
ಕೋಲಾರ, ೨೫ ಜೂನ್ (ಹಿ.ಸ) :
ಆ್ಯಂಕರ್ : ಜಿಲ್ಲೆಯಲ್ಲಿರುವ ಹಲವು ಬೃಹತ್ ಕೈಗಾರಿಕೆಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿ.ಎಸ್.ಆರ್) ಯೋಜನೆಗಳ ಅಡಿ ಜಿಲ್ಲೆಯಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ತರಬೇತಿ ಕೇಂದ್ರಗಳಲ್ಲಿ ಆಧುನಿಕ ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲ್ಯಭರಿತ ಮಾನವ ಸಂಪನ್ಮೂಲ ಅಭಿವೃದ್ದಿಗೆ ಅಗತ್ಯ ತರಬೇತಿ ಯೋಜನೆಗಳನ್ನು ರೂಪಿಸಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಕೆ. ಶ್ರೀನಿವಾಸ ತಿಳಿಸಿದರು.
ಗುರುವಾರ ಕೋಲಾರ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಬಯೋವೆಟ್ ಕಾರ್ಖಾನೆ, ಮಾಲೂರು ರವರ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿ.ಎಸ್.ಆರ್) ಯೋಜನೆಯಡಿ ಭವಿಷ್ಯತ್ ಕೌನ್ಸಿಲಿಂಗ್ ಸಂಸ್ಥೆ ಬೆಂಗಳೂರು ರವರ ಸಹಯೋಗದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕೋಲಾರದಲ್ಲಿ ಪ್ರಾರಂಭಿಸಲಾಗುವ ಆಧುನಿಕ ಕೌಶಲ್ಯ ತರಬೇತಿ ಕೇಂದ್ರದ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಹಲವು ಕೈಗಾರಿಕೆಗಳು ಅಸ್ತಿತ್ವದಲ್ಲಿದ್ದು, ಬರುವ ದಿನಗಳಲ್ಲಿ ಇನ್ನೂ ಹಲವಾರು ಕೈಗಾರಿಕೆಗಳು ಸ್ಥಾಪನೆಯಾಗಲಿದೆ, ಆಧುನಿಕ ಕೌಶಲ್ಯಗಳಲ್ಲಿ ಉತ್ತಮ ತರಬೇತಿ ಪಡೆದ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಟಾಟಾ ಎಲೆಕ್ಟಾçನಿಕ್ಸ್ ಹಾಗೂ ಹೊಂಡಾ ಆಟೋಮೊಬೈಲ್ಸ್ ಸಂಸ್ಥೆಗಳು ಸಿ.ಎಸ್.ಆರ್ ಯೋಜನೆಯಡಿ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಪ್ರಾರಂಭಿಕವಾಗಿ ಬಯೋವೆಟ್ ಸಂಸ್ಥೆಯವರು ಕೋಲಾರ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸದರಿ ಕೌಶಲ್ಯ ಕೇಂದ್ರವನ್ನು ಸ್ಥಾಪಿಸಿರುವುದು ಸ್ವಾಗರ್ತಾಹವಾಗಿದ್ದು ಮುಂದಿನ ದಿನಗಳಲ್ಲಿ ಈ ರೀತಿಯ ಯೋಜನೆಗಳು ಜಿಲ್ಲೆಯ ಎಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ವಿಸ್ತರಿಸಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ ಮಾಲೂರಿನ ಬಯೋವೆಟ್ ಸಂಸ್ಥೆಯ ಸಿಎಫ್ಒ ರಮೇಶಬಾಬು, ಮಾತನಾಡಿ ಬಯೋವೆಟ್ ಸಂಸ್ಥೆಯ ವಿವಿಧ ಯೋಜನೆಗಳ ಕುರಿತು ಹಾಗೂ ಸಂಸ್ಥೆಯ ಸ್ಥಾಪಕರ ಕುರಿತು ವಿವರಿಸಿ ಕೋವಿಡ್ ವiಹಾಮಾರಿಗೆ ಅಗತ್ಯವಾಗಿದ್ದ ಕೋವ್ಯಾಕ್ಸಿನ್ ಲಸಿಕೆಯನ್ನು ತಮ್ಮ ಸಂಸ್ಥೆಯಲ್ಲಿ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.
ಕೋಲಾರ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಗೋಪಾಲ್ ಮಾತನಾಡಿ ಸಂಸ್ಥೆಯಲ್ಲಿ ಆಸ್ತಿತ್ವದಲ್ಲಿರುವ ಐ.ಎಂ.ಸಿ ಯೋಜನೆಯಡಿ ಸದರಿ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದ್ದು, ಪ್ರಾರಂಭಿಕವಾಗಿ ಕೌಶಲ್ಯ ತರಬೇತಿಯನ್ನು ಐ.ಟಿ.ಐ ವಿದ್ಯಾರ್ಥಿಗಳಿಗೆ ನೀಡಲು ಉದ್ದೇಶಿಸಲಾಗಿದ್ದು ಮುಂಬರುವ ದಿನಗಳಲ್ಲಿ ಜಿ.ಟಿ.ಟಿ.ಸಿ ಹಾಗೂ ಡಿಪ್ಲೋಮೊ ಸಂಸ್ಥೆಯ ವಿದ್ಯಾರ್ಥಿಗಳಿಗೂ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ. ಭವಿಷ್ಯತ್ ಕೌನ್ಸಿಲಿಂಗ್ ಸಂಸ್ಥೆಯ ಮುಖ್ಯಸ್ಥ ವಿಜಯ ಕೃಷ್ಣ, ಯೋಜನೆಯನ್ನು ಜಾರಿಗೊಳಿಸುವ ಕುರಿತು ಸಂಪೂರ್ಣ ವಿವರಣೆಯನ್ನು ನೀಡಿ ಯೋಜನೆ ಅನುಷ್ಠಾನಗೊಳಿಸುವ ಕುರಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕೃಷ್ಣಪ್ಪ ಬಿ.ಜಿ ಅಧ್ಯಕ್ಷರು, ಐ.ಎಂ.ಸಿ, ಕೋಲಾರ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಡೆಕ್ಕನ್ ಹೈಡ್ರಾಲಿಕ್ಸ್ ಸಂಸ್ಥೆ, ಬಂಗಾರಪೇಟೆರವರು ಮಾತನಾಡಿ ಸದರಿ ತರಬೇತಿ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಕೌಶಲ್ಯ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಭವಿಷ್ಯತ್ ಕೌನ್ಸಿಲಿಂಗ್ ಸಂಸ್ಥೆಯ ಡಾ. ಹರೀಶ ಕುಮಾರ್, ಶ್ರೀ ಬೆಳಗಾಂವಕರ್, ಕೈಗಾರಿಕಾ ಸಂಸ್ಥೆಯ ಭೋದಕ ಹಾಗೂ ಭೋದಕೇತರ ಸಿಬ್ಬಂದಿ, ಉದ್ಯೋಗ ವಿನಿಮಯ ಕಛೇರಿಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್