
ಗದಗ, 25 ಜೂನ್ (ಹಿ.ಸ.)
ಆ್ಯಂಕರ್:- 2026-27ನೇ ಶೈಕ್ಷಣಿಕ ಸಾಲಿನ ಡಿ.ಇ.ಎಲ್.ಇಡಿ (ಡಿಪ್ಲೊಮಾ ಇನ್ ಎಲಿಮೆಂಟರಿ ಎಜುಕೇಷನ್) ಕೋರ್ಸಿನ ಸರಕಾರಿ ಕೋಟಾದಡಿ ಸೀಟು ಹಂಚಿಕೆಯ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮಗೆ ಹಂಚಿಕೆಯಾಗಿರುವ ಶಿಕ್ಷಣ ಸಂಸ್ಥೆಯ ಮಾಹಿತಿಯನ್ನು ಪರಿಶೀಲಿಸಿಕೊಳ್ಳುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಗದಗ ತಿಳಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಡಯಟ್ ಅಧಿಕಾರಿಗಳು, ಸರಕಾರಿ ಕೋಟಾದಡಿ ಅರ್ಜಿ ಸಲ್ಲಿಸಿರುವ ಎಲ್ಲ ಅಭ್ಯರ್ಥಿಗಳು ಗದಗ ಡಯಟ್ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಸೂಚನಾ ಫಲಕದಲ್ಲಿ ಪ್ರಕಟಿಸಿರುವ ಸೀಟು ಹಂಚಿಕೆ ಪಟ್ಟಿಯನ್ನು ಪರಿಶೀಲಿಸಿ, ತಮಗೆ ಯಾವ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಅವಕಾಶ ದೊರೆತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳು ದಾಖಲಾತಿ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು ಕಡ್ಡಾಯವಾಗಿದ್ದು, ದಾಖಲಾತಿ ಶುಲ್ಕವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕಿನ ಶಾಖೆಯಲ್ಲಿ ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಮೂಲಕ ಪಡೆದು, ಅಗತ್ಯ ಮೂಲ ದಾಖಲಾತಿಗಳೊಂದಿಗೆ ಜುಲೈ 4, 2026ರೊಳಗಾಗಿ ಡಯಟ್ ಗದಗ ಕೇಂದ್ರಕ್ಕೆ ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆ ಬಳಿಕ ದಾಖಲಾತಿ ಪತ್ರವನ್ನು ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಯಟ್ನಿಂದ ದಾಖಲಾತಿ ಪತ್ರ ಪಡೆದ ಬಳಿಕ ಅಭ್ಯರ್ಥಿಗಳು ತಮಗೆ ಹಂಚಿಕೆಯಾಗಿರುವ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಜುಲೈ 6, 2026ರೊಳಗಾಗಿ ಪ್ರವೇಶ ಪಡೆಯಬೇಕಾಗಿದೆ. ನಿಗದಿತ ದಿನಾಂಕದ ನಂತರ ಯಾವುದೇ ಅಭ್ಯರ್ಥಿಗೆ ದಾಖಲಾತಿ ಅವಕಾಶ ಕಲ್ಪಿಸಲಾಗುವುದಿಲ್ಲ ಎಂದು ಡಯಟ್ ಆಡಳಿತ ಸ್ಪಷ್ಟಪಡಿಸಿದೆ.
ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗಲು ಬಯಸುವ ಸಾವಿರಾರು ವಿದ್ಯಾರ್ಥಿಗಳಿಗೆ ಡಿ.ಇ.ಎಲ್.ಇಡಿ ಕೋರ್ಸು ಪ್ರಮುಖ ವೇದಿಕೆಯಾಗಿದ್ದು, ಈ ಕೋರ್ಸಿನ ಮೂಲಕ ಭವಿಷ್ಯದ ಶಿಕ್ಷಕರಿಗೆ ಅಗತ್ಯ ಶೈಕ್ಷಣಿಕ ಹಾಗೂ ವೃತ್ತಿಪರ ತರಬೇತಿ ನೀಡಲಾಗುತ್ತದೆ. ಹೀಗಾಗಿ ಸೀಟು ಹಂಚಿಕೆ ಪಡೆದ ಅಭ್ಯರ್ಥಿಗಳು ಯಾವುದೇ ನಿರ್ಲಕ್ಷ್ಯ ವಹಿಸದೆ, ಅಗತ್ಯ ದಾಖಲೆಗಳು ಮತ್ತು ಶುಲ್ಕದೊಂದಿಗೆ ನಿಗದಿತ ಸಮಯದೊಳಗೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಶಿಕ್ಷಣ ಇಲಾಖೆ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಸಂಪರ್ಕಿಸಬಹುದಾಗಿದ್ದು, ಡಯಟ್ ಗದಗದ ನೋಡಲ್ ಅಧಿಕಾರಿ ಜಿ.ಎಂ. ಮುಂದಿನಮನಿ ಅವರ ಮೊಬೈಲ್ ಸಂಖ್ಯೆ 7619277145 ಗೆ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP