ಶಾಲಾ ವಾಹನಗಳ ಚಾಲಕರ ಸಭೆ: ಸುರಕ್ಷಿತ ಸಂಚಾರಕ್ಕೆ ಕಟ್ಟುನಿಟ್ಟಿನ ಸೂಚನೆ
ಗದಗ, 25 ಜೂನ್ (ಹಿ.ಸ.) ಆ್ಯಂಕರ್:- ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಗದಗ ಶಹರ ವಲಯದ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಾಲಾ ವಾಹನಗಳ ಚಾಲಕರು ಮತ್ತು ನಿರ್ವಾಹಕರ ಸಭೆಯನ್ನು ಗದಗ ನಗರದ ಶಹರ ಸಂಪನ್ಮೂಲ ಕೇಂದ್ರದಲ್ಲಿ ನಡೆಸಲಾಯಿತು. ಪ್ರಾದೇಶಿಕ ಸಾರಿಗೆ
ಫೋಟೋ


ಗದಗ, 25 ಜೂನ್ (ಹಿ.ಸ.)

ಆ್ಯಂಕರ್:- ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಗದಗ ಶಹರ ವಲಯದ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಾಲಾ ವಾಹನಗಳ ಚಾಲಕರು ಮತ್ತು ನಿರ್ವಾಹಕರ ಸಭೆಯನ್ನು ಗದಗ ನಗರದ ಶಹರ ಸಂಪನ್ಮೂಲ ಕೇಂದ್ರದಲ್ಲಿ ನಡೆಸಲಾಯಿತು.

ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಅರುಣಕುಮಾರ ಕಟ್ಟಿಮನಿ ಮಾತನಾಡಿ, ಶಾಲಾ ವಾಹನಗಳ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ ಹಾಗೂ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಹಲವು ಮಹತ್ವದ ಸೂಚನೆಗಳನ್ನು ನೀಡಿದರು.

ಶಾಲಾ ವಾಹನ ಚಾಲಕರು ಮತ್ತು ನಿರ್ವಾಹಕರು ವಾಹನಗಳನ್ನು ಅತ್ಯಂತ ಜಾಗರೂಕತೆಯಿಂದ ಚಾಲನೆ ಮಾಡಬೇಕು. ವಾಹನಗಳನ್ನು ಓವರ್ಟೇಕ್ ಮಾಡುವಾಗ ಅಥವಾ ಇತರ ವಾಹನಗಳನ್ನು ಹಿಂದಿಕ್ಕುವ ವೇಳೆ ಯಾವುದೇ ರೀತಿಯ ಅಜಾಗರೂಕತೆ ತೋರಬಾರದು ಎಂದು ಎಚ್ಚರಿಕೆ ನೀಡಿದರು.

ರಸ್ತೆಗಳಲ್ಲಿ ನಿಯಮಬದ್ಧವಾಗಿ ವಾಹನ ಚಲಾಯಿಸುವುದು, ಮಕ್ಕಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವುದು ಮತ್ತು ಶಾಲಾ ವಾಹನಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.

ಶಾಲಾ ವಾಹನಗಳಲ್ಲಿ ಮಕ್ಕಳನ್ನು ನಿಗದಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಕೂರಿಸಬಾರದು. ಶಾಲಾ ವಾಹನದ ವೇಗವನ್ನು ಗಂಟೆಗೆ 40 ಕಿ.ಮೀ. ಮಿತಿಯೊಳಗೆ ಇಟ್ಟುಕೊಳ್ಳಬೇಕು. ವಾಹನದ ಸೀಟುಗಳು, ಬಾಗಿಲುಗಳು ಹಾಗೂ ಲಾಕ್ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತಿರಬೇಕು. ವಾಹನಗಳ ಫಿಟ್ನೆಸ್ ಪ್ರಮಾಣಪತ್ರ, ವಿಮೆ ಹಾಗೂ ಇತರೆ ದಾಖಲೆಗಳನ್ನು ನಿಯಮಿತವಾಗಿ ನವೀಕರಿಸಿಕೊಂಡಿರಬೇಕು ಎಂದು ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಎಂ ಮುಂದಿನಮನಿ ಸಭೆಯಲ್ಲಿ ಮಾತನಾಡಿ, ಶಾಲಾ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಕೆ ಕಡ್ಡಾಯವಾಗಿದ್ದು, ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಅಗ್ನಿಶಾಮಕ ಉಪಕರಣಗಳು ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಕಡ್ಡಾಯವಾಗಿ ವಾಹನಗಳಲ್ಲಿ ಇರಬೇಕು. ವಾಹನ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ನಿರಂತರ ಅರಿವು ಮತ್ತು ತರಬೇತಿ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಇದಲ್ಲದೆ, ಶಾಲಾ ವಾಹನ ಚಾಲಕರು ಮಕ್ಕಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಹಾಗೂ ಶಾಲಾ ವಾಹನದ ಒಳಗೆ ಶಿಸ್ತು ಮತ್ತು ಸುರಕ್ಷತೆಯನ್ನು ಕಾಪಾಡಬೇಕು ಎಂದು ಸೂಚಿಸಿದರು. ವಾಹನ ಚಾಲನೆಯ ಸಮಯದಲ್ಲಿ ಮೊಬೈಲ್ ಫೋನ್ ಬಳಕೆ ಮಾಡಬಾರದು ಹಾಗೂ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಅಜಾಗರೂಕ ಚಾಲನೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ವಾಹನಗಳ ತಾಂತ್ರಿಕ ಸ್ಥಿತಿ, ಬ್ರೇಕ್ ವ್ಯವಸ್ಥೆ, ಟೈರ್ಗಳ ಗುಣಮಟ್ಟ ಮತ್ತು ಇತರೆ ಸುರಕ್ಷತಾ ಅಂಶಗಳ ಬಗ್ಗೆ ಸಹ ಪರಿಶೀಲನೆ ನಡೆಸಲಾಯಿತು. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಹಾಗೂ ಸಾರಿಗೆ ಇಲಾಖೆ ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಅಧಿಕಾರಿಗಳಾದ ಎಸ್ ಸಿ ಪ್ರಭಯ್ಯನಮಠ, ಎಸ್ ಆರ್ ನದಾಫ್, ಎಂ ಎ ಯರಗುಡಿ, ಮುರಳಿ ಸೋಲಾಪುರ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು, ಗದಗ ನಗರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು, ಶಾಲಾ ವಾಹನಗಳ ಚಾಲಕರು ಹಾಗೂ ನಿರ್ವಾಹಕರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande