
ನವದೆಹಲಿ, 27 ಜೂನ್ (ಹಿ.ಸ.) :
ಆ್ಯಂಕರ್ : ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ‘ವಿಕಸಿತ ಭಾರತ-2047’ ನಿರ್ಮಾಣದ ಭಾರತದ ಪಯಣದ ಬೆನ್ನೆಲುಬಾಗಿದ್ದು, ದೇಶದ ಆರ್ಥಿಕ ಪ್ರಗತಿಯಲ್ಲಿ ಅವುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದ್ದಾರೆ.
ನವದೆಹಲಿದಲ್ಲಿರುವ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶನಿವಾರ ನಡೆದ ‘ಎಂಎಸ್ಎಂಇ ದಿನ–2026: ಉದ್ಯಮಿ ಭಾರತ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಉದ್ಯಮದ ಬೆಳವಣಿಗೆಯಲ್ಲಿ ಗುಣಮಟ್ಟದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಒತ್ತಿ ಹೇಳಿದರು.
ಎಂಎಸ್ಎಂಇಗಳ ದೀರ್ಘಕಾಲೀನ ಯಶಸ್ಸಿಗೆ ನಾವೀನ್ಯತೆ, ತಂತ್ರಜ್ಞಾನ ಅಳವಡಿಕೆ ಹಾಗೂ ನಿರಂತರ ಕಲಿಕೆ ಅತ್ಯಗತ್ಯವಾಗಿದೆ. ಉದ್ಯಮಿಗಳು ಕೃತಕ ಬುದ್ಧಿಮತ್ತೆ (ಎಐ)ಯನ್ನು ಅಪಾಯವಾಗಿ ನೋಡದೆ, ಬೆಳವಣಿಗೆಗೆ ದೊರೆತಿರುವ ಹೊಸ ಅವಕಾಶವೆಂದು ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು.
ತಮ್ಮ ಉದ್ಯಮಶೀಲತಾ ಪಯಣವನ್ನು ಸ್ಮರಿಸಿದ ಉಪರಾಷ್ಟ್ರಪತಿ, ಪದವಿ ಶಿಕ್ಷಣದ ಬಳಿಕ ತಂದೆಯ ಆರ್ಥಿಕ ನೆರವಿನಿಂದ ಸಣ್ಣ ಮಟ್ಟದಲ್ಲಿ ಬಟ್ಟೆ ವ್ಯಾಪಾರ ಆರಂಭಿಸಿದ್ದಾಗಿ ಹೇಳಿದರು. ನಿರಂತರ ಪರಿಶ್ರಮ, ಕಲಿಕೆಯ ಮನೋಭಾವ ಮತ್ತು ದೃಢ ಸಂಕಲ್ಪದಿಂದ ಸಾರ್ವಜನಿಕ ಜೀವನಕ್ಕೆ ಬರುವ ಮುನ್ನವೇ ನಿಟ್ವೇರ್ ರಫ್ತು ಕ್ಷೇತ್ರದಲ್ಲಿ ದೊಡ್ಡ ಉದ್ಯಮವನ್ನು ಕಟ್ಟಲು ಸಾಧ್ಯವಾಯಿತು ಎಂದು ತಿಳಿಸಿದರು.
ಯುವ ಉದ್ಯಮಿಗಳಿಗೆ ಆರಂಭಿಕ ಸವಾಲುಗಳಿಂದ ನಿರಾಶರಾಗದೆ, ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಪರಿಣತಿ ಗಳಿಸಲು ಶ್ರಮಿಸುವಂತೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ದೇಶಾದ್ಯಂತ ಎಂಎಸ್ಎಂಇಗಳನ್ನು ಮತ್ತಷ್ಟು ಸಬಲಗೊಳಿಸುವ ಉದ್ದೇಶದಿಂದ ಹಲವು ಡಿಜಿಟಲ್ ವೇದಿಕೆಗಳು ಮತ್ತು ಪೋರ್ಟಲ್ಗಳಿಗೆ ಉಪರಾಷ್ಟ್ರಪತಿ ಚಾಲನೆ ನೀಡಿದರು. ಅವುಗಳಲ್ಲಿ ಪಿಎಂಇಜಿಪಿ 2.0 ಪೋರ್ಟಲ್, ಸಮಾಧಾನ 2.0 ಪೋರ್ಟಲ್, ಪಿಎಂಎಸ್ ಪೋರ್ಟಲ್, ಎಂಎಸ್ಎಂಇ ಗ್ಲೋಬಲ್ ಮಾರ್ಟ್ 2.0, ಎಂಎಸ್ಎಂಇ ಟೆಸ್ಟಿಂಗ್ ಪೋರ್ಟಲ್ ಹಾಗೂ ಎಂಎಸ್ಎಂಇ ಐಡಿಯಾ ಹ್ಯಾಕಥಾನ್ 6.0 ಪ್ರಮುಖವಾಗಿವೆ.
ಕಾರ್ಯಕ್ರಮದಲ್ಲಿ ಕೇಂದ್ರ ಎಂಎಸ್ಎಂಇ ಸಚಿವ ಜೀತನ್ ರಾಮ್ ಮಾಂಝಿ, ರಾಜ್ಯ ಸಚಿವ ಶೋಭಾ ಕರಂದ್ಲಾಜೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್, ಸಚಿವಾಲಯದ ಹಿರಿಯ ಅಧಿಕಾರಿಗಳು, ಕೈಗಾರಿಕಾ ವಲಯದ ಪ್ರತಿನಿಧಿಗಳು, ಮಹಿಳಾ ಉದ್ಯಮಿಗಳು, ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ತಜ್ಞರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.