ಮಕ್ಕಳನ್ನು ಪುನಃ ಶಾಲೆಗೆ ಸೇರಿಸಲು ವಿಶೇಷ ಅಭಿಯಾನ
ಗದಗ, 25 ಜೂನ್ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯ ನರಗುಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಅವರು ಇಂದು ಶಿರೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೇಟಿ ನೀಡಿ ಆಡಳಿತಾತ್ಮಕ ಸೇವೆಗಳು ಮತ್ತು ದಾಖಲಾ
ಫೋಟೋ


ಗದಗ, 25 ಜೂನ್ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯ ನರಗುಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಅವರು ಇಂದು ಶಿರೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೇಟಿ ನೀಡಿ ಆಡಳಿತಾತ್ಮಕ ಸೇವೆಗಳು ಮತ್ತು ದಾಖಲಾತಿಗಳ ಪರಿಶೀಲನೆ ನಡೆಸಿದರು.

ಶಿರೋಳ ಗ್ರಾಪಂ ವ್ಯಾಪ್ತಿಯ ಕಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರೌಢ ಶಾಲೆಗೆ ಭೇಟಿ ನೀಡಿದ ಅವರು, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಹಾಜರಾತಿಯನ್ನು ಪರಿಶೀಲಿಸಿದರು. ಈ ವೇಳೆ ಐವರು ವಿದ್ಯಾರ್ಥಿಗಳು ದೀರ್ಘಾವಧಿಯಿಂದ ಶಾಲೆಗೆ ಗೈರಾಗಿರುವುದು ಅವರ ಗಮನಕ್ಕೆ ಬಂದಿತು.

ತಕ್ಷಣವೇ ನರಗುಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ಇಓ ಶ್ರೀಧರ್ ಚಿನಗುಂಡಿ ಅವರು, ಗೈರುಹಾಜರಾಗಿರುವ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜೊತೆಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡಿದರು.

ಇಓ ಅವರ ಸೂಚನೆಗೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕಿನಾದ್ಯಂತ ವಿಶೇಷ ಅಭಿಯಾನ ನಡೆಸಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ದಾಖಲಿಸುವ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.

ಭೇಟಿಯ ವೇಳೆ ಶಾಲೆಯಲ್ಲಿಯೇ ಮಧ್ಯಾಹ್ನದ ಬಿಸಿಯೂಟ ಸವಿದ ಇಓ ಅವರು, ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಅಡುಗೆ ಕೊಠಡಿಗೆ ಭೇಟಿ ನೀಡಿ ಆಹಾರ ಸಾಮಗ್ರಿಗಳ ಸಂಗ್ರಹಣೆ ಮತ್ತು ಶುಚಿತ್ವವನ್ನು ಪರಿಶೀಲಿಸಿ, ಅಡುಗೆ ಸಿಬ್ಬಂದಿಗೆ ಮನೆಯ ಮಕ್ಕಳಿಗೆ ಸಿದ್ಧಪಡಿಸುವ ರೀತಿಯಲ್ಲಿಯೇ ಶಾಲಾ ಮಕ್ಕಳಿಗೂ ಗುಣಮಟ್ಟದ ಆಹಾರವನ್ನು ತಯಾರಿಸಬೇಕು ಎಂದು ಸೂಚಿಸಿದರು.

ಶಾಲೆಯ ಶಿಕ್ಷಕರ ಚಲನವಲನ ಪುಸ್ತಕ, ಅಡುಗೆ ಸಿಬ್ಬಂದಿಯ ಸಾಮಗ್ರಿಗಳ ಸ್ಟಾಕ್ ರಿಜಿಸ್ಟರ್ಗಳನ್ನು ಪರಿಶೀಲಿಸಿದ ಅವರು, ಎಲ್ಲ ದಾಖಲಾತಿಗಳನ್ನು ನಿಯಮಿತವಾಗಿ ನವೀಕರಿಸಿಕೊಂಡು ಇರಬೇಕೆಂದು ತಿಳಿಸಿದರು.

ನಂತರ ಶಾಲಾ ಮೈದಾನದ ಕಾಂಪೌಂಡ್ ಗೋಡೆ ಕಾಮಗಾರಿ ಹಾಗೂ ಶಿರೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲು ಹೊಸ ಗಟಾರ್ ಕಾಮಗಾರಿಯ ಸ್ಥಳವನ್ನು ಪರಿಶೀಲಿಸಿದರು. ಬಳಿಕ ನರೇಗಾ ಯೋಜನೆಯಡಿ ನಿರ್ಮಿಸಲಾದ ಸ್ಮಶಾನ ಅಭಿವೃದ್ಧಿ ಕಾಮಗಾರಿಯ ಚಿತಾಗಾರವನ್ನು ವೀಕ್ಷಿಸಿದರು.

ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿ ಕಾರ್ಯಕರ್ತೆಯರ ಹಾಜರಾತಿ ಪುಸ್ತಕ ಹಾಗೂ ಪೌಷ್ಟಿಕ ಆಹಾರ ಮತ್ತು ರೇಷನ್ ದಾಸ್ತಾನು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದರು.

ಬಳಿಕ ಶಿರೋಳ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ಅವರು, ಸಿಬ್ಬಂದಿಗಳ ಹಾಜರಾತಿ ಪುಸ್ತಕ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಶಿರೋಳ ಗ್ರಾಮ ಪಂಚಾಯಿತಿ ಪಿಡಿಓ ಮಲ್ಲಪ್ಪ ವಾಲಿ, ನರೇಗಾ ತಾಂತ್ರಿಕ ಸಂಯೋಜಕ ಹನಮಂತ ಡಂಬಳ, ತಾಂತ್ರಿಕ ಸಹಾಯಕ ವೀರಯ್ಯ ಶಹಾಪುರ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande