
ಗದಗ, 25 ಜೂನ್ (ಹಿ.ಸ.) :
ಆ್ಯಂಕರ್ : ಸಂಘಟನೆ ಬಲವರ್ಧನೆ, ಕಾರ್ಯಕರ್ತರ ರಾಜಕೀಯ-ಸಾಮಾಜಿಕ ಜಾಗೃತಿ ಹಾಗೂ ದೇಶದ ಅಭಿವೃದ್ಧಿ ದೃಷ್ಟಿಕೋನವನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ವತಿಯಿಂದ ಆಯೋಜಿಸಲಾದ ಪಂ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ–2026 ರ ಸಮಾರೋಪ ಸಭೆ ಗದಗ ನಗರದ ವಿಮಲ್ ರೆಸಾರ್ಟ್ನಲ್ಲಿ ಭವ್ಯವಾಗಿ ನಡೆಯಿತು.
ಈ ಮಹತ್ವದ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ನಾಯಕರು, ಜನಪ್ರತಿನಿಧಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿ ಸಂಘಟನಾ ಶಕ್ತಿ, ಸರ್ಕಾರದ ಯೋಜನೆಗಳು ಹಾಗೂ ಭವಿಷ್ಯದ ಅಭಿವೃದ್ಧಿ ದೃಷ್ಟಿಕೋನದ ಕುರಿತು ಚರ್ಚೆ ನಡೆಸಿದರು.
ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವರು ಹಾಗೂ ಶಾಸಕರಾದ ಸುರೇಶಕುಮಾರ ಅವರು ಮಾತನಾಡಿ, ಭಾರತೀಯ ಜನತಾ ಪಾರ್ಟಿ ಸದಾ “ಸೇವೆಯೇ ಸಂಕಲ್ಪ” ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಜನಪರ ಯೋಜನೆಗಳು ಸಮಾಜದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಬದಲಾವಣೆಯನ್ನು ತಂದಿವೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೋಟ್ಯಾಂತರ ಕುಟುಂಬಗಳಿಗೆ ಮನೆ ದೊರೆತಿದೆ, ಸ್ವನಿಧಿ ಯೋಜನೆಯ ಮೂಲಕ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಬಲ ಸಿಕ್ಕಿದೆ, ಮುದ್ರಾ ಯೋಜನೆಯಡಿ ಲಕ್ಷಾಂತರ ಯುವಕರಿಗೆ ಸ್ವಯಂ ಉದ್ಯೋಗ ಅವಕಾಶ ಸೃಷ್ಟಿಯಾಗಿದೆ ಎಂದು ಅವರು ವಿವರಿಸಿದರು. ಜೊತೆಗೆ ಶೌಚಾಲಯ ನಿರ್ಮಾಣದಂತಹ ಮೂಲಸೌಕರ್ಯ ಯೋಜನೆಗಳು ಗ್ರಾಮೀಣ ಭಾರತದಲ್ಲಿ ಸಾಮಾಜಿಕ ಗೌರವ ಹಾಗೂ ಆರೋಗ್ಯ ಸುಧಾರಣೆಗೆ ಕಾರಣವಾಗಿವೆ ಎಂದು ಅವರು ಹೇಳಿದರು.
ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವೂ ಬದಲಾಗುತ್ತಿದೆ ಎಂದು ಹೇಳಿದ ಅವರು, ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಗಳ ಮಧ್ಯೆಯೂ ಭಾರತವು ಶಾಂತಿ, ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಸಂಕೇತವಾಗಿ ಹೊರಹೊಮ್ಮುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು. ಅವರ ನಿರಂತರ ಪರಿಶ್ರಮ ಮತ್ತು ಬಡವರ ಬದುಕಿನಲ್ಲಿ ಸಂತೋಷ ತರಲು ಹೊಂದಿರುವ ಬದ್ಧತೆ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿಕಸಿತ ಭಾರತ ನಿರ್ಮಾಣದ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರವನ್ನು ವಿಶೇಷವಾಗಿ ಬಲಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ರೈತರ ಸಾಂಪ್ರದಾಯಿಕ ಜ್ಞಾನ, ವೈಜ್ಞಾನಿಕ ತಂತ್ರಜ್ಞಾನ ಹಾಗೂ ಸರ್ಕಾರದ ಬೆಂಬಲ ಒಂದೇ ವೇದಿಕೆಯಲ್ಲಿ ಸೇರಿದಾಗ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅವರು ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಂಘಟನಾ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಮಾ. ನಾಗರಾಜ, ಮಾಜಿ ಸಚಿವ ಹಾಗೂ ಶಾಸಕರಾದ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕರಾದ ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಎಸ್. ವ್ಹಿ. ಸಂಕನೂರ, ಮಾಜಿ ಸಚಿವರಾದ ಕಳಕಪ್ಪ ಜಿ. ಬಂಡಿ, ರಾಜ್ಯ ಪ್ರಶಿಕ್ಷಣ ಸಂಚಾಲಕರಾದ ನಾಗಮೂರ್ತಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಅನೇಕ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಪಕ್ಷದ ಸಂಘಟನಾ ಬಲ, ಭವಿಷ್ಯದ ಕಾರ್ಯಯೋಜನೆಗಳು, ಗ್ರಾಮೀಣ ಮಟ್ಟದ ಸಂಪರ್ಕ ವಿಸ್ತರಣೆ ಹಾಗೂ ಜನಪರ ಯೋಜನೆಗಳ ತಲುಪುವಿಕೆ ಕುರಿತು ಚರ್ಚೆಗಳು ನಡೆದವು. ಕಾರ್ಯಕರ್ತರಲ್ಲಿ ಹೊಸ ಉತ್ಸಾಹ, ಶಿಸ್ತು ಮತ್ತು ರಾಜಕೀಯ ಜಾಗೃತಿ ಮೂಡಿಸುವಲ್ಲಿ ಈ ಪ್ರಶಿಕ್ಷಣ ಮಹಾಭಿಯಾನ ಯಶಸ್ವಿಯಾಗಿದೆ ಎಂದು ಆಯೋಜಕರು ಅಭಿಪ್ರಾಯಪಟ್ಟರು.
ಒಟ್ಟಾರೆಯಾಗಿ, ದೀನದಯಾಳ ಉಪಾಧ್ಯಾಯ ಅವರ ಆದರ್ಶಗಳನ್ನು ಮುಂದಿಟ್ಟುಕೊಂಡು “ವಿಕಸಿತ ಭಾರತ” ನಿರ್ಮಾಣದ ಸಂಕಲ್ಪದೊಂದಿಗೆ ನಡೆದ ಈ ಸಮಾರೋಪ ಸಭೆ ಗದಗ ಜಿಲ್ಲೆಯ ಬಿಜೆಪಿ ಸಂಘಟನಾತ್ಮಕ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಿದಂತಾಯಿತು.
ಹಿಂದೂಸ್ತಾನ್ ಸಮಾಚಾರ್ / lalita MP