ಸಚಿವರ ಸಂಚಾರದ ಮುನ್ನ ಧೂಳು ಮುಚ್ಚುವ ಕಸರತ್ತು : ಸಿಂದಗಿ–ಆಲಮೇಲ ರಸ್ತೆ ಕಾಮಗಾರಿ ನಾಲ್ಕು ತಿಂಗಳಿಂದ ಸ್ಥಗಿತ
ವಿಜಯಪುರ, 25 ಜೂನ್ (ಹಿ.ಸ.) : ಆಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಮಹಾತ್ಮ ಗಾಂಧಿ ವೃತ್ತದಿಂದ ಆಲಮೇಲದತ್ತ ಸಾಗುವ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ₹5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊ
ರಸ್ತೆ


ವಿಜಯಪುರ, 25 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಮಹಾತ್ಮ ಗಾಂಧಿ ವೃತ್ತದಿಂದ ಆಲಮೇಲದತ್ತ ಸಾಗುವ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

₹5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ 1.1 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಇಡೀ ಮಾರ್ಗ ಹೊಂಡ-ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಪ್ರತಿದಿನ ಸಂಕಷ್ಟ ಎದುರಿಸುವಂತಾಗಿದೆ.

ರಸ್ತೆಯನ್ನು ಸಂಪೂರ್ಣ ಅಗೆದು ಕಾಮಗಾರಿ ಆರಂಭಿಸಿದ ಬಳಿಕ ಮುಂದಿನ ಹಂತದ ಕೆಲಸ ನಡೆಯದೆ ಇರುವುದರಿಂದ ಧೂಳು, ಕೆಸರು ಹಾಗೂ ಗುಂಡಿಗಳ ಸಮಸ್ಯೆ ಹೆಚ್ಚಾಗಿದೆ. ಮಳೆ ಇಲ್ಲದ ಸಂದರ್ಭದಲ್ಲಿ ಧೂಳಿನ ಸಮಸ್ಯೆ ತೀವ್ರವಾಗಿದ್ದು, ವಾಹನ ಸಂಚಾರವೇ ಸವಾಲಾಗಿ ಪರಿಣಮಿಸಿದೆ.

ಸಚಿವರ ಆಗಮನಕ್ಕೆ ಮುನ್ನ ಅಧಿಕಾರಿಗಳಿಂದ ನೀರು ಸಿಂಪಡಣೆ

ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಜೂನ್ 25ರಂದು ಇದೇ ಮಾರ್ಗದ ಮೂಲಕ ಆಲಮೇಲಕ್ಕೆ ತೆರಳುವ ಹಿನ್ನೆಲೆಯಲ್ಲಿ ಅಧಿಕಾರಿಗಳು ರಸ್ತೆಗೆ ಟ್ಯಾಂಕರ್ ಮೂಲಕ ನೀರು ಹಾಯಿಸಿ ಧೂಳು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಸಚಿವರು ಕೇವಲ ಧೂಳು ಮುಚ್ಚುವ ಪ್ರಯತ್ನವನ್ನಲ್ಲದೆ, ರಸ್ತೆಯ ನೈಜ ಸ್ಥಿತಿಯನ್ನು ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ರಸ್ತೆ ಅವ್ಯವಸ್ಥೆಯಿಂದ ಅಪಘಾತದ ಆತಂಕ

ಅಗೆದ ರಸ್ತೆಯಲ್ಲಿ ವಾಹನಗಳು ಮೇಲಕ್ಕೆ-ಕೆಳಕ್ಕೆ ಜಿಗಿಯುತ್ತ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ವಿದ್ಯಾರ್ಥಿಗಳು ಅಪಘಾತದ ಭೀತಿಯಲ್ಲಿ ಸಂಚರಿಸುವಂತಾಗಿದೆ. ಪಿಎಸ್ಐ ಕಾಲೇಜಿನ ವಿದ್ಯಾರ್ಥಿಗಳು ಮಾತನಾಡಿ, ರಸ್ತೆ ಹದಗೆಟ್ಟಿರುವುದರಿಂದ ಕಾಲೇಜಿಗೆ ಸಮಯಕ್ಕೆ ತಲುಪಲು ತೊಂದರೆಯಾಗುತ್ತಿದೆ. ಕೂಡಲೇ ರಸ್ತೆ ದುರಸ್ತಿ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಡಾಂಬರು ದರ ಏರಿಕೆ ನೆಪ:

ಗುತ್ತಿಗೆದಾರರಿಂದ ಕಾಮಗಾರಿ ಸ್ಥಗಿತ

ಕಾಮಗಾರಿ ಸ್ಥಗಿತಕ್ಕೆ ಡಾಂಬರು ಹಾಗೂ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯೇ ಕಾರಣ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಟೆಂಡರ್ ಸಮಯದಲ್ಲಿ ಡಾಂಬರ್ ಲೋಡ್ಗೆ ಸುಮಾರು ₹45 ಸಾವಿರ ಇದ್ದ ದರ ಈಗ ₹85 ಸಾವಿರಕ್ಕೆ ಏರಿಕೆಯಾಗಿದೆ. ಹಳೆಯ ದರದಲ್ಲಿ ಕಾಮಗಾರಿ ಮುಂದುವರಿಸಿದರೆ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ ಎಂಬ ಕಾರಣ ನೀಡಿ ಕೆಲಸ ನಿಲ್ಲಿಸಲಾಗಿದೆ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ₹1 ಕೋಟಿ ಅನುದಾನ ಬಿಡುಗಡೆ

ರಸ್ತೆಯ ಮುಂದಿನ 450 ಮೀಟರ್ ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ ₹1 ಕೋಟಿ ಅನುದಾನ ಬಿಡುಗಡೆಯಾಗಿದೆ. ಮುಂದಿನ ಕಾಮಗಾರಿ ಶೀಘ್ರ ಆರಂಭವಾಗಲಿದ್ದು, ಸದ್ಯ ಸ್ಥಗಿತಗೊಂಡಿರುವ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಪಿಡಬ್ಲ್ಯೂಡಿ ಎಇಇ ಅರುಣಕುಮಾರ ತಿಳಿಸಿದ್ದಾರೆ.

ಸಾರ್ವಜನಿಕರ ಪ್ರಶ್ನೆ: “ಯುದ್ಧ ಮುಗಿದ ಬಳಿಕವೇ ರಸ್ತೆ ಪೂರ್ಣಗೊಳ್ಳುತ್ತದೆಯೇ?”

ಕಾಮಗಾರಿ ವಿಳಂಬಕ್ಕೆ ವಿವಿಧ ಕಾರಣಗಳನ್ನು ನೀಡಲಾಗುತ್ತಿದ್ದರೂ, ಸಾರ್ವಜನಿಕರು ಮಾತ್ರ ತ್ವರಿತ ಪೂರ್ಣಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಯುದ್ಧದ ನೆಪ ಹೇಳಿ ರಸ್ತೆ ಕಾಮಗಾರಿ ನಿಲ್ಲಿಸಿದರೆ, ಯುದ್ಧ ಮುಗಿದ ಮೇಲೆಯೇ ರಸ್ತೆ ನಿರ್ಮಾಣವಾಗಬೇಕೇ? ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯೆಗಳು

“ಒಂದು ವಾರದೊಳಗೆ ಡಾಂಬರೀಕರಣ ಆರಂಭಕ್ಕೆ ಸೂಚನೆ”

“ಡಾಂಬರು ದರ ಏರಿಕೆಯ ಕಾರಣ ನೀಡಿ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಆದರೆ ಸಾರ್ವಜನಿಕರ ಸಮಸ್ಯೆ ಗಮನದಲ್ಲಿಟ್ಟುಕೊಂಡು ಒಂದು ವಾರದೊಳಗೆ ಡಾಂಬರೀಕರಣ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.”

— ಅಶೋಕ ಮನಗೂಳಿ, ಶಾಸಕರು, ಸಿಂದಗಿ

“ದರ ಏರಿಕೆಯಿಂದ ಗುತ್ತಿಗೆದಾರರಿಗೆ ನಷ್ಟ”

“ಡಾಂಬರ್ ಹಾಗೂ ಇತರೆ ಸಾಮಗ್ರಿಗಳ ದರದಲ್ಲಿ ಭಾರಿ ಏರಿಕೆಯಾಗಿದೆ. ಹಳೆಯ ದರದಲ್ಲಿ ಕಾಮಗಾರಿ ಮಾಡಿದರೆ ಗುತ್ತಿಗೆದಾರರಿಗೆ ₹75ರಿಂದ ₹78 ಲಕ್ಷದವರೆಗೆ ನಷ್ಟವಾಗಲಿದೆ.”

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande