ಪಂಚ ನದಿಗಳ ನಾಡಿನಲ್ಲಿ ಹಸಿರಿನ ಕ್ರಾಂತಿ ; ಕೋಟಿ ವೃಕ್ಷ ಅಭಿಯಾನದಿಂದ ಬದಲಾದ ವಿಜಯಪುರದ ಚಿತ್ರಣ
ವಿಜಯಪುರ, 28 ಜೂನ್ (ಹಿ.ಸ.) : ಆಂಕರ್ : ಒಂದು ಕಾಲದಲ್ಲಿ ಪಂಚ ನದಿಗಳು ಹರಿದರೂ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ವಿಜಯಪುರ ಜಿಲ್ಲೆ ಇಂದು ನೀರಾವರಿ ಅಭಿವೃದ್ಧಿ ಹಾಗೂ ಹಸಿರು ಕ್ರಾಂತಿಯ ಮೂಲಕ ದೇಶದ ಗಮನ ಸೆಳೆಯುತ್ತಿದೆ. ಬರಡು ನಾಡು ಎಂಬ ಹಣೆಪಟ್ಟಿ ಹೊತ್ತಿದ್ದ ಜಿಲ್ಲೆ ಇದೀಗ ಹಸಿರು ಹೊದಿಕೆಯಲ್ಲಿ
ಹಸಿರು


ವಿಜಯಪುರ, 28 ಜೂನ್ (ಹಿ.ಸ.) :

ಆಂಕರ್ : ಒಂದು ಕಾಲದಲ್ಲಿ ಪಂಚ ನದಿಗಳು ಹರಿದರೂ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ವಿಜಯಪುರ ಜಿಲ್ಲೆ ಇಂದು ನೀರಾವರಿ ಅಭಿವೃದ್ಧಿ ಹಾಗೂ ಹಸಿರು ಕ್ರಾಂತಿಯ ಮೂಲಕ ದೇಶದ ಗಮನ ಸೆಳೆಯುತ್ತಿದೆ. ಬರಡು ನಾಡು ಎಂಬ ಹಣೆಪಟ್ಟಿ ಹೊತ್ತಿದ್ದ ಜಿಲ್ಲೆ ಇದೀಗ ಹಸಿರು ಹೊದಿಕೆಯಲ್ಲಿ ಕಂಗೊಳಿಸುತ್ತಿದ್ದು, ಪರಿಸರ ಸಂರಕ್ಷಣೆಯ ಮಾದರಿ ಜಿಲ್ಲೆಯಾಗಿ ಹೊರಹೊಮ್ಮುತ್ತಿದೆ.

ನೀರಾವರಿ ಯೋಜನೆಗಳ ಜೊತೆಗೆ ಕೋಟಿ ವೃಕ್ಷ ಅಭಿಯಾನ ಜಿಲ್ಲೆಯ ಪರಿಸರ ಚಿತ್ರಣವನ್ನೇ ಬದಲಿಸಿದೆ. ರಾಜ್ಯದಲ್ಲಿಯೇ ಅತೀ ಕಡಿಮೆ ಅರಣ್ಯ ಪ್ರದೇಶ ಹೊಂದಿದ್ದ ಜಿಲ್ಲೆ ಎಂಬ ಅಪಖ್ಯಾತಿಗೆ ಒಳಗಾಗಿದ್ದ ವಿಜಯಪುರ, ಇಂದು ಕಡಿಮೆ ಮಾಲಿನ್ಯ ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಸಿದ್ದೇಶ್ವರ ಶ್ರೀಗಳ ಪ್ರಕೃತಿ ಪ್ರೇಮಕ್ಕೆ ಸ್ಮರಣೆಯಾದ ಹಸಿರು ತಾಣ

ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನಗಳಲ್ಲಿ ಪ್ರಕೃತಿ, ಪರಿಸರ ಹಾಗೂ ಪಕ್ಷಿಗಳ ಕುರಿತ ವಿಚಾರಗಳಿಗೆ ವಿಶೇಷ ಸ್ಥಾನವಿತ್ತು. ಪ್ರಕೃತಿಯ ಮೇಲಿನ ಅವರ ಅಪಾರ ಪ್ರೀತಿಯನ್ನು ಸ್ಮರಿಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಅರಣ್ಯ ಬೆಳೆಸುವ ಪರಿಕಲ್ಪನೆಗೆ ಚಾಲನೆ ದೊರೆಯಿತು.

ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಈಗಾಗಲೇ ಆರಂಭವಾಗಿದ್ದ ಅರಣ್ಯೀಕರಣ ಕಾರ್ಯಕ್ಕೆ ಮತ್ತಷ್ಟು ವೇಗ ದೊರೆಯಿತು. ಸಚಿವ ಎಂ.ಬಿ. ಪಾಟೀಲ ಅವರು ಮಮದಾಪುರ ಅರಣ್ಯ ಪ್ರದೇಶಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಹೆಸರಿಡುವಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಅದರಂತೆ ಕರ್ನಾಟಕ ಸರ್ಕಾರವು ಮಮದಾಪುರ ಅರಣ್ಯ ಪ್ರದೇಶವನ್ನು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಜೀವವೈವಿಧ್ಯ ಪರಂಪರೆ ತಾಣ ಎಂದು ಘೋಷಿಸಿದೆ.

1494 ಎಕರೆ ಪ್ರದೇಶದಲ್ಲಿ ರೂಪುಗೊಳ್ಳುತ್ತಿರುವ ಜೀವವೈವಿಧ್ಯ ತಾಣ

ಮಮದಾಪುರ ಅರಣ್ಯ ಪ್ರದೇಶವು ಸುಮಾರು 1494 ಎಕರೆ ವಿಸ್ತೀರ್ಣದಲ್ಲಿ ವಿಶಾಲವಾದ ಅರಣ್ಯ ಹಾಗೂ ಜೀವವೈವಿಧ್ಯ ತಾಣವಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ವಿವಿಧ ಜಾತಿಯ ಸಸ್ಯ ಸಂಪತ್ತು ಬೆಳೆಯುತ್ತಿದ್ದು, ಪಶು-ಪಕ್ಷಿಗಳಿಗೆ ಆಶ್ರಯ ತಾಣವಾಗುತ್ತಿದೆ.

ವಿಜಯಪುರ ಪ್ರಾದೇಶಿಕ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಆಲಮಟ್ಟಿ ಕೆಬಿಜೆಎನ್ಎಲ್ ಅರಣ್ಯ ವಿಭಾಗಗಳು ಕೈಜೋಡಿಸಿ ಈ ಯೋಜನೆಯನ್ನು ಮುನ್ನಡೆಸುತ್ತಿವೆ. ಕೂಡಗಿ ಎನ್ಟಿಪಿಸಿ ಸಂಸ್ಥೆಯ ಆರ್ಥಿಕ ನೆರವು ಕೂಡ ಅರಣ್ಯ ಅಭಿವೃದ್ಧಿಗೆ ಪ್ರಮುಖ ಬಲವಾಗಿದೆ.

ಹಸಿರಿನಿಂದ ಕಂಗೊಳಿಸುತ್ತಿರುವ ಮಮದಾಪುರ ಕಾಡು

ಮಮದಾಪುರ ಅರಣ್ಯ ಪ್ರದೇಶದಲ್ಲಿ ಮಾವು, ಬಿದಿರು, ಬೇವು, ಹುಣಸೆ ಸೇರಿದಂತೆ ಹಲವು ತಳಿಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಇಂದು ಈ ಪ್ರದೇಶದಲ್ಲಿ ಪಕ್ಷಿಗಳ ಚಿಲಿಪಿಲಿ, ಹಸಿರಿನ ವಾತಾವರಣ ಹಾಗೂ ಜೀವವೈವಿಧ್ಯದ ಸೊಬಗು ಕಾಣಸಿಗುತ್ತಿದೆ.

ಅರಣ್ಯ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಜೇನು ಕೃಷಿಗೂ ಉತ್ತೇಜನ ನೀಡಲಾಗುತ್ತಿದ್ದು, ಪರಿಸರ ಸಂರಕ್ಷಣೆಯ ಜೊತೆಗೆ ಸ್ಥಳೀಯರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ.

ಧೂಳಾಪುರದಿಂದ ಹಸಿರು ವಿಜಯಪುರದತ್ತ ಪಯಣ

ಸಚಿವ ಎಂ.ಬಿ. ಪಾಟೀಲ ಅವರ ನೀರಾವರಿ ಯೋಜನೆಗಳ ಜೊತೆಗೆ ದೂರದೃಷ್ಟಿಯ ಕೋಟಿ ವೃಕ್ಷ ಅಭಿಯಾನ ವಿಜಯಪುರ ಜಿಲ್ಲೆಯ ಪರಿಸರ ಪರಿವರ್ತನೆಗೆ ಕಾರಣವಾಗಿದೆ. ಒಮ್ಮೆ ಧೂಳಿನಿಂದ ಕೂಡಿದ್ದ ಜಿಲ್ಲೆ ಇಂದು ಹಸಿರು ವಾತಾವರಣದತ್ತ ಸಾಗುತ್ತಿದೆ.

ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) ವಿಜಯಪುರ ಜಿಲ್ಲೆ ಕಡಿಮೆ ಮಾಲಿನ್ಯ ಹೊಂದಿರುವ ಪ್ರದೇಶಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ವಿಜಯಪುರದ AQI 16 ಹಾಗೂ ಚನ್ನರಾಯಪಟ್ಟಣದ AQI 17 ದಾಖಲಾಗಿದ್ದು, ಕರ್ನಾಟಕದ ಪರಿಸರ ಸಾಧನೆಗೆ ಹೊಸ ಹೆಮ್ಮೆ ತಂದಿದೆ.

ನೀರಿನ ಕೊರತೆ, ಬರಡು ಭೂಮಿ ಹಾಗೂ ಧೂಳಿನ ಸಮಸ್ಯೆಯಿಂದ ಬಳಲುತ್ತಿದ್ದ ವಿಜಯಪುರ ಇದೀಗ ನೀರಾವರಿ ಮತ್ತು ಅರಣ್ಯೀಕರಣದ ಸಮನ್ವಯದಿಂದ ಹೊಸ ಅಧ್ಯಾಯ ಬರೆಯುತ್ತಿದೆ. ಕೋಟಿ ವೃಕ್ಷ ಅಭಿಯಾನವು ವಿಜಯಪುರವನ್ನು ಕೇವಲ ಹಸಿರಾಗಿಸಿಲ್ಲ, ಬದಲಾಗಿ ಪರಿಸರ ಸಂರಕ್ಷಣೆಯ ಮಾದರಿ ಜಿಲ್ಲೆಯನ್ನಾಗಿ ರೂಪಿಸುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande