ಕರ್ತವ್ಯದ ವೇಳೆಯಲ್ಲೇ ‘ಎಣ್ಣೆ ಪಾರ್ಟಿ’ ಆರೋಪ ; ಕೆಬಿಜೆಎನ್ಎಲ್ ಸಿಬ್ಬಂದಿ ವಿರುದ್ಧ ಸ್ಥಳೀಯರ ಆಕ್ರೋಶ
ವಿಜಯಪುರ, 25 ಜೂನ್ (ಹಿ.ಸ.) : ಆಂಕರ್ : ಸರ್ಕಾರಿ ಕರ್ತವ್ಯದ ಸಮಯದಲ್ಲೇ ಮದ್ಯಪಾನ ಪಾರ್ಟಿಯಲ್ಲಿ ತೊಡಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಬಿಜೆಎನ್ಎಲ್ (ಕರ್ನಾಟಕ ಭಾಗ್ಯಜಲ ನಿಗಮ ನಿಯಮಿತ) ಸಿಬ್ಬಂದಿಗಳ ವಿರುದ್ಧ ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Paety


ವಿಜಯಪುರ, 25 ಜೂನ್ (ಹಿ.ಸ.) :

ಆಂಕರ್ : ಸರ್ಕಾರಿ ಕರ್ತವ್ಯದ ಸಮಯದಲ್ಲೇ ಮದ್ಯಪಾನ ಪಾರ್ಟಿಯಲ್ಲಿ ತೊಡಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಬಿಜೆಎನ್ಎಲ್ (ಕರ್ನಾಟಕ ಭಾಗ್ಯಜಲ ನಿಗಮ ನಿಯಮಿತ) ಸಿಬ್ಬಂದಿಗಳ ವಿರುದ್ಧ ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಆಲಮೇಲದ ಹೊಲಗಾಲುವೆ ವಿಭಾಗದ ಕಚೇರಿಗೆ ಸಂಬಂಧಿಸಿದ ಕೆಲವು ಸಿಬ್ಬಂದಿಗಳು ಮಧ್ಯಾಹ್ನದ ವೇಳೆಯೇ ಡಾಬಾವೊಂದರಲ್ಲಿ ಕುಳಿತು ಮದ್ಯಪಾನ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ವಲಯದಲ್ಲಿ ಹರಿದಾಡುತ್ತಿದ್ದು, ಸ್ಥಳೀಯರೊಬ್ಬರು ಈ ದೃಶ್ಯಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ ಎನ್ನಲಾಗಿದೆ.

ಹೊಲಗಾಲುವೆ ವಿಭಾಗದ ಮ್ಯಾನೇಜರ್ ಶಶಿಧರ್ ಚೌಹಾನ್, ದ್ವಿತೀಯ ದರ್ಜೆ ಸಹಾಯಕ ಮುರಳೀಧರ್ ಕುಲಕರ್ಣಿ ಹಾಗೂ ಕಚೇರಿ ಸಿಪಾಯಿ ಶಂಕರಯ್ಯ ಮಟಮಟ ಅವರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸಬೇಕಾದ ಸಮಯದಲ್ಲಿ ಸಿಬ್ಬಂದಿಗಳು ಕಚೇರಿಗೆ ಗೈರುಹಾಜರಾಗಿ ಖಾಸಗಿ ಸ್ಥಳಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಪ್ರತಿದಿನ ಮಧ್ಯಾಹ್ನದ ವೇಳೆಯಲ್ಲಿ ಕಚೇರಿಯಿಂದ ಹೊರಟು ಬಾರ್ಗಳು ಹಾಗೂ ಡಾಬಾಗಳಲ್ಲಿ ಸಮಯ ಕಳೆಯುವುದು ಕೆಲವರ ರೂಢಿಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸರ್ಕಾರಿ ನೌಕರರು ಕರ್ತವ್ಯದ ವೇಳೆ ಇಂತಹ ವರ್ತನೆ ತೋರಿಸುವುದು ಇಲಾಖೆಯ ಗೌರವಕ್ಕೆ ಧಕ್ಕೆ ತರುವಂತದ್ದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ, ತಪ್ಪು ಸಾಬೀತಾದಲ್ಲಿ ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande