

ಕೊಪ್ಪಳ, 30 ಜೂನ್ (ಹಿ.ಸ.) :
ಆ್ಯಂಕರ್ : ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮುತುವರ್ಜಿ ವಹಿಸಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ತಮ್ಮ ಇಲಾಖಾವಾರು ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು ಎಂದು ಗೌರವಾನ್ವಿತ ಕೊಪ್ಪಳ ಜಿಲ್ಲೆಯ ಗಂಗಾವತಿ ಪೀಠದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೇದಮೂರ್ತಿ ಬಿ.ಎಸ್. ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಪೋಕ್ಸೋ ನ್ಯಾಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದ್ವೈಮಾಸಿಕ ಸಭೆಯಲ್ಲಿ ವರ್ಚುವಲ್ ವೇದಿಕೆ ಮೂಲಕ ಭಾಗವಹಿಸಿ ಅವರು ಮಾತನಾಡಿದರು.
ಜುಲೈ 11 ರಂದು ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್ ಮತ್ತು ಆಗಸ್ಟ್ ಮಾಹೆಯಲ್ಲಿ ಜರುಗುವ `ಸಮಾಧಾನ ಸಮಾರೋಹ' ವಿಶೇಷ ಲೋಕ್ ಅದಾಲತ್ ಹಾಗೂ ಈ ಎರಡು ತಿಂಗಳಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಸರ್ಕಾರದ ಸಹಕಾರ ಅತ್ಯವಶ್ಯಕವಾಗಿದ್ದು, ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.
ಜುಲೈ 30 ರಂದು ನಡೆಯುವ ``ಮಾನವ ಕಳ್ಳಸಾಗಣೆ ವಿರೋಧಿ ದಿನ'' ಆಚರಣೆಯನ್ನು ಡಿ.ಎಲ್.ಎಸ್.ಎ ಸಹಯೋಗದಲ್ಲಿ ಹಮ್ಮಿಕೊಂಡು ಸೂಕ್ತ ಕಾನೂನು ಅರಿವು ಮೂಡಿಸಬೇಕು. ಲೋಕ ಅದಾಲತ್ಗಳು ಮತ್ತು ಮಧ್ಯಸ್ಥಿಕೆಯ ಬಗ್ಗೆ ಮಧ್ಯವರ್ತಿಗಳಿಗೆ ಪುನರ್ ಮನನ, ಓರಿಯಂಟೇಶನ್ ಕೋರ್ಸ್ ಆಯೋಜಿಸಿ, ಜಾಗೃತಿ ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಿ. ``ಶಾಲೆಗೆ ಹಿಂತಿರುಗಿ'' ಎಂಬ ಧ್ಯೇಯದಡಿಯಲ್ಲಿ ಶಾಲೆ ಬಿಟ್ಟ ಮಕ್ಕಳ ಬಗ್ಗೆ ಮನೆ ಮನೆಗೆ ಅಭಿಯಾನ ನಡೆಸಬೇಕು. ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯದ ಮೇಲಾಗುವ ಪರಿಣಾಮ ಮತ್ತು ಡ್ರಗ್ಸ್ ನಿರ್ಮೂಲನಾ ಕಾಯ್ದೆಯ ಬಗ್ಗೆ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು. ಇದಲ್ಲದೇ ವಿಶೇಷವಾಗಿ ಪೋಕ್ಸೋ ಕಾಯ್ದೆ, ಜೆಜೆ ಕಾಯ್ದೆ ಕುರಿತು ಸಹ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತ್ವರಿತ ವಿಲೇವಾರಿ (ಪೋಕ್ಸೋ) ನ್ಯಾಯಾಲಯದ ಪ್ರಭಾರಿ ನ್ಯಾಯಾಧೀಶರು ಆಗಿರುವ ಕೊಪ್ಪಳ ಸಿಜೆಎಂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಲ್ಕಾರಿ ರಾಮಪ್ಪ ಒಡೆಯರ್ ಅವರು ಮಾತನಾಡಿ, ವಿಪತ್ತು ಸಂತ್ರಸ್ತರಿಗೆ ಕಾನೂನು ಸೇವೆಗಳ (ನಾಲ್ಸಾ) ಜಾಗೃತಿ ಅನುಷ್ಠಾನವನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್ ಕಾನೂನು ಸೇವಾ ಶಿಬಿರಗಳನ್ನು ಹಮ್ಮಿಕೊಳ್ಳಿ. ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು ಮತ್ತು ವಿಶೇಷ ಬಾಲಾಪರಾಧಿ ಪೆÇಲೀಸ್ ಘಟಕಕ್ಕೆ ಸಂವೇದನಾಶೀಲತಾ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಬೇಕೆಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಅವರು ಮಾತನಾಡಿ, ಸರ್ಕಾರದ ಪ್ರತಿಯೊಂದು ಯೋಜನೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ತಲುಪಿಸಿ, ಜನರಿಗೆ ಅನುಕೂಲತೆ ಕಲ್ಪಿಸಬೇಕು ಎಂಬುದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ನಾಲ್ಸಾ ಯೋಜನೆಗಳಾದ ಅಸಂಘಟಿತ ವಲಯದ ಕಾರ್ಮಿಕರಿಗೆ ಕಾನೂನು ಸೇವೆಗಳು, ಬಡತನ ನಿರ್ಮೂಲನಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಯೋಜನೆ, ಮಾನಸಿಕ ಅಸ್ವಸ್ಥರು ಮತ್ತು ಬೌದ್ಧಿಕ ವಿಕಲಚೇತನರಿಗೆ ಕಾನೂನು ಸೇವೆಗಳು, ಮಕ್ಕಳ ಹಕ್ಕುಗಳು, ಮಕ್ಕಳ ಸ್ನೇಹಿ ಕಾನೂನು ನೆರವು ಸೇವೆಗಳು, ಹಿರಿಯ ನಾಗರಿಕರಿಗೆ ಕಾನೂನು ಸೇವೆಗಳು, ಆಸಿಡ್ ದಾಳಿಯ ಸಂತ್ರಸ್ತರಿಗೆ ಕಾನೂನು ಸೇವೆಗಳು, ಮಾದಕ ವಸ್ತು ದುರುಪಯೋಗದ ಬಲಿಪಶುಗಳಿಗೆ ಕಾನೂನು ಸೇವೆಗಳು ಮತ್ತು ಮಾದಕ ವಸ್ತು ಭೀತಿಯ ನಿರ್ಮೂಲನೆ ಯೋಜನೆ, ಬುಡಕಟ್ಟು ಹಕ್ಕುಗಳ ರಕ್ಷಣೆ ಮತ್ತು ಜಾರಿ ಯೋಜನೆ, ಕಾನೂನು ಸೇವೆಗಳ ಪ್ರಾಧಿಕಾರಗಳ ಮೂಲಕ ವಿಪತ್ತು ಸಂತ್ರಸ್ತರಿಗೆ ಕಾನೂನು ಸೇವೆಗಳು, ಅಂಗವಿಕಲ ಮಕ್ಕಳಿಗಾಗಿ ಕಾನೂನು ಸೇವೆಗಳ ಯೋಜನೆ, ಬಾಲ್ಯ ವಿವಾಹ ನಿರ್ಮೂಲನೆ ಕಡೆಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನ, ಸಂವಾದ್ ಕಾರ್ಯಕ್ರಮದಡಿ ದುರ್ಬಲ ಆದಿವಾಸಿಗಳು ಮತ್ತು ಅಧಿಸೂಚಿತ, ಅಲೆಮಾರಿ ಬುಡಕಟ್ಟು ಜನಾಂಗದವರಿಗೆ ನ್ಯಾಯದ ಪ್ರವೇಶವನ್ನು ಬಲಪಡಿಸುವ ಯೋಜನೆ, ಹೀಗೆ ವಿವಿಧ ಯೋಜನೆಗಳು ಜಾರಿಯಲ್ಲಿವೆ. ನಾಲ್ಸಾದ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ನಡೆಸಲು ನಮ್ಮೊಂದಿಗೆ ಸಹಕರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕೊಪ್ಪಳ ಸಹಾಯಕ ಆಯುಕ್ತರಾದ ಮಹೆಬೂಬ್ ಜೀಲಾನಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಟಿ.ಕೃಷ್ಣಮೂರ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಹೇಮಂತ ಕುಮಾರ್, ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಕೀಲರು, ನ್ಯಾಯಾಲಯದ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್