ಆಕಾಶವಾಣಿಯ ಎಫ್ಎಂ ಜಾಲ ವಿಸ್ತರಣೆಗೆ ಆದ್ಯತೆ: ರಾಜೀವ್ ಕುಮಾರ್ ಜೈನ್
ನವದೆಹಲಿ, 07 ಜೂನ್ (ಹಿ.ಸ.): ಆ್ಯಂಕರ್: ದೇಶದ ಜನಜೀವನದೊಂದಿಗೆ ಬೆಸೆದುಕೊಂಡಿರುವ ಆಕಾಶವಾಣಿ ತನ್ನ 90ನೇ ವರ್ಷದ ಸಂಭ್ರಮವನ್ನು ಆಚರಿಸಲು ಸಜ್ಜಾಗಿದೆ. 1936ರ ಜೂನ್ 8ರಂದು ಸ್ಥಾಪನೆಯಾದ ಆಕಾಶವಾಣಿ, ಒಂಬತ್ತು ದಶಕಗಳ ಕಾಲ ಮಾಹಿತಿ, ಶಿಕ್ಷಣ, ಮನರಂಜನೆ ಮತ್ತು ಸಾಂಸ್ಕೃತಿಕ ಪ್ರಸಾರದ ಮೂಲಕ ರಾಷ್ಟ್ರದ ಧ್
ಆಕಾಶವಾಣಿಯ ಮಹಾನಿರ್ದೇಶಕ ರಾಜೀವ್ ಕುಮಾರ್ ಜೈನ್


ನವದೆಹಲಿ, 07 ಜೂನ್ (ಹಿ.ಸ.):

ಆ್ಯಂಕರ್:

ದೇಶದ ಜನಜೀವನದೊಂದಿಗೆ ಬೆಸೆದುಕೊಂಡಿರುವ ಆಕಾಶವಾಣಿ ತನ್ನ 90ನೇ ವರ್ಷದ ಸಂಭ್ರಮವನ್ನು ಆಚರಿಸಲು ಸಜ್ಜಾಗಿದೆ. 1936ರ ಜೂನ್ 8ರಂದು ಸ್ಥಾಪನೆಯಾದ ಆಕಾಶವಾಣಿ, ಒಂಬತ್ತು ದಶಕಗಳ ಕಾಲ ಮಾಹಿತಿ, ಶಿಕ್ಷಣ, ಮನರಂಜನೆ ಮತ್ತು ಸಾಂಸ್ಕೃತಿಕ ಪ್ರಸಾರದ ಮೂಲಕ ರಾಷ್ಟ್ರದ ಧ್ವನಿಯಾಗಿ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಕಾಶವಾಣಿಯ ಮಹಾನಿರ್ದೇಶಕ ರಾಜೀವ್ ಕುಮಾರ್ ಜೈನ್ ಅವರು ಸಂಸ್ಥೆಯ ಸಾಧನೆಗಳು ಮತ್ತು ಭವಿಷ್ಯದ ಯೋಜನೆಗಳ ಕುರಿತು ವಿಶೇಷವಾಗಿ ಮಾತನಾಡಿದ್ದಾರೆ.

ಆಕಾಶವಾಣಿಯ 90 ವರ್ಷಗಳ ಪಯಣವು ಕೇವಲ ಒಂದು ಪ್ರಸಾರ ಸಂಸ್ಥೆಯ ಬೆಳವಣಿಗೆಯ ಕಥೆಯಲ್ಲ, ಅದು ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯೊಂದಿಗೆ ಹತ್ತಿರದ ಸಂಬಂಧ ಹೊಂದಿದೆ ಎಂದು ಜೈನ್ ಹೇಳಿದರು. ಕಾರ್ಯಕ್ರಮ ನಿರ್ಮಾಪಕರು, ತಂತ್ರಜ್ಞರು, ಎಂಜಿನಿಯರ್‌ಗಳು ಮತ್ತು ಸಿಬ್ಬಂದಿಯ ಸಮರ್ಪಿತ ಸೇವೆಯೇ ಈ ಸಾಧನೆಗೆ ಕಾರಣವಾಗಿದ್ದು, ಜನರ ಪ್ರೀತಿ ಮತ್ತು ವಿಶ್ವಾಸದಿಂದಲೇ ಆಕಾಶವಾಣಿ ಇಂದಿನ ಎತ್ತರವನ್ನು ತಲುಪಿದೆ ಎಂದು ಅವರು ಅಭಿಪ್ರಾಯಪಟ್ಟರು.

1936ರಲ್ಲಿ ‘ಆಲ್ ಇಂಡಿಯಾ ರೇಡಿಯೋ’ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಗೆ 1956ರಲ್ಲಿ ಖ್ಯಾತ ಕವಿ ಪಂಡಿತ ನರೇಂದ್ರ ಶರ್ಮಾ ಅವರ ಸಲಹೆಯ ಮೇರೆಗೆ ‘ಆಕಾಶವಾಣಿ’ ಎಂಬ ಹೆಸರು ನೀಡಲಾಯಿತು. ಆ ಕಾಲದಲ್ಲಿ ರೇಡಿಯೋ ಒಂದು ಹೊಸ ಹಾಗೂ ಅಚ್ಚರಿಯ ತಂತ್ರಜ್ಞಾನವಾಗಿದ್ದು, ದೇಶದ ಮೂಲೆಮೂಲೆಗಳಿಗೆ ಸುದ್ದಿ ಮತ್ತು ಮಾಹಿತಿಯನ್ನು ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಬಳಿಕ ಟ್ರಾನ್ಸಿಸ್ಟರ್‌ಗಳ ಬಳಕೆ ಹೆಚ್ಚಾಗುತ್ತಿದ್ದಂತೆ ಆಕಾಶವಾಣಿ ಜನಸಾಮಾನ್ಯರ ಮನೆಮಾತಾಯಿತು.

ಆಕಾಶವಾಣಿಯ ಧ್ಯೇಯವಾಕ್ಯ ‘ಬಹುಜನ ಹಿತಾಯ, ಬಹುಜನ ಸುಖಾಯ’ ಎಂಬುದಾಗಿದ್ದು, ಪ್ರತಿಯೊಂದು ಕಾರ್ಯಕ್ರಮ ಮತ್ತು ಸುದ್ದಿಯ ಹಿಂದೆ ಜನಹಿತದ ಚಿಂತನೆ ಇದೆ ಎಂದು ಜೈನ್ ಹೇಳಿದರು. ಸುದ್ದಿಗಳ ಪ್ರಸಾರದಲ್ಲಿ ನಿಖರತೆ ಮತ್ತು ವಿಶ್ವಾಸಾರ್ಹತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ದೃಢೀಕರಣವಾಗದ ಸುದ್ದಿಗಳನ್ನು ಪ್ರಸಾರ ಮಾಡುವುದಿಲ್ಲ ಎಂಬುದು ಸಂಸ್ಥೆಯ ಮೂಲ ತತ್ವ ಎಂದು ಅವರು ಸ್ಪಷ್ಟಪಡಿಸಿದರು.

ಡಿಜಿಟಲ್ ಯುಗದಲ್ಲಿಯೂ ಆಕಾಶವಾಣಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಸಾಂಪ್ರದಾಯಿಕ ರೇಡಿಯೋ ಪ್ರಸಾರದ ಜೊತೆಗೆ ಪಾಡ್‌ಕಾಸ್ಟ್‌ಗಳು, ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್ ಹಾಗೂ ಇಂಟರ್‌ನೆಟ್ ವೇದಿಕೆಗಳ ಮೂಲಕವೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ‘ನ್ಯೂಸ್ ಆನ್ ಏರ್’ ಆ್ಯಪ್ ಮೂಲಕ ದೇಶದ ವಿವಿಧ ಆಕಾಶವಾಣಿ ವಾಹಿನಿಗಳನ್ನು ಸುಲಭವಾಗಿ ಆಲಿಸಬಹುದಾಗಿದೆ. ಪ್ರಸ್ತುತ ಆಕಾಶವಾಣಿ 23 ಭಾಷೆಗಳು ಮತ್ತು 183 ಉಪಭಾಷೆಗಳಲ್ಲಿ ಪ್ರಸಾರ ನಡೆಸುತ್ತಿದ್ದು, ವಿದೇಶಿ ಸೇವಾ ವಿಭಾಗವು 16 ವಿದೇಶಿ ಹಾಗೂ 11 ಭಾರತೀಯ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.

ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ ಜೈನ್, ಎಫ್‌ಎಂ ನೆಟ್‌ವರ್ಕ್ ವಿಸ್ತರಣೆ, ಸ್ಟುಡಿಯೋಗಳ ಆಧುನೀಕರಣ ಮತ್ತು ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ ಸಂಸ್ಥೆಯ ಪ್ರಮುಖ ಆದ್ಯತೆಗಳಾಗಿವೆ ಎಂದು ಹೇಳಿದರು. ಕಳೆದ ವರ್ಷ ವಿವಿಧ ರೇಡಿಯೋ ಕೇಂದ್ರಗಳನ್ನು ಪ್ರಾದೇಶಿಕ ವಾಹಿನಿಗಳಾಗಿ ಮರುಸಂಘಟಿಸಿ, ಅವುಗಳಿಗೆ ಆಡಳಿತಾತ್ಮಕ ಮತ್ತು ಹಣಕಾಸು ಅಧಿಕಾರಗಳನ್ನು ನೀಡಲಾಗಿದೆ. ಇದರಿಂದ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಲು ಹೆಚ್ಚಿನ ಸ್ವಾಯತ್ತತೆ ದೊರಕಿದೆ ಎಂದು ಅವರು ತಿಳಿಸಿದರು.

ಇದಲ್ಲದೆ, ಆಕಾಶವಾಣಿಯ ಬಳಿ ಸಂಗ್ರಹವಾಗಿರುವ ಅಪರೂಪದ ಸಂಗೀತ ಧ್ವನಿಮುದ್ರಣಗಳು, ಗಣ್ಯರ ಸಂದರ್ಶನಗಳು ಹಾಗೂ ಐತಿಹಾಸಿಕ ಘಟನೆಗಳ ಧ್ವನಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಅಮೂಲ್ಯ ಧ್ವನಿ ಸಂಪತ್ತನ್ನು ಯೂಟ್ಯೂಬ್, ವೆಬ್ ವೇದಿಕೆಗಳು ಹಾಗೂ ಒಟಿಟಿ ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸುವ ಯೋಜನೆ ರೂಪಿಸಲಾಗಿದೆ ಎಂದು ಜೈನ್ ತಿಳಿಸಿದರು.

90 ವರ್ಷಗಳ ಸುದೀರ್ಘ ಪಯಣದ ಬಳಿಕವೂ ಆಕಾಶವಾಣಿ ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುತ್ತಾ, ವಿಶ್ವಾಸಾರ್ಹ ಮಾಹಿತಿ ಮತ್ತು ಗುಣಮಟ್ಟದ ಕಾರ್ಯಕ್ರಮಗಳ ಮೂಲಕ ದೇಶದ ಜನರೊಂದಿಗೆ ತನ್ನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande