9-10ನೇ ತರಗತಿಗಳಿಗೆ ಮೂರನೇ ಭಾಷೆ ಕಡ್ಡಾಯಗೊಳಿಸುವ ಕ್ರಮಕ್ಕೆ ತಡೆ ಕೋರಿ ಪ್ರಧಾನಿಗೆ ಪತ್ರ
ನವದೆಹಲಿ, 07 ಜೂನ್ (ಹಿ.ಸ.) : ಆ್ಯಂಕರ್ : 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯನ್ನು ಕಡ್ಡಾಯಗೊಳಿಸುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) ನಿರ್ಧಾರವನ್ನು ತಕ್ಷಣ ಸ್ಥಗಿತಗೊಳಿಸುವಂತೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀ
Digvijay singh


ನವದೆಹಲಿ, 07 ಜೂನ್ (ಹಿ.ಸ.) :

ಆ್ಯಂಕರ್ : 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯನ್ನು ಕಡ್ಡಾಯಗೊಳಿಸುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) ನಿರ್ಧಾರವನ್ನು ತಕ್ಷಣ ಸ್ಥಗಿತಗೊಳಿಸುವಂತೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀಡೆಗಳ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಸಾಕಷ್ಟು ಸಿದ್ಧತೆಗಳಿಲ್ಲದೆ ಹಾಗೂ ಸಿಬಿಎಸ್ಇ ಆಡಳಿತ ಮಂಡಳಿಯ ಹಿಂದಿನ ನಿರ್ಧಾರಕ್ಕೆ ವಿರುದ್ಧವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ದಿಗ್ವಿಜಯ್ ಸಿಂಗ್ ಅವರ ಪತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿದ್ದು, 9 ಮತ್ತು 10ನೇ ತರಗತಿ ಪಠ್ಯಕ್ರಮದಲ್ಲಿ ಮೂರನೇ ಭಾಷೆಯನ್ನು ಯೋಜನೆ ಮತ್ತು ಸಿದ್ಧತೆಯಿಲ್ಲದೆ ಸೇರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ದಿಗ್ವಿಜಯ್ ಸಿಂಗ್ ಅವರು ಪತ್ರದಲ್ಲಿ, 9ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಗುಂಪಿನಿಂದ ಮನವಿ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿಯೇ ತ್ರಿಭಾಷಾ ನೀತಿಯನ್ನು ಜಾರಿಗೆ ತರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ.

ಅಗತ್ಯ ಪಠ್ಯಪುಸ್ತಕಗಳು ಲಭ್ಯವಾಗುವವರೆಗೆ ಈಗಿರುವ ಭಾಷಾ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಪಠ್ಯಕ್ರಮ ಸಮಿತಿಯ ಶಿಫಾರಸನ್ನು ಸಿಬಿಎಸ್ಇ ಆಡಳಿತ ಮಂಡಳಿ ತನ್ನ ಸಭೆಯಲ್ಲಿ ಅನುಮೋದಿಸಿತ್ತು. ಆದರೂ ಮೇ 15ರಂದು ಹೊರಡಿಸಿದ ಸುತ್ತೋಲೆಯಲ್ಲಿ ಜುಲೈ 1ರಿಂದ 9ನೇ ತರಗತಿಯಲ್ಲಿ ಮೂರನೇ ಭಾಷೆಯನ್ನು ಪರಿಚಯಿಸುವಂತೆ ಸೂಚಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಇನ್ನೂ ಸಂಬಂಧಿತ ಭಾಷೆಗಳ ಶ್ರೇಣೀಕೃತ ಪಠ್ಯಪುಸ್ತಕಗಳನ್ನು ಪ್ರಕಟಿಸಿಲ್ಲ. ಇದರ ನಡುವೆ 6ನೇ ತರಗತಿಯ ಪಠ್ಯಪುಸ್ತಕಗಳನ್ನು ಬಳಸುವಂತೆ ಸಲಹೆ ನೀಡಲಾಗುತ್ತಿದ್ದು, ಇದು ಸಾವಿರಾರು ಶಾಲೆಗಳ ಶೈಕ್ಷಣಿಕ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳ ವಿಶೇಷ ಪರಿಸ್ಥಿತಿಯನ್ನೂ ಪತ್ರದಲ್ಲಿ ಉಲ್ಲೇಖಿಸಿರುವ ದಿಗ್ವಿಜಯ್ ಸಿಂಗ್, ಈ ಪ್ರದೇಶಗಳಲ್ಲಿ ಹಿಂದಿ ವ್ಯಾಪಕವಾಗಿ ಬಳಕೆಯಲ್ಲಿಲ್ಲ. ಅಲ್ಲದೆ ಅನೇಕ ಸ್ಥಳೀಯ ಹಾಗೂ ಬುಡಕಟ್ಟು ಭಾಷೆಗಳು ಸಿಬಿಎಸ್ಇ ಮಾನ್ಯತೆ ಪಡೆದ ಭಾಷೆಗಳ ಪಟ್ಟಿಯಲ್ಲಿಲ್ಲ ಎಂದು ಹೇಳಿದ್ದಾರೆ.

ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದ್ದರೂ, ಅರ್ಹ ಸಂಸ್ಕೃತ ಶಿಕ್ಷಕರು ಮತ್ತು ಸೂಕ್ತ ಪಠ್ಯಪುಸ್ತಕಗಳ ಕೊರತೆ ಇರುವುದನ್ನು ಅವರು ಗಮನಕ್ಕೆ ತಂದಿದ್ದಾರೆ.

ಈ ವಿಷಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಮುಂದಿನ ವಿಚಾರಣೆಯನ್ನು ಜುಲೈ 15ಕ್ಕೆ ನಿಗದಿಪಡಿಸಲಾಗಿದೆ. ಆದರೆ ಜುಲೈ 1ರಿಂದಲೇ ಹೊಸ ವ್ಯವಸ್ಥೆ ಜಾರಿಗೆ ತರಲು ಸೂಚಿಸಿರುವುದು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಬಹುದು ಎಂದು ಅವರು ಹೇಳಿದ್ದಾರೆ.

ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವು ಸಮರ್ಪಕವಾಗಿ ರೂಪಿಸಲಾದ ನೀತಿಗಳ ಮೇಲೆ ಅವಲಂಬಿತವಾಗಿರುವುದರಿಂದ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 9ನೇ ತರಗತಿ ವಿದ್ಯಾರ್ಥಿಗಳಿಗೆ ಮೂರನೇ ಭಾಷೆ ಕಡ್ಡಾಯಗೊಳಿಸುವ ಕ್ರಮವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂದು ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande