
ನವದೆಹಲಿ, 24 ಜೂನ್ (ಹಿ.ಸ.) :
ಆ್ಯಂಕರ್ : ಕೇಂದ್ರ ವಿದ್ಯಾಲಯಗಳಿಗಾಗಿ ಆಯೋಜಿಸಲಾದ 36ನೇ ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆ (2025-26) ಪ್ರಶಸ್ತಿ ಪ್ರದಾನ ಸಮಾರಂಭವು ನಾಳೆ, ಜೂನ್ 25ರಂದು ಸಂಸತ್ ಭವನ ಸಂಕೀರ್ಣದ ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ನಡೆಯಲಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿ ವಿಜೇತ ವಿದ್ಯಾರ್ಥಿಗಳು ಹಾಗೂ ಶಾಲೆಗಳಿಗೆ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.
ಈ ಕುರಿತು ಬುಧವಾರ ಮಾಹಿತಿ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವಾಲಯ, ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ದೆಹಲಿಯ ಪ್ರೆಸಿಡೆಂಟ್ ಎಸ್ಟೇಟ್ನಲ್ಲಿರುವ ಡಾ. ರಾಜೇಂದ್ರ ಪ್ರಸಾದ್ ಕೇಂದ್ರ ವಿದ್ಯಾಲಯದ ವಿದ್ಯಾರ್ಥಿಗಳು ಯುವ ಸಂಸತ್ ಅಧಿವೇಶನದ ಮರುಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದೆ.
ಕೇಂದ್ರ ವಿದ್ಯಾಲಯಗಳಲ್ಲಿ ಯುವ ಸಂಸತ್ ಸ್ಪರ್ಧೆಯನ್ನು ಕಳೆದ 38 ವರ್ಷಗಳಿಂದ ಸಂಸದೀಯ ವ್ಯವಹಾರಗಳ ಸಚಿವಾಲಯ ಆಯೋಜಿಸುತ್ತಿದೆ. 2025-26ನೇ ಸಾಲಿನ 36ನೇ ಸ್ಪರ್ಧೆಯಲ್ಲಿ ಕೇಂದ್ರ ವಿದ್ಯಾಲಯ ಸಂಘಟನೆಯ 25 ಪ್ರಾದೇಶಿಕ ವಿಭಾಗಗಳಿಗೆ ಸೇರಿದ ದೇಶದಾದ್ಯಂತದ 200 ಶಾಲೆಗಳು ಭಾಗವಹಿಸಿದ್ದವು.
ವಿದ್ಯಾರ್ಥಿಗಳಲ್ಲಿ ಆತ್ಮಶಿಸ್ತು, ವಿಭಿನ್ನ ಅಭಿಪ್ರಾಯಗಳ ಮಂಡನೆ, ಸಹಿಷ್ಣುತೆ, ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ಸಂಸದೀಯ ಸಂಪ್ರದಾಯಗಳ ಬಗ್ಗೆ ಅರಿವು ಮೂಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ಸಂಸತ್ತಿನ ಕಾರ್ಯವೈಖರಿ, ಚರ್ಚಾ ಕೌಶಲ್ಯ, ನಾಯಕತ್ವ ಗುಣಗಳು ಮತ್ತು ಪರಿಣಾಮಕಾರಿ ಭಾಷಣ ಕೌಶಲ್ಯದ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಡಾ. ರಾಜೇಂದ್ರ ಪ್ರಸಾದ್ ಕೇಂದ್ರ ವಿದ್ಯಾಲಯಕ್ಕೆ ಪ್ರತಿಷ್ಠಿತ ‘ಸರ್ದಾರ್ ವಲ್ಲಭಭಾಯಿ ಪಟೇಲ್ ಸಂಚಾರಿ ಸಂಸತ್ತೀಯ ಶೀಲ್ಡ್’ ಹಾಗೂ ಟ್ರೋಫಿ ಪ್ರದಾನ ಮಾಡಲಾಗುತ್ತದೆ.
ವಲಯ ಮಟ್ಟದಲ್ಲಿ ವಿಜೇತರಾದ ಶಾಲೆಗಳಿಗೂ ಇದೇ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುತ್ತದೆ. ಪಶ್ಚಿಮ ವಲಯದಿಂದ ಮಥುರಾ ಕ್ಯಾಂಟ್ ಕೇಂದ್ರ ವಿದ್ಯಾಲಯ, ದಕ್ಷಿಣ ವಲಯದಿಂದ ಪ್ರಧಾನಮಂತ್ರಿ ಶ್ರೀ ಕೇಂದ್ರ ವಿದ್ಯಾಲಯ ಸಂಖ್ಯೆ–1 ಮಧುರೈ, ಮಧ್ಯ ವಲಯದಿಂದ ಪ್ರಧಾನಮಂತ್ರಿ ಶ್ರೀ ಕೇಂದ್ರ ವಿದ್ಯಾಲಯ ಸಂಖ್ಯೆ–2 ಶಿವಾಜಿನಗರ, ಭೋಪಾಲ್ ಹಾಗೂ ಪೂರ್ವ ವಲಯದಿಂದ ಪ್ರಧಾನಮಂತ್ರಿ ಶ್ರೀ ಕೇಂದ್ರ ವಿದ್ಯಾಲಯ, ವಾಯುಸೇನೆ ನಿಲ್ದಾಣ ಬೋರ್ಜಾರ್, ಗುವಾಹಟಿ ಪ್ರಶಸ್ತಿಗೆ ಪಾತ್ರವಾಗಿವೆ.
ಇದಲ್ಲದೆ ಜಮ್ಮು, ಚಂಡೀಗಢ, ಗುರುಗ್ರಾಮ, ಡೆಹ್ರಾಡೂನ್, ಅಹಮದಾಬಾದ್, ಜೈಪುರ, ಮುಂಬೈ, ರಾಂಚಿ, ಜಬಲ್ಪುರ್, ಎರ್ನಾಕುಳಂ, ಹೈದರಾಬಾದ್, ಬೆಂಗಳೂರು, ಲಖನೌ, ಪಾಟ್ನಾ, ರಾಯ್ಪುರ, ವಾರಾಣಸಿ, ತಿನ್ಸುಕಿಯಾ, ಕೋಲ್ಕತ್ತಾ, ಸಿಲ್ಚರ್ ಹಾಗೂ ಭುವನೇಶ್ವರ ಸೇರಿದಂತೆ ವಿವಿಧ ಪ್ರಾದೇಶಿಕ ವಿಭಾಗಗಳ 20 ವಿಜೇತ ಕೇಂದ್ರ ವಿದ್ಯಾಲಯಗಳಿಗೂ ಟ್ರೋಫಿಗಳನ್ನು ಪ್ರದಾನ ಮಾಡಲಾಗುತ್ತದೆ.
ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ವಿದ್ಯಾರ್ಥಿಗಳು, ಶಿಕ್ಷಕರು, ಕೇಂದ್ರ ವಿದ್ಯಾಲಯ ಸಂಘಟನೆಯ ಅಧಿಕಾರಿಗಳು ಹಾಗೂ ಸಂಸದೀಯ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದ್ದು, ಭವಿಷ್ಯದ ನಾಯಕತ್ವ ಗುಣಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ವಿದ್ಯಾರ್ಥಿಗಳ ಸಾಧನೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಕಾರ್ಯಕ್ರಮವಾಗಿ ಗುರುತಿಸಿಕೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.