ನೂತನ ಗೇಟ್ ಗಳ ಅಳವಡಿಕೆಯಿಂದ ತಲೆಮಾರುಗಳ ಸಮಸ್ಯೆಗೆ ಮುಕ್ತಿ : ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ
ತಲೆಮಾರು ಗ
ನೂತನ ಗೇಟ್ ಗಳ ಅಳವಡಿಕೆಯಿಂದ ತಲೆಮಾರುಗಳ ಸಮಸ್ಯೆಗೆ ಮುಕ್ತಿ : ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ


ಕೊಪ್ಪಳ, 25 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ, ಅನಂತಪುರ, ಕರ್ನೂಲ್ ಹಾಗೂ ಪಾಲಮೂರು ಜಿಲ್ಲೆಗಳ ವಲಸೆ ಸಮಸ್ಯೆಗಳು ಮತ್ತು ರೈತರ ಸಂಕಷ್ಟಗಳು ಸರ್ಕಾರಗಳಿಗೆ ಸಂಪೂರ್ಣ ಅರಿವಿದೆ. ಜಲಾನಯನ ಪ್ರದೇಶದ ಮೂರು ತಲೆಮಾರುಗಳ ಸಮಸ್ಯೆಗೆ ಈ 33 ಗೇಟುಗಳ ನೂತನ ಅಳವಡಿಕೆ ಮತ್ತು ಆಧುನೀಕರಣವು ಮುಕ್ತಿ ನೀಡಲಿದೆ. ಲಕ್ಷಾಂತರ ರೈತರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಪರಿಹಾರವಾಗಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಹೇಳಿದರು.

ಗುರುವಾರ ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಸಹಯೋಗದಲ್ಲಿ ಮುನಿರಾಬಾದ್ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾದ ತುಂಗಭದ್ರಾ ಜಲಾಶಯಕ್ಕೆ ನೂತನವಾಗಿ ಅಳವಡಿಸಲಾಗಿರುವ 33 ಸ್ಪಿಲ್ವೇ ಗೇಟುಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಹಾಗೂ 1950ರ ದಶಕದಲ್ಲಿ ಮೈಸೂರು ಮಹಾರಾಜರು ಮತ್ತು ಹೈದರಾಬಾದ್ ನಿಜಾಮರ ಕಾಲದಲ್ಲಿ ತುಂಗಭದ್ರಾ ಜಲಾಶಯದ ನಿರ್ಮಾಣಕ್ಕೆ ಮುಹೂರ್ತ ಇಟ್ಟ ದಿನಗಳμÉ್ಟೀ ಪ್ರಾಮುಖ್ಯತೆಯನ್ನು ಈ ದಿನ ಹೊಂದಿದೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಜಲಾಶಯದ 33 ಗೇಟುಗಳ ಪುನರುಜ್ಜೀವನಗೊಳಿಸಿ ಲೋಕಾರ್ಪಣೆ ಮಾಡಿರುವ ಈ ದಿನವು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ರೇವಂತ್ ರೆಡ್ಡಿ ಹೇಳಿದರು.

ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ಕಾರ್ಯಕ್ಷಮತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ತೆಲಂಗಾಣ ಸಿಎಂ, ಅವರು ಅತ್ಯಂತ ಅನುಭವಿ, ಮೃದುಭಾಷಿ ಹಾಗೂ ಕಡಿಮೆ ಮಾತನಾಡಿ ಹೆಚ್ಚು ಕೆಲಸ ಮಾಡುವ ನಾಯಕ. ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಯಾರೇ ಜವಾಬ್ದಾರಿ ನೀಡಿದರೂ ಅದನ್ನು ನೂರಕ್ಕೆ ನೂರರಷ್ಟು ಯಶಸ್ವಿಯಾಗಿ ಪೂರೈಸುವ ಕಲೆ ಅವರಿಗೆ ಸಿದ್ಧಿಸಿದೆ. ಅವರ ನೇತೃತ್ವದಲ್ಲಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಕುಡಿಯುವ ಹಾಗೂ ನೀರಾವರಿ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.

ನಮ್ಮ ಭಾಗದಲ್ಲಿ ಕುಡಿಯುವ ಹಾಗೂ ಸಾಗುವಳಿ ನೀರಿಗಾಗಿ ಜನರು ಜಿಲ್ಲೆ, ರಾಜ್ಯ ದಾಟಿ ವಲಸೆ ಹೋಗುವ ಪರಿಸ್ಥಿತಿ ಇದೆ. ಆದರೆ, ನಮಗೆ ಸಿಗಬೇಕಾದ ನೀರು ಸಮುದ್ರ ಪಾಲಾಗುತ್ತಿದೆ. ಡಿ.ಕೆ. ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಕೇಂದ್ರ ಸಚಿವ ಸಿ.ಆರ್. ಪಾಟೀಲ್, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮತ್ತು ನಾನು ಸೇರಿದಂತೆ ಮೂರು ರಾಜ್ಯಗಳ ಪ್ರತಿನಿಧಿಗಳು ಇಲ್ಲಿ ಒಟ್ಟಾಗಿದ್ದೇವೆ. ರಾಜಕೀಯವನ್ನು ಬದಿಗಿಟ್ಟು, ಈ ಭಾಗದ ರೈತಾಪಿ ವರ್ಗದ ಹಿತದೃಷ್ಟಿಯಿಂದ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಈ ದಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹದ್ದು ಎಂದು ಹೇಳಿದರು.

ಗದ್ವಾಲ್, ಆಲಂಪುರ ಮತ್ತು ಪಾಲಮೂರು ಜಿಲ್ಲೆಗಳ ವ್ಯಾಪ್ತಿಯ ರಾಜೋಲಿಬಂಡಾ ಡೈವರ್ಷನ್ ಸ್ಕೀಮ್ (ಖಆS) ಅಡಿಯಲ್ಲಿ ನಿಗದಿಯಾಗಿರುವ 15.9 ಟಿಎಂಸಿ ನೀರಿನಲ್ಲಿ ಪ್ರಸ್ತುತ ರೈತರು ಕೇವಲ 5 ರಿಂದ 6 ಟಿಎಂಸಿ ನೀರನ್ನು ಮಾತ್ರ ಬಳಸುತ್ತಿದ್ದಾರೆ. ತುಂಗಭದ್ರಾದಲ್ಲಿ ಹೂಳು ತುಂಬಿರುವುದು ಮತ್ತು ನೀರಿನ ಸುಗಮ ಹರಿವಿಗೆ ಇರುವ ಅಡ್ಡಿ ಆತಂಕಗಳಿಂದಾಗಿ ಇನ್ನುಳಿದ 10 ಟಿಎಂಸಿ ನೀರು ಲಭ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಿ ಲಕ್ಷಾಂತರ ರೈತರಿಗೆ ನ್ಯಾಯ ಒದಗಿಸಬೇಕೆಂದು ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಮತ್ತು ಚಂದ್ರಬಾಬು ನಾಯ್ಡು ಅವರ ಗಮನಕ್ಕೆ ತಂದಿರುವುದಾಗಿ ರೇವಂತ್ ರೆಡ್ಡಿ ತಿಳಿಸಿದರು.

ನಮಗೆ ಕೇವಲ ರಾಜಕೀಯದ ಪಂಚಾಯಿತಿ ಬೇಡ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕು. ರೈತರ ಆಕಾಂಕ್ಷೆಗಳನ್ನು ಈಡೇರಿಸಲು ತೆಲಂಗಾಣ ಸರ್ಕಾರ ಬದ್ಧವಾಗಿದೆ. ಕೃμÁ್ಣ, ಗೋದಾವರಿ ಹಾಗೂ ತುಂಗಭದ್ರಾ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಅಂತರರಾಜ್ಯ ಜಲ ವಿವಾದಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಹೇಳಿದರು.

ಹಿಂದಿನ ಕಾಲದಲ್ಲಿ ರಾಜರು ತಮ್ಮ ರಾಜ್ಯ ವಿಸ್ತರಣೆಗಾಗಿ ಕತ್ತಿ ಹಿಡಿದು ಹೋರಾಡುತ್ತಿದ್ದ ಸಂದರ್ಭದಲ್ಲೂ, ಈ ಭಾಗದ ರೈತರ ಕಲ್ಯಾಣಕ್ಕಾಗಿ ಮೈಸೂರು ಮಹಾರಾಜರು ಹಾಗೂ ಹೈದರಾಬಾದ್ ನಿಜಾಮರು ಜೊತೆಯಾಗಿ ತುಂಗಭದ್ರಾ ಅಣೆಕಟ್ಟನ್ನು ನಿರ್ಮಿಸಿದ್ದರು. ಅಂದು ರಾಜರೇ ರೈತರಿಗಾಗಿ ಮುಂದೆ ಬಂದಿರುವಾಗ, ಇಂದು ಪ್ರಜಾಪ್ರತಿನಿಧಿಗಳಾದ ನಾವು ರೈತರ ಹಿತರಕ್ಷಣೆಗಾಗಿ ಒಂದು ಹೆಜ್ಜೆ ಮುಂದೆ ಇಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಪ್ರತಿಪಾದಿಸಿದರು.

ಕೇಂದ್ರ ಸಚಿವ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ಕೇವಲ 8 ವರ್ಷಗಳದ್ದಲ್ಲ, ಬದಲಿಗೆ 100 ವರ್ಷಗಳ ಹಳೆಯ ಸಮಸ್ಯೆಯಾಗಿದೆ. ಕೃμÁ್ಣ, ಗೋದಾವರಿ ಮತ್ತು ತುಂಗಭದ್ರಾ ನದಿ ನೀರಿನ ಹಂಚಿಕೆಗಾಗಿ ದಶಕಗಳಿಂದ ಹೋರಾಟ ನಡೆಯುತ್ತಿದೆ. ಆರ್.ಡಿ.ಎಸ್ ಯೋಜನೆಯಲ್ಲಿ ತೆಲಂಗಾಣ ಮತ್ತು ಪಾಲಮೂರು ಭಾಗದ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಕರ್ನಾಟಕ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿಗಳೊಂದಿಗೆ ತಾವು ಚರ್ಚಿಸಲು ಸಿದ್ಧರಿರುವುದಾಗಿ ತಿಳಿಸಿದರು.

ಕೇಂದ್ರ ಸಚಿವರು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ, ನ್ಯಾಯಾಧೀಶರಂತೆ ಕಾರ್ಯನಿರ್ವಹಿಸುವ ಮೂಲಕ ಈ ಜಲ ವಿವಾದಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಈ ಐತಿಹಾಸಿಕ ಹೆಜ್ಜೆಯು ದೆಹಲಿಯವರೆಗೂ ಧ್ವನಿಸಲಿದೆ ಹಾಗೂ ದೇಶದಾದ್ಯಂತ ಇರುವ ವಿವಿಧ ರಾಜ್ಯಗಳ ನಡುವಿನ ನೀರಿನ ವಿವಾದಗಳಿಗೆ ಮಾದರಿ ಪರಿಹಾರವಾಗಿ ಹೊರಹೊಮ್ಮಲಿದೆ ಎಂದು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಆಂಧ್ರಪ್ರದೇಶ ಮುಖ್ಯಮಂತ್ರಿಗಳಾದ ಎನ್.ಚಂದ್ರಬಾಬು ನಾಯ್ಡು, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಎಸ್ ಹೊರಟ್ಟಿ, ಆಂಧ್ರಪ್ರದೇಶದ ಜಲಸಂಪನ್ಮೂಲ ಇಲಾಖೆ ಮಾನ್ಯ ಸಚಿವರಾದ ಡಾ. ನಿಮ್ಮಲ ರಾಮನಾಯ್ಡು, ಆಂಧ್ರಪ್ರದೇಶದ ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ಸಚಿವರಾದ ಪಯ್ಯವುಲ ಕೇಶವ್, ತೆಲಂಗಾಣದ ನೀರಾವರಿ ಇಲಾಖೆ ಹಾಗೂ ಸಿಎಡಿ ಸಚಿವರಾದ ಎನ್.ಉತ್ತಮ್ ಕುಮಾರ ರೆಡ್ಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್, ಸಂಸದರಾದ ಕೆ. ರಾಜಶೇಖರ ಹಿಟ್ನಾಳ್, ಬಳ್ಳಾರಿ ಸಂಸದರಾದ ಈ. ತುಕಾರಾಮ್, ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಬರುವ ವಿಧಾನಸಭೆ ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಶಿವರಾಜ ಎಸ್. ತಂಗಡಗಿ, ಮುನಿರಾಬಾದ್ ತುಂಗಾಭದ್ರಾ ಯೋಜನೆ (ಕಾಡಾ) ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹಸನ್ಸಾಬ್ ನಬಿಸಾಬ್ ದೋಟಿಹಾಳ, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಹೆಚ್.ಆರ್. ಗವಿಯಪ್ಪ, ಎಂ.ಪಿ. ಲತಾ ಮಲ್ಲಿಕಾರ್ಜುನ, ವಿಧಾನಪರಿಷತ್ ಶಾಸಕರುಗಳಾದ ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ, ಬಸನಗೌಡ ಬಾದರ್ಲಿ ಹಾಗೂ ಎನ್.ಎಸ್. ಬೋಸರಾಜು, ಗದಗ ಜಿಲ್ಲೆಯ ವ್ಯಾಪ್ತಿಗೆ ಬರುವ ವಿಧಾನಸಭೆ ಶಾಸಕರುಗಳಾದ ಹೆಚ್.ಕೆ. ಪಾಟೀಲ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ, ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande