

ಬಳ್ಳಾರಿ, 30 ಜೂನ್ (ಹಿ.ಸ.) :
ಆ್ಯಂಕರ್ : ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಬಳ್ಳಾರಿ ನಗರದ ಕೋಟೆ ಪ್ರದೇಶದಲ್ಲಿರುವ ಸೇಂಟ್ ಜಾನ್ಸ್ ಶಾಲೆಯ ಮುಂಭಾಗದಲ್ಲಿ ನೂತನ ‘ನಂದಿನಿ ಏಕವಿನ್ಯಾಸ ಪಾರ್ಲರ್’ ಮಂಗಳವಾರ ಉದ್ಘಾಟಿಸಲಾಯಿತು.
ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರುಗಳಾದ ಅಮರಗುಂಡಪ್ಪ, ಐಗೋಳ ಚಿದಾನಂದ ಹಾಗೂ ನಾಗೇಶ್ವರರಾವ್ ಅವರು ಜಂಟಿಯಾಗಿ ನೂತನ ಪಾರ್ಲರ್ ಅನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅತಿಥಿಗಳು, ನಂದಿನಿ ಬ್ರಾ್ಯಂಡ್ ಅಡಿಯಲ್ಲಿ ಸದ್ಯ ಸುಮಾರು 160ಕ್ಕೂ ಅಧಿಕ ವೈವಿಧ್ಯಮಯ ಹಾಲಿನ ಉತ್ಪನ್ನಗಳು ಲಭ್ಯವಿದ್ದು, ಸಾರ್ವಜನಿಕರು ಹಾಗೂ ಗ್ರಾಹಕರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಭಾರ ವ್ಯವಸ್ಥಾಪಕ (ಮಾರುಕಟ್ಟೆ) ಎಸ್. ವೆಂಕಟೇಶ ಗೌಡ ಅವರು ಮಾತನಾಡಿ, ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಅವರು, ಹಾಲಿನಲ್ಲಿರುವ ಕ್ಯಾಲ್ಸಿಯಂ, ಪ್ರೋಟೀನ್ ಹಾಗೂ ವಿಟಮಿನ್-ಬಿ2 ನಂತಹ ಪ್ರಮುಖ ಪೋಷಕಾಂಶಗಳು ಆರೋಗ್ಯ ರಕ್ಷಣೆಗೆ ಹೇಗೆ ಸಹಕಾರಿ ಎಂಬುದನ್ನು ವಿವರಿಸಿದರು.
ಮಾನವನ ದೈನಂದಿನ ಜೀವನದಲ್ಲಿ ಹಾಲಿನ ಅಗತ್ಯತೆ ಮತ್ತು ಪ್ರಾಮುಖ್ಯತೆಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲು ಒಕ್ಕೂಟವು ಲಕ್ಷಾಂತರ ಹೈನುಗಾರರು ಹಾಗೂ ಗ್ರಾಹಕರನ್ನು ಒಳಗೊಂಡ ಬೃಹತ್ ಸಹಕಾರಿ ಸಂಸ್ಥೆಯಾಗಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ‘ಕ್ಷೀರಭಾಗ್ಯ’ ಮತ್ತು ‘ಕ್ಷೀರಧಾರೆ’ಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಾ ಬಂದಿರುವ ಒಕ್ಕೂಟವು, ಪ್ರತಿದಿನ ಸರಾಸರಿ 2.0 ಲಕ್ಷ ಲೀಟರ್ ಗುಣಮಟ್ಟದ ಹಾಲನ್ನು ಶೇಖರಿಸುತ್ತಿದೆ. ಇದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಪರಿಶುದ್ಧ ಹಾಗೂ ಕಲಬರಕೆ ರಹಿತ ನಂದಿನಿ ಹಾಲು ಮತ್ತು ಉತ್ಪನ್ನಗಳನ್ನು ಗ್ರಾಹಕರಿಗೆ ಸುರಕ್ಷಿತವಾಗಿ ತಲುಪಿಸಲಾಗುತ್ತಿದೆ ಎಂದು ಒಕ್ಕೂಟವು ತಿಳಿಸಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಮಾರುಕಟ್ಟೆ ಸಹಾಯಕರು (ದರ್ಜೆ-2) ಗಳಾದ ಲೋಹಿತಕುಮಾರ ಹಾಗೂ ಪ್ರಸನ್ನಕುಮಾರ, ಸಿಬ್ಬಂದಿಗಳಾದ ಸಿ.ಎನ್. ಮಂಜುನಾಥ, ಬಾಬು ಮತ್ತು ಪಾರ್ಲರ್ ಡೀಲರ್ ಆದ ಸಿದ್ದಾರ್ಥ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್