ಮತದಾರರ ಸಮಗ್ರ ಪರಿಷ್ಕರಣೆ
ಮತದಾರರ ಸಮಗ್ರ ಪರಿಷ್ಕರಣೆ
ಮತದಾರರ ಸಮಗ್ರ ಪರಿಷ್ಕರಣೆಯ ಬಗ್ಗೆ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್ ಬಾಗೇವಾಡಿ ಸಭೆ ನಡೆಸಿದರು.


ಕೋಲಾರ, ಜೂನ್ ೨೪ (ಹಿ.ಸ) :

ಆ್ಯಂಕರ್ : ಸ್ವಚ್ಛ ಮತ್ತು ನಿಖರವಾದ ಮತದಾರರ ಪಟ್ಟಿಯೇ ಪ್ರಜಾಪ್ರಭುತ್ವದ ಅಡಿಪಾಯ. ೨೦೦೨ರ ಮತದಾರರ ಪಟ್ಟಿಯ ಪ್ರೊಜೆನಿಯನ್ನು ಆಧರಿಸಿ ಈ ಬಾರಿ ಪರಿಷ್ಕರಣೆ ನಡೆಯುತ್ತಿರುವುದರಿಂದ, ಅರ್ಹರೆಲ್ಲರಿಗೂ ಮತದಾನದ ಹಕ್ಕು ಸಿಗುವಂತೆ ಮತ್ತು ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕುವಲ್ಲಿ ಬಿಎಲ್ಒಗಳು ಹಾಗೂ ಮೇಲ್ವಿಚಾರಕ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಕೋಲಾರ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಡಾ. ಪ್ರವೀಣ್ ಪಿ. ಬಾಗೇವಾಡಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದು, ಸ್ವಚ್ಛ ಮತಪಟ್ಟಿ ಸಿದ್ಧಪಡಿಸುವಲ್ಲಿ ಅಧಿಕಾರಿಗಳು ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡಬಾರದು. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಸಭೆಯ ಅಂಗವಾಗಿ, ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ‘ಸ್ವೀಪ್’ ಚಟುವಟಿಕೆಗಳು ಹಾಗೂ ಸ್ವಚ್ಛ ಮತಪಟ್ಟಿ ತಯಾರಿಕೆಯಲ್ಲಿ ಅಧಿಕಾರಿಗಳ ಪಾತ್ರದ ಕುರಿತು ವಿಶೇಷ ಅರಿವು ಕಾರ್ಯಕ್ರಮ ಜರುಗಿತು.

ಮತದಾರರ ಪಟ್ಟಿಯಲ್ಲಿ ಯಾವುದೇ ಒಬ್ಬ ಅರ್ಹ ನಾಗರಿಕನ ಹೆಸರು ಬಿಟ್ಟುಹೋಗದಂತೆ ಮತ್ತು ಅನರ್ಹರ ಹೆಸರುಗಳು ಪಟ್ಟಿಯಲ್ಲಿ ಉಳಿಯದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಪ್ರಮುಖ ಕರ್ತವ್ಯವಾಗಿದೆ ಎಂದು ಸಿಇಒ ತಿಳಿಸಿದರು.

ಜೂನ್ ೩೦ರಿಂದ ಜಿಲ್ಲಾದ್ಯಂತ ಮನೆ-ಮನೆ ಸಮೀಕ್ಷೆ ಕಾರ್ಯ ಆರಂಭವಾಗಲಿದ್ದು, ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಬ್ಬರ ಮನೆ ಬಾಗಿಲಿಗೆ ಭೇಟಿ ನೀಡಿ ಎನ್ಯುಮರೇಷನ್ ಫಾರಂ ನೀಡಲಿದ್ದಾರೆ.

ಮುಖ್ಯವಾಗಿ ಹೊಸದಾಗಿ ೧೮ ವರ್ಷ ತುಂಬಿದ ಯುವ ಮತದಾರರನ್ನು ಗುರುತಿಸಿ ಪಟ್ಟಿಗೆ ಸೇರ್ಪಡೆ ಮಾಡಲು ವಿಶೇಷ ಒತ್ತು ನೀಡಲಾಗುತ್ತಿದೆ.

ಮರಣ ಹೊಂದಿದ ಅಥವಾ ಕಾಯಂ ಆಗಿ ಬೇರೆಡೆಗೆ ವಲಸೆ ಹೋಗಿರುವ ಅನರ್ಹ ಮತದಾರರ ಹೆಸರುಗಳನ್ನು ಕಾನೂನುಬದ್ಧವಾಗಿ ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆಯನ್ನು ಅಧಿಕಾರಿಗಳು ಅತ್ಯಂತ ಪಾರದರ್ಶಕವಾಗಿ ಕೈಗೊಳ್ಳಲಿದ್ದಾರೆ.

ಸಾರ್ವಜನಿಕರು ತಮ್ಮ ಮೊಬೈಲ್ಗಳಲ್ಲೇ ಭವಿಷ್ಯದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ಪಾರ್ಟ್ ನಂಬರ್ ಹಾಗೂ ವಿವರಗಳನ್ನು ಪರಿಶೀಲಿಸಿಕೊಳ್ಳಲು ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಸ್ವೀಪ್ ಸಮಿತಿಯ ವತಿಯಿಂದ ಡಿಜಿಟಲ್ ಜಾಗೃತಿ ಮೂಡಿಸಲಾಗುತ್ತಿದೆ.

ತಂತ್ರಜ್ಞಾನದ ಬಳಕೆಯ ಮೂಲಕ ಪ್ರತಿಯೊಬ್ಬ ನಾಗರಿಕನೂ ತನಗಾಗಿಯೇ ಲಭ್ಯವಿರುವ ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ ೧೯೫೦ ಅನ್ನು ಬಳಸಿ ಮತದಾನದ ಹಕ್ಕನ್ನು ಖಾತರಿಪಡಿಸಿಕೊಳ್ಳಲು ಪ್ರೇರೇಪಿಸಲಾಗುತ್ತಿದೆ.

ಜಿಲ್ಲೆಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ, ಕಚೇರಿಗಳಲ್ಲಿ ಮತ್ತು ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕರಿಗೆ ಮತದಾನದ ಮಹತ್ವ ಸಾರುವ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಯಾರೂ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಧ್ಯೇಯದೊಂದಿಗೆ, ವಿಶೇಷವಾಗಿ ಮಹಿಳೆಯರು, ದಿವ್ಯಾಂಗರು ಮತ್ತು ಯುವ ಸಮುದಾಯವನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಸ್ವೀಪ್ ಸಮಿತಿಯು ಜಿಲ್ಲಾದ್ಯಂತ ನಿರಂತರ ಪ್ರಚಾರ ಕಾರ್ಯ ಕೈಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande