
ಕೋಲಾರ, ೨೪ ಜೂನ್ (ಹಿ.ಸ) :
ಆ್ಯಂಕರ್ : ಕಲಿಕೆಗೆ ಕೊನೆಯೆಂಬುದಿಲ್ಲ. ಒಂದರ್ಥದಲ್ಲಿ ನಾವೆಲ್ಲರೂ ಪ್ರತಿದಿನ ಕಲಿಯುವ ವಿದ್ಯಾರ್ಥಿಗಳೇ ಆಗಿದ್ದೇವೆ. ಕಲಿಯುವ ಹಂಬಲ ಹಾಗೂ ಅರ್ಹತೆಯನ್ನು ಯಾರು ಹೊಂದಿರುತ್ತಾರೋ ಅವರೇ ನಿಜವಾದ ವಿದ್ಯಾರ್ಥಿ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ರಾಜ್ಯಶಾಸ್ತç ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಪಿಎಂ ಉಷಾ ಸೆಲ್ ನಿರ್ದೇಶಕ ಡಾ. ರಮೇಶ್ ಎಂ.ಎನ್. ಅಭಿಪ್ರಾಯಪಟ್ಟರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸ0ದ್ರದ ಸುವರ್ಣಗಂಗೆ ಕ್ಯಾಂಪಸ್ನ ಕನ್ನಡ ವಿಭಾಗವು ಹಮ್ಮಿಕೊಂಡಿದ್ದ ಯುಜಿಸಿ ನೆಟ್ ಕೆಸೆಟ್ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಕಲಿಕೆಯನ್ನು ಒಂದು ಫ್ಯಾಷನ್ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳ ಬದುಕಿನಲ್ಲಿ ಕನಸುಗಳು ಹೇಗಿರಬೇಕು ಎಂಬುದಕ್ಕೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಾತುಗಳೇ ದಾರಿದೀಪ. ನಿದ್ದೆಯಲ್ಲಿ ಕಾಣುವುದು ಕನಸಲ್ಲ, ನಿಮ್ಮನ್ನು ನಿದ್ದೆ ಮಾಡದಂತೆ ಕಾಡುವುದೇ ನಿಜವಾದ ಕನಸು. ಈ ಕನಸು ನನಸಾಗಬೇಕಾದರೆ ನಿರಂತರ ಶ್ರಮ ಮತ್ತು ತುಡಿತ ಅತ್ಯಗತ್ಯ. ಯುಜಿಸಿ ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳು ಉನ್ನತ ಬದುಕಿಗೆ ಕಲ್ಪಿಸುವ ಸೇತುವೆಗಳಿದ್ದಂತೆ ಎಂದ ಅವರು, ಸಮಯ ಯಾರಿಗೂ ಭೇದಭಾವ ಮಾಡುವುದಿಲ್ಲ. ಎಲ್ಲರಿಗೂ ಸಿಗುವ ೨೪ ಗಂಟೆಗಳನ್ನು ಯಾರು ಸಮರ್ಪಕವಾಗಿ ನಿರ್ವಹಿಸುತ್ತಾರೋ ಅವರು ಯಶಸ್ವಿಯಾಗುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವಾಗ ಹೆಚ್ಚು ಓದುವುದಕ್ಕಿಂತ, `ಯಾವುದನ್ನು ಓದಬೇಕು' ಎಂಬುದನ್ನು ಅರಿತುಕೊಳ್ಳುವುದು ಮುಖ್ಯ ಎಂದರು.
ಕನ್ನಡ ವಿಭಾಗದ ಸಂಯೋಜಕ ಡಾ.ಶ್ರೀನಿವಾಸ ಎಸ್ ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕೇವಲ ಪದವಿ ಅಥವಾ ಸ್ನಾತಕೋತ್ತರ ಪದವಿ ಸಾಕಾಗುವುದಿಲ್ಲ. ಬೋಧನೆ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಮುನ್ನಡೆಯಲು ಯುಸಿಜಿ, ಜೆ ಆರ್ ಎಫ್ ನೆಟ್, ಕೆಸೆಟ್ ಮೊದಲಾದ ಅರ್ಹತಾ ಪರೀಕ್ಷೆಗಳನ್ನು ಎದುರಿಸುವುದು ಅನಿವಾರ್ಯವಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಆಡಳಿತ ಮಂಡಳಿಗೆ, ಸುವರ್ಣಗಂಗೆ ನಿರ್ದೇಶಕರಾದ ಪ್ರೊ. ಡಿ. ಕುಮುದ ಅವರಿಗೆ, ಮುಖ್ಯ ಅತಿಥಿಗಳಿಗೂ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೂ ಕನ್ನಡ ವಿಭಾಗದ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುಮಾರು ಹತ್ತು ಸರ್ಕಾರಿ ಹುದ್ದೆಗಳನ್ನು ಪಡೆದು ಪ್ರಸ್ತುತ ತ್ಯಾಮಗೊಂಡ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರೊ. ರವಿ ಆರ್ ಎನ್, ಅವರು ಐಚ್ಚಿಕ ಪತ್ರಿಕೆ ಕುರಿತು ಪರೀಕ್ಷಾ ತಂತ್ರ, ಆಳವಾದ ಅದ್ಯಯನ, ಸಮಯ ನಿರ್ವಹಣೆ ಬೋಧನೆ ಕುರಿತು ಉಪನ್ಯಾಸ ನೀಡಿದರು.
ಐದು ಸರ್ಕಾರಿ ಹುದ್ದೆಗಳನ್ನು ಪಡೆದು ಪ್ರಸ್ತುತ ಹಾವೇರಿ ಜಿಲ್ಲಾ ಅಕ್ಕಿ ಆಲೂರು ಸಿ ಜಿ ಬೆಲ್ಲದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಕೃಷ್ಣ ಮೂರ್ತಿ ಆರ್, ಸಮಾನ್ಯ ಜ್ಞಾನ ಪತ್ರಿಕೆ ಪರಿಚಯಿಸಿದರು. ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ನಟರಾಜ್ ರವರು ಭಾಷಾ ಅಧ್ಯಯನ ಪತ್ರಿಕೆಯ ಪರೀಕ್ಷಾ ತಂತ್ರಗಳನ್ನು ತಿಳಿಸಿಕೊಟ್ಟರು.
ಚಿಂತಾಮಣಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಬಿಕೆ ರವಿ ಮಾತನಾಡಿದರು. ಕಾರ್ಯಾಗಾರದಲ್ಲಿ ಕನ್ನಡ ವಿಭಾಗದ ಅಧ್ಯಾಪಕರಾದ ಡಾ ಗಾಯತ್ರಿದೇವಿ, ಡಾ.ಶ್ರೀನಿವಾಸ ಎನ್, ಡಾ. ಕೆವಿ ನೇತ್ರಾವತಿ ಇತರ ವಿಭಾಗಗಳ ಅಧ್ಯಾಪಕರುಗಳು ಬೇರೆ ಕಾಲೇಜುಗಳ ಅಧ್ಯಾಪಕರುಗಳು ಹಾಜರಿದ್ದ ಈ ಕಾರ್ಯಾಗಾರವನ್ನು ದ್ವಿತೀಯ ಎಂಎ ವಿದ್ಯಾರ್ಥಿನಿ ಮಾನಸ ವಿ ನಿರೂಪಿಸಿ, ಪ್ರಥಮ ಎಂಎ ವಿದ್ಯಾರ್ಥಿನಿ ಕವಿತಾ ಸ್ವಾಗತಿಸಿ, ದ್ವಿತೀಯ ಎಂಎ ವಿದ್ಯಾರ್ಥಿ ತ್ಯಾಗರಾಜು ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್