ಕೋಮುಲ್ ಪ್ರೀ-ಪ್ಯಾಕಿಂಗ್ ಟೆಂಡರ್ ನಲ್ಲಿ ಕಾನೂನು ಬಾಹಿರ ಷರತ್ತು ; ಮರು ಟೆಂಡರ್ ಪ್ರಕ್ರಿಯೆಗೆ ಒತ್ತಾಯ
ಕೋಮುಲ್ ಪ್ರೀ-ಪ್ಯಾಕಿಂಗ್ ಟೆಂಡರ್ನಲ್ಲಿ ಕಾನೂನು ಬಾಹಿರ ಷರತ್ತು ; ಮರು ಟೆಂಡರ್ ಪ್ರಕ್ರಿಯೆಗೆ ಒತ್ತಾಯ
ಕೋಲಾರ ಹಾಲು ಒಕ್ಕೂಟದ ಪ್ಯಾಪಿಂಗ್ ವಿಭಾಗದ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷರು ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.


ಕೋಲಾರ ೨೫ ಜೂನ್ (ಹಿ.ಸ) :

ಆ್ಯಂಕರ್ : ಕೋಲಾರ ಹಾಲು ಒಕ್ಕೂಟದ ಪ್ರೀ-ಪ್ಯಾಕ್ ವಿಭಾಗದ ಹಾಲು, ಮೊಸರು ಹಾಗೂ ಮಜ್ಜಿಗೆ ಪ್ಯಾಕಿಂಗ್ ಯಂತ್ರಗಳ ಚಾಲನೆ ಮತ್ತು ನಿರ್ವಹಣೆಗೆ ಸಂಬ0ಧಿಸಿದ0ತೆ ಆಹ್ವಾನಿಸಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೋಲಾರ ತಾಲ್ಲೂಕು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರುಗಳು, ಪಾರದರ್ಶಕವಾಗಿ ಮರು ಟೆಂಡರ್ ಕರೆಯುವಂತೆ ಒತ್ತಾಯಿಸಿದ್ದಾರೆ.

ಗುರುವಾರ ಕೋಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿರುವ ನೌಕರರ ಸಂಘ ಹಾಗೂ ಎಂಪಿಸಿಎಸ್ ಅಧ್ಯಕ್ಷರುಗಳು, ಟೆಂಡರ್ನಲ್ಲಿರುವ ಕೆಲವು ಷರತ್ತುಗಳು ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ರೂಪಿಸಲಾಗಿದೆ ಎಂದು ದೂರಿದ್ದಾರೆ. ಹಲವು ಒಕ್ಕೂಟಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಕಡ್ಡಾಯ ಎಂಬ ಷರತ್ತು ಅನಗತ್ಯವಾಗಿದ್ದು, ಯಾವುದೇ ಒಂದು ಹಾಲು ಒಕ್ಕೂಟದಲ್ಲಿ ಸಮರ್ಪಕವಾಗಿ ಸೇವೆ ಸಲ್ಲಿಸಿರುವ ಅನುಭವವನ್ನೂ ಪರಿಗಣಿಸಬೇಕು ಎಂದು ಸಂಘದವರು ಒತ್ತಾಯಿಸಿದ್ದಾರೆ.

ಪ್ರಸ್ತುತ ಪ್ರೀ-ಪ್ಯಾಕಿಂಗ್ ವಿಭಾಗದ ಗುತ್ತಿಗೆದಾರರಾಗಿರುವ ಎವಿಆರ್ ಎಂಟರ್ಪ್ರೈಸಸ್ ಸಂಸ್ಥೆಯ ಕಾರ್ಯನಿರ್ವಹಣೆ ತೃಪ್ತಿಕರವಾಗಿರಲಿಲ್ಲ. ಬಿಡಿಭಾಗಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸದ ಹಿನ್ನಲೆಯಲ್ಲಿ ಹಲವು ಬಾರಿ ಕೋಮುಲ್ ನಿಂದ ನೋಟಿಸ್ ನೀಡಲಾಗಿದೆ. ಕೆಲ ಸಂದರ್ಭಗಳಲ್ಲಿ ಒಕ್ಕೂಟವೇ ಬಿಡಿಭಾಗಗಳನ್ನು ಖರೀದಿಸಿ ಅದರ ವೆಚ್ಚವನ್ನು ಗುತ್ತಿಗೆದಾರರ ಬಿಲ್ನಿಂದ ಕಟಾಯಿಸಲಾಗಿದೆ ಅಂತಾ ಆರೋಪಿಸಿದ್ದಾರೆ.

ಇದಲ್ಲದೆ, ಈ ಮೊದಲು ಬೆಂಗಳೂರು ಹಾಲು ಒಕ್ಕೂಟದಲ್ಲಿ ಎವಿಆರ್ ಎಂಟರ್ ಪ್ರೈಸಸ್ ಸಂಸ್ಥೆಯ ಕಾರ್ಯನಿರ್ವಹಣೆ ಕುರಿತು ಗಂಭೀರ ಆಕ್ಷೇಪಗಳಿದ್ದರಿಂದ ಕಪ್ಪುಪಟ್ಟಿಗೆ ಸೇರಿಸಿರುವ ಮಾಹಿತಿ ಇದ್ದರೂ ಕಳೆದ ಸಾಲಿನಲ್ಲಿ ಟೆಂಡರ್ ನೀಡಲಾಗಿದೆ. ಇದೀಗ ಪ್ರಸಕ್ತ ಸಾಲಿನಲ್ಲೂ ಎವಿಆರ್ ಎಂಟರ್ ಪ್ರೈಸಸ್ ಗೆ ಟೆಂಡರ್ ನೀಡಲು ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದ್ದರಿಂದ, ಎವಿಆರ್ ಎಂಟರ್ಪ್ರೈಸಸ್ ವಿರುದ್ಧದ ದೂರುಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲು ಕೋಲಾರ ಹಾಲು ಒಕ್ಕೂಟ ಕ್ರಮ ಕೈಗೊಳ್ಳಬೇಕು. ಜೊತೆಗೆ ಟೆಂಡರ್ ಷರತ್ತುಗಳನ್ನು ಮರುಪರಿಶೀಲಿಸಿ ತಿದ್ದುಪಡಿ ಮಾಡಿ, ಪಾರದರ್ಶಕವಾಗಿ ಮರು ಟೆಂಡರ್ ಆಹ್ವಾನಿಸಬೇಕು ಎಂದು ಮನವಿ ಮಾಡಿದರಲ್ಲದೆ ಎವಿಆರ್ ಎಂಟರ್ ಪ್ರೈಸಸ್ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಒಕ್ಕೂಟಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ಕೋಲಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ ಪರವಾಗಿ ಆಡಳಿತ ವಿಭಾಗದ ವ್ಯವಸ್ಥಾಪಕಿ ನಂದಿನಿ, ಹಣಕಾಸು ವಿಭಾಗದ ವ್ಯವಸ್ಥಾಪಕ ಮುರಳಿ, ಪಿ&ಐ ವಿಭಾಗದ ವ್ಯವಸ್ಥಾಪಕ ಚೇತನ್ ಕುಮಾರ್, ಖರೀದಿ ವಿಭಾಗದ ವ್ಯವಸ್ಥಾಪಕ ವಿಶ್ವನಾಥ್ ಮನವಿಯನ್ನು ಸ್ವೀಕರಿಸಿ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿಯನ್ನು ತಿಳಿಸಲಾಗುವುದು ಹಾಗೂ ಟೆಂಡರ್ ನಲ್ಲಿರುವ ಆಗಿರುವ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ನಿಯೋಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಾದ ವಿಟ್ಟಪ್ಪನಹಳ್ಳಿ ವಿ.ಆರ್.ಮಂಜುನಾಥ್, ಗೂಳಿಗಾನಹಳ್ಳಿ ಶಂಕರೇಗೌಡ, ಮಣಿಘಟ್ಟ ಮುನಿವೆಂಕಟಪ್ಪ, ನಾಯಕರಹಳ್ಳಿ ಲಕ್ಷ್ಮಣ್, ಬೆಳಗಾನಹಳ್ಳಿ ಸುರೇಶ್, ಹೊಳಲಿ ಹೊಸೂರು ಎಲ್ ಮಂಜುನಾಥಗೌಡ, ಕೋಲಾರ ತಾಲ್ಲೂಕು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಲ ನೌಕರರ ಸಂಘದ ಅಧ್ಯಕ್ಷರ ಮುನಿಯಪ್ಪ (ರಾಮು), ಪ್ರಧಾನ ಕಾರ್ಯದರ್ಶಿ ಡಿ.ಶಿವರುದ್ರಯ್ಯ, ಕಾರ್ಯದರ್ಶಿ ಡಿಆರ್ ಮಂಜುನಾಥ್, ನಿರ್ದೇಶಕರಾದ ನಾಗರಾಜ್ ವೀರಭದ್ರ ಮತ್ತಿತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande