ಆರ್ಥಿಕ ಬೆಳವಣಿಗೆಯಲ್ಲಿ ಎಂಎಸ್ಎಂಇಗಳ ಪಾತ್ರ ಮಹತ್ವದ್ದು: ಡಿಸಿ
ಗದಗ, 25 ಜೂನ್ (ಹಿ.ಸ.) ಆ್ಯಂಕರ್:- ದೇಶದ ಆರ್ಥಿಕ ಅಭಿವೃದ್ಧಿಗೆ ಬೆನ್ನೆಲುಬಾಗಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಎಂಎಸ್ಎಂಇ ದಿನಾಚರಣೆ-2026ರ ಅಂಗವಾಗಿ ಗದಗ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲ
ಫೋಟೋ


ಗದಗ, 25 ಜೂನ್ (ಹಿ.ಸ.)

ಆ್ಯಂಕರ್:- ದೇಶದ ಆರ್ಥಿಕ ಅಭಿವೃದ್ಧಿಗೆ ಬೆನ್ನೆಲುಬಾಗಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಎಂಎಸ್ಎಂಇ ದಿನಾಚರಣೆ-2026ರ ಅಂಗವಾಗಿ ಗದಗ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಜೂನ್ 27ರಂದು ದೇಶಾದ್ಯಂತ ಆಚರಿಸಲಾಗುವ ಎಂಎಸ್ಎಂಇ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಕೈಗಾರಿಕಾ ಇಲಾಖೆ ಹಾಗೂ ಬ್ಯಾಂಕಿಂಗ್ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಚಾಲನೆ ನೀಡಿದರು.

ಜೂನ್ 24ರಂದು ನಡೆದ ಕಾರ್ಯಕ್ರಮದಲ್ಲಿ ಎಂಎಸ್ಎಂಇ ದಿನಾಚರಣೆಯ ಜಾಗೃತಿ ಪೋಸ್ಟರ್ಗಳನ್ನು ಅನಾವರಣಗೊಳಿಸಿ, ಉದ್ಯಮ ಕ್ಷೇತ್ರದ ಅಭಿವೃದ್ಧಿ, ಸ್ವಯಂ ಉದ್ಯೋಗ ಪ್ರೋತ್ಸಾಹ ಹಾಗೂ ಉದ್ಯಮಿಗಳಿಗೆ ಸರ್ಕಾರದಿಂದ ದೊರೆಯುತ್ತಿರುವ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, ದೇಶದ ಆರ್ಥಿಕತೆಯಲ್ಲಿ ಎಂಎಸ್ಎಂಇ ಕ್ಷೇತ್ರದ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಹಾಗೂ ಹೊಸ ಉದ್ಯಮಿಗಳನ್ನು ಬೆಳೆಸುವಲ್ಲಿ ಈ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ದೇಶದ ಒಟ್ಟು ಕೈಗಾರಿಕಾ ಉತ್ಪಾದನೆ, ರಫ್ತು ಚಟುವಟಿಕೆ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳಲ್ಲಿ ಎಂಎಸ್ಎಂಇ ಕ್ಷೇತ್ರದ ಪಾತ್ರ ಗಣನೀಯವಾಗಿದೆ. ಹೊಸ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ಯುವಕರು, ಮಹಿಳೆಯರು ಹಾಗೂ ಸ್ವಯಂ ಉದ್ಯೋಗ ಬಯಸುವವರು ಸರ್ಕಾರದ ವಿವಿಧ ಯೋಜನೆಗಳು, ಬ್ಯಾಂಕ್ ಸಾಲ ಸೌಲಭ್ಯಗಳು ಮತ್ತು ತರಬೇತಿ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಜೂನ್ 27ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಎಂಎಸ್ಎಂಇ ದಿನಾಚರಣೆಯಲ್ಲಿ ಜಿಲ್ಲೆಯ ಉದ್ಯಮಿಗಳು, ಯುವ ಉದ್ಯಮಿಗಳು, ಬ್ಯಾಂಕಿಂಗ್ ವಲಯದ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಂಎಸ್ಎಂಇ ಸಚಿವಾಲಯ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಮೂಲಕ ಜಾರಿಯಲ್ಲಿರುವ ಉದ್ಯಮ ಪ್ರೋತ್ಸಾಹ ಯೋಜನೆಗಳು, ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ, ಸ್ವಯಂ ಉದ್ಯೋಗ ಯೋಜನೆಗಳು, ಸ್ಟಾರ್ಟ್ಅಪ್ ಉತ್ತೇಜನ ಕಾರ್ಯಕ್ರಮಗಳು, ಮಹಿಳಾ ಉದ್ಯಮಿಗಳಿಗೆ ವಿಶೇಷ ಯೋಜನೆಗಳು ಹಾಗೂ ಬ್ಯಾಂಕಿಂಗ್ ವಲಯದಿಂದ ದೊರೆಯುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.

ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳಿದ್ದು, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಯುವಕರು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಬೇಕು. ಇದರಿಂದ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ವೃದ್ಧಿಯಾಗಲಿವೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಂತೋಷ್ ಎಂ.ವಿ., ವಿವಿಧ ಬ್ಯಾಂಕುಗಳ ಅಧಿಕಾರಿಗಳು, ಕೈಗಾರಿಕಾ ಇಲಾಖೆಯ ಸಿಬ್ಬಂದಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ರಾಷ್ಟ್ರವ್ಯಾಪಿ ಎಂಎಸ್ಎಂಇ ದಿನಾಚರಣೆಯ ಅಂಗವಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಉದ್ಯಮಿಗಳಿಗೆ ಮಾಹಿತಿ ಕಾರ್ಯಾಗಾರಗಳು, ಬ್ಯಾಂಕ್ ಸಾಲ ಸೌಲಭ್ಯಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮಗಳು ಹಾಗೂ ಉದ್ಯಮಶೀಲತೆ ಅಭಿವೃದ್ಧಿ ಕುರಿತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂಎಸ್ಎಂಇ ಕ್ಷೇತ್ರದ ಮಹತ್ವವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಈ ಜಾಗೃತಿ ಅಭಿಯಾನವನ್ನು ವ್ಯಾಪಕವಾಗಿ ನಡೆಸಲಾಗುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande