
ನವದೆಹಲಿ, 27 ಜೂನ್ (ಹಿ.ಸ.) :
ಆ್ಯಂಕರ್ : 1975ರಲ್ಲಿ ದೇಶದಲ್ಲಿ ಹೇರಲಾದ ತುರ್ತು ಪರಿಸ್ಥಿತಿ ಆಂತರಿಕ ಭದ್ರತೆಯ ಕಾರಣದಿಂದಲ್ಲ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ತೆಗೆದುಕೊಂಡ ರಾಜಕೀಯ ನಿರ್ಧಾರವಾಗಿತ್ತು ಎಂದು ಹಿರಿಯ ಪತ್ರಕರ್ತ ಹಾಗೂ ತುರ್ತು ಪರಿಸ್ಥಿತಿಯ ವೇಳೆ ಬಂಧಿಯಾಗಿದ್ದ ರಾಮಬಹಾದುರ್ ರಾಯ್ ಹೇಳಿದ್ದಾರೆ.
ದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ 'ಪ್ರಜ್ಞಾ ಪ್ರವಾಹ' ಮತ್ತು 'ಜಿಜ್ಞಾಸಾ' ಸಂಸ್ಥೆಗಳು ತುರ್ತು ಪರಿಸ್ಥಿತಿಯ 50 ವರ್ಷಗಳ ಅಂಗವಾಗಿ ಆಯೋಜಿಸಿದ್ದ 'ಸಂವಾದ: ತುರ್ತು ಪರಿಸ್ಥಿತಿಯ ಪಾಠಗಳು' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹಾಗೂ ಲೇಖಕ ಅಜಯ್ ಸೇತಿಯಾ ಅವರ 'ಆಪಾತ್ಕಾಲ್: ಆಂದೋಲನ ಔರ್ ವಿಶ್ವಾಸಘಾತ್ ಕೀ ಅಂತರಕಥಾ' ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಈ ವೇಳೆ ರಾಮಬಹಾದುರ್ ರಾಯ್ ಅವರು ಮಾತನಾಡಿ, 1975ರ ಜೂನ್ 25ರಂದು ಹೇರಲಾದ ತುರ್ತು ಪರಿಸ್ಥಿತಿ ದೇಶದ ಆಂತರಿಕ ಭದ್ರತೆಯ ಕಾರಣದಿಂದಲ್ಲ, ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಮತ್ತು ನಂತರ ಭಾರತದ ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಜಾರಿಗೊಂಡಿತ್ತು ಎಂದು ಹೇಳಿದರು.
ಅಲಹಾಬಾದ್ ಹೈಕೋರ್ಟ್ ತೀರ್ಪಿನ ನಂತರ ಇಂದಿರಾ ಗಾಂಧಿ ಲೋಕಸಭಾ ಸದಸ್ಯತ್ವ ಕಳೆದುಕೊಂಡಿದ್ದರೂ, ಸುಪ್ರೀಂ ಕೋರ್ಟ್ನ ಅಂತಿಮ ತೀರ್ಪು ಬರುವವರೆಗೆ ಪ್ರಧಾನಿಯಾಗಿ ಮುಂದುವರಿಯಲು ಅವಕಾಶವಿತ್ತು. ಆದರೆ ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ತುರ್ತು ಪರಿಸ್ಥಿತಿ ಘೋಷಿಸಿ, ಪ್ರತಿ ಪಕ್ಷದ ನಾಯಕರನ್ನು ಬಂಧಿಸಲಾಯಿತು. ನಂತರ ಸಂವಿಧಾನ ತಿದ್ದುಪಡಿ ಮೂಲಕ ತಮ್ಮ ವಿರುದ್ಧದ ತೀರ್ಪಿಗೆ ಕಾರಣವಾದ ಕಾನೂನುಗಳನ್ನೇ ಬದಲಾಯಿಸಲಾಯಿತು. ಹೀಗಾಗಿ ತುರ್ತು ಪರಿಸ್ಥಿತಿ ಸಂಪೂರ್ಣವಾಗಿ ರಾಜಕೀಯ ಕಾರಣಕ್ಕಾಗಿ ತೆಗೆದುಕೊಂಡ ನಿರ್ಧಾರವಾಗಿತ್ತು ಎಂದು ಅವರು ಪ್ರತಿಪಾದಿಸಿದರು.
ಆ ಸಂದರ್ಭದಲ್ಲಿ ದೇಶದ ಆಂತರಿಕ ಭದ್ರತೆಗೆ ಗಂಭೀರ ಅಪಾಯವಿದೆ ಎಂಬ ಸರ್ಕಾರದ ವಾದ ವಾಸ್ತವಕ್ಕೆ ದೂರವಾಗಿತ್ತು. ರೈಲ್ವೆ ನೌಕರರ ಪ್ರತಿಭಟನೆ ಅಂತ್ಯ ಹಂತದಲ್ಲಿತ್ತು ಮತ್ತು ಜಯಪ್ರಕಾಶ್ ನಾರಾಯಣ ನೇತೃತ್ವದ ಚಳವಳಿಯೂ ದೇಶದ ಭದ್ರತೆಗೆ ಧಕ್ಕೆಯಾಗುವ ಮಟ್ಟದಲ್ಲಿರಲಿಲ್ಲ ಎಂದು ರಾಮಬಹಾದುರ್ ರಾಯ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಜಯ್ ಸೇತಿಯಾ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರೇ ಅವರು ಶಾ ಆಯೋಗದ ಮುಂದೆ, ಜಯಪ್ರಕಾಶ್ ನಾರಾಯಣರ ಭಾಷಣಕ್ಕೂ ಮುನ್ನವೇ ತುರ್ತು ಪರಿಸ್ಥಿತಿ ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಒಪ್ಪಿಕೊಂಡಿದ್ದರು ಎಂದು ಹೇಳಿದರು. ಅಲ್ಲದೆ, ರಾಷ್ಟ್ರಪತಿಗಳ ಅನುಮತಿ ಪಡೆಯುವ ವೇಳೆ ವಾಸ್ತವಾಂಶಗಳನ್ನು ಮರೆಮಾಚಲಾಗಿತ್ತು ಎಂದು ಆರೋಪಿಸಿದರು.
ತುರ್ತು ಪರಿಸ್ಥಿತಿ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕಠಿಣ ಅವಧಿಯಾಗಿತ್ತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರ ಹೋರಾಟ ಮತ್ತು ಭೂಗತ ಚಟುವಟಿಕೆಗಳನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಲಾಗಿದೆ ಎಂದು ಅಜಯ್ ಸೇತಿಯಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರಾಜಕುಮಾರ್ ಭಾಟಿಯಾ, ತುರ್ತು ಪರಿಸ್ಥಿತಿಯ ಇತಿಹಾಸವನ್ನು ಹೊಸ ತಲೆಮಾರಿಗೆ ವಾಸ್ತವಾಂಶಗಳೊಂದಿಗೆ ತಲುಪಿಸುವುದು ಅಗತ್ಯವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಲು ಇತಿಹಾಸದಿಂದ ಪಾಠ ಕಲಿಯುವುದು ಅನಿವಾರ್ಯವಾಗಿದ್ದು, ಪ್ರಜಾಪ್ರಭುತ್ವವು ಕೇವಲ ಸಂವಿಧಾನಾತ್ಮಕ ವ್ಯವಸ್ಥೆಯಿಂದ ಮಾತ್ರವಲ್ಲ, ನಾಗರಿಕರ ಜಾಗೃತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಿಂದಲೂ ಬಲಗೊಳ್ಳುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪತ್ರಕರ್ತರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ, ತುರ್ತು ಪರಿಸ್ಥಿತಿಯ ಐತಿಹಾಸಿಕ ಅನುಭವಗಳು ಮತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳ ಕುರಿತು ವಿಚಾರ ವಿನಿಮಯ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.