್ಯ ಹಾಗೂ ಎಚ್ಐವಿ ಕುರಿತ ಮಾಹಿತಿಯನ್ನು ಕೈಬಿಡಲಾಗಿದೆ ಎಂಬ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವಾಲಯ ಸ್ಪಷ್ಟನೆ ನೀಡಿದೆ. ಈ ವಿಷಯಗಳಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಮುಂಬರುವ ರಾಷ್ಟ್ರೀಯ ವರದಿಯಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಎನ್ಎಫ್ಎಚ್ಎಸ್ ದೇಶದ ಅತಿದೊಡ್ಡ ಮತ್ತು ಅತ್ಯಂತ ಸಮಗ್ರ ಗೃಹ ಆರೋಗ್ಯ ಸಮೀಕ್ಷೆಯಾಗಿದ್ದು, ಸಾಕ್ಷ್ಯಾಧಾರಿತ ನೀತಿ ರೂಪಣೆಗೆ ಪ್ರಮುಖ ಆಧಾರವಾಗಿಯೇ ಮುಂದುವರಿಯಲಿದೆ ಎಂದು ಸಚಿವಾಲಯ ಹೇಳಿದೆ. ಪ್ರಸ್ತುತ ಬಿಡುಗಡೆಗೊಂಡಿರುವುದು ಆರಂಭಿಕ ಹಂತದ ಫ್ಯಾಕ್ಟ್ಶೀಟ್ ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಕಟವಾಗಲಿರುವ ರಾಷ್ಟ್ರೀಯ ವರದಿಯಲ್ಲಿ ಹೆಚ್ಚಿನ ಸೂಚಕಗಳು, ವಿಶ್ಲೇಷಣೆಗಳು ಮತ್ತು ಕ್ರಮಶಾಸ್ತ್ರೀಯ ವಿವರಗಳನ್ನು ಒಳಗೊಂಡಿರಲಿವೆ.

ಮಾಧ್ಯಮಗಳಲ್ಲಿ ವ್ಯಕ್ತವಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿರುವ ಸಚಿವಾಲಯ, ಫ್ಯಾಕ್ಟ್ಶೀಟ್ನಲ್ಲಿ ಸೇರಿಸದ ಕೆಲವು ಮಾಹಿತಿಗಳು ಈಗಾಗಲೇ ಇತರೆ ರಾಷ್ಟ್ರೀಯ ವ್ಯವಸ್ಥೆಗಳ ಮೂಲಕ ನಿಯಮಿತವಾಗಿ ಸಂಗ್ರಹವಾಗುತ್ತಿವೆ ಎಂದು ತಿಳಿಸಿದೆ. ನೈರ್ಮಲ್ಯ ಮತ್ತು ಶುದ್ಧ ಇಂಧನ ಬಳಕೆಯ ಮಾಹಿತಿಯನ್ನು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಹಾಗೂ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಸಮೀಕ್ಷೆಗಳ ಮೂಲಕ ಪಡೆಯಲಾಗುತ್ತಿದೆ. ಜನನ, ಮರಣ ಮತ್ತು ಜನಸಂಖ್ಯೆ ಸಂಬಂಧಿತ ಅಂಕಿಅಂಶಗಳನ್ನು ಮಾದರಿ ನೋಂದಣಿ ವ್ಯವಸ್ಥೆ (ಎಸ್ಆರ್ಎಸ್), ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್ಎಸ್) ಮತ್ತು ಜನಗಣತಿ ವ್ಯವಸ್ಥೆಗಳ ಮೂಲಕ ಸಂಗ್ರಹಿಸಲಾಗುತ್ತಿದೆ.

ಇದೇ ವೇಳೆ, ಎನ್ಎಫ್ಎಚ್ಎಸ್-6ರಲ್ಲಿ ರಕ್ತಹೀನತೆ (ಅನಿಮಿಯಾ) ಕುರಿತ ಹಿಮೋಗ್ಲೋಬಿನ್ ಪರೀಕ್ಷೆಯನ್ನು ನಡೆಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂದಿನ ಸಮೀಕ್ಷೆಗಳಲ್ಲಿ ಬಳಸಲಾಗಿದ್ದ ಕ್ಯಾಪಿಲರಿ ರಕ್ತ ಮಾದರಿ ವಿಧಾನ ಕುರಿತು ವ್ಯಕ್ತವಾದ ತಾಂತ್ರಿಕ ಕಳವಳಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅನಿಮಿಯಾ ಸಂಬಂಧಿತ ಮಾಹಿತಿಯನ್ನು ಇನ್ನು ಮುಂದೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸುವ ಆಹಾರ ಮತ್ತು ಬಯೋಮಾರ್ಕರ್ ಸಮೀಕ್ಷೆಯಿಂದ ಪಡೆಯಲಾಗುವುದು. ಈ ಸಮೀಕ್ಷೆಯಲ್ಲಿ ಹೆಚ್ಚು ನಿಖರವೆಂದು ಪರಿಗಣಿಸಲಾದ ಸಿರೆಯ ರಕ್ತ ಮಾದರಿ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಆರೋಗ್ಯ ಸೇವೆಗಳ ವಿಸ್ತರಣೆ, ಲಸಿಕಾ ಕಾರ್ಯಕ್ರಮದ ಯಶಸ್ಸು ಹಾಗೂ ಮಾತೃ-ಶಿಶು ಆರೋಗ್ಯ ಕ್ಷೇತ್ರದಲ್ಲಿ ಕಂಡುಬಂದಿರುವ ಸುಧಾರಣೆಗಳು ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಿಷ್ಠಗೊಳ್ಳುತ್ತಿರುವುದಕ್ಕೆ ಸೂಚಕವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande