

ಕೊಪ್ಪಳ, 24 ಜೂನ್ (ಹಿ.ಸ.) :
ಆ್ಯಂಕರ್ : ತುಂಗಭದ್ರಾ ಜಲಾಶಯಕ್ಕೆ ನೂತನವಾಗಿ ಅಳವಡಿಸಿದ 33 ಸ್ಪಿಲ್ ವೇ ಗೇಟುಗಳ ಲೋಕಾರ್ಪಣೆ ಸಮಾರಂಭಕ್ಕೆ ಕೊಪ್ಪಳ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗಳಿಂದ ಎಲ್ಲ ರೀತಿಯ ಅಗತ್ಯ ಶಿಷ್ಟಾಚಾರಕ್ಕೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಸಭೆ ನಡೆಸಿ ಅವರು ಮಾಹಿತಿ ನೀಡಿದರು.
ಕೇಂದ್ರ ಜಲಶಕ್ತಿ ಸಚಿವರು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ಸಂಸದರು ಮತ್ತು ಶಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಜೂನ್ 25ರಂದು ಬೆಳಗ್ಗೆ ಐಆರ್ಬಿನಲ್ಲಿ ಹೆಲಿಪ್ಯಾಡಗೆ ಆಗಮಿಸುವ ಮುಖ್ಯಮಂತ್ರಿಗಳು ಹಾಗೂ ಗಣ್ಯರು ಮೊದಲಿಗೆ ಜಲಾಶಯದ ಕ್ರಸ್ಟ್ಗೇಟುಗಳ ಲೋಕಾರ್ಪಣೆ ಸಮಾರಂಭದಲ್ಲಿ ಭಾಗಿಯಾಗುವರು. ಬಳಿಕ ಮುನಿರಾಬಾದ್ ಗ್ರಾಮದಲ್ಲಿನ ಸರ್ಕಾರಿ ಹೈಸ್ಕೂಲ್ ಗ್ರೌಂಡ್ನಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಂದಾಜು 15 ಸಾವಿರ ಜನರು ಪಾಲ್ಗೊಳ್ಳಲು ಏರ್ಪಾಡು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ ಅವರು ಮಾತನಾಡಿ, ಕಾರ್ಯಕ್ರಮವು ಶಾಂತಿಯುತವಾಗಿ ನಡೆಯುವ ದಿಶೆಯಲ್ಲಿ ಭದ್ರತೆಗಾಗಿ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆರು ಜನ ಎಸ್ಪಿ, 25 ಜನ ಡಿವೈಎಸ್ಪಿ, 25 ಕ್ಕೂ ಹೆಚ್ಚು ಜನ ಸಿಪಿಐ ಮತ್ತು ಪಿಎಸ್ಐ ಹಾಗೂ ನೂರಾರು ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕೆಎಸ್ಆರ್ಪಿ ಸೇರಿದಂತೆ ವಿವಿಧ ಪೊಲೀಸ್ ತುಕಡಿಗಳ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ. 150 ಬಸ್ಸುಗಳಿಗೆ ಹಾಗೂ 250 ಕ್ಕೂ ಹೆಚ್ಚು ಬೇರೆ ಬೇರೆ ವಾಹನಗಳಿಗೆ ಬೇರೆ ಬೇರೆ ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರು ನಿಗದಿತ ಸ್ಥಳದಲ್ಲಿ ವಾಹನ ನಿಲ್ಲಿಸಿ ಸಹಕರಿಸಬೇಕು. ಮುಖ್ಯಮಂತ್ರಿಗಳ ಕಾರ್ಯಕ್ರಮದ ಭದ್ರತಾ ಹಿನ್ನೆಲೆಯಲ್ಲಿ ಪಂಪಾವನದ ಮುಂದಿನ ರಸ್ತೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಯಾರಿಗೂ ಸಹ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಹುಲಿಗಿ ಕ್ರಾಸ್ ನಿಂದ ಹೊಸಪೇಟೆಯತ್ತ ಹೋಗುವ ಮತ್ತು ಬರುವ ವಾಹನಗಳ ಸಂಚಾರಕ್ಕೆ ಸಹ ಸೂಕ್ತ ಮಾರ್ಗಸೂಚಿ ನಿಗದಿಪಡಿಸಲಾಗಿದೆ. ಮುಖ್ಯಮಂತ್ರಿಗಳ
ಕಾರ್ಯಕ್ರಮ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಸುಮಾರು 4 ಗಂಟೆಗಳ ಸಮಯದವರೆಗೆ ಜನತೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಮೇಶ್ವರ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್