ಫಿಫಾ ವಿಶ್ವಕಪ್ ; ಸ್ಕಾಟ್ಲೆಂಡ್ ವಿರುದ್ಧದ ಪಂದ್ಯಕ್ಕೆ ನೇಮರ್ ಲಭ್ಯ
ಮಿಯಾಮಿ, 24 ಜೂನ್ (ಹಿ.ಸ.) : ಆ್ಯಂಕರ್ : ಬ್ರೆಜಿಲ್ ಫುಟ್ಬಾಲ್ ತಂಡದ ಮುಖ್ಯ ಕೋಚ್ ಕಾರ್ಲೊ ಅಂಚೆಲೊಟ್ಟಿ ಅವರು, ಸ್ಕಾಟ್ಲೆಂಡ್ ವಿರುದ್ಧದ ಫಿಫಾ ವಿಶ್ವಕಪ್ 2026ರ ಗುಂಪು-ಸಿ ಪಂದ್ಯಕ್ಕೆ ತಾರಾ ಆಟಗಾರ ನೇಮರ್ ಲಭ್ಯವಿದ್ದಾರೆ ಎಂದು ದೃಢಪಡಿಸಿದ್ದಾರೆ. ಆದರೆ ಅವರನ್ನು ಆರಂಭಿಕ ಹನ್ನೊಂದರ ತಂಡದಲ್ಲಿ ಆಡಿಸ
ಬ್ರೆಜಿಲ್ ತರಬೇತುದಾರ


ಮಿಯಾಮಿ, 24 ಜೂನ್ (ಹಿ.ಸ.) :

ಆ್ಯಂಕರ್ : ಬ್ರೆಜಿಲ್ ಫುಟ್ಬಾಲ್ ತಂಡದ ಮುಖ್ಯ ಕೋಚ್ ಕಾರ್ಲೊ ಅಂಚೆಲೊಟ್ಟಿ ಅವರು, ಸ್ಕಾಟ್ಲೆಂಡ್ ವಿರುದ್ಧದ ಫಿಫಾ ವಿಶ್ವಕಪ್ 2026ರ ಗುಂಪು-ಸಿ ಪಂದ್ಯಕ್ಕೆ ತಾರಾ ಆಟಗಾರ ನೇಮರ್ ಲಭ್ಯವಿದ್ದಾರೆ ಎಂದು ದೃಢಪಡಿಸಿದ್ದಾರೆ. ಆದರೆ ಅವರನ್ನು ಆರಂಭಿಕ ಹನ್ನೊಂದರ ತಂಡದಲ್ಲಿ ಆಡಿಸಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

34 ವರ್ಷದ ನೇಮರ್ ಸುಮಾರು ಮೂರು ವರ್ಷಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳುವ ಅವಕಾಶ ಪಡೆದಿದ್ದಾರೆ. ಆದರೆ ಪಿಂಡಲಿಯ ಗಾಯದಿಂದಾಗಿ ಅವರು ಈ ವಿಶ್ವಕಪ್ನಲ್ಲಿ ಇದುವರೆಗೆ ಮೈದಾನಕ್ಕಿಳಿದಿಲ್ಲ.

ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಚೆಲೊಟ್ಟಿ, “ನೇಮರ್ ಲಭ್ಯವಿದ್ದಾರೆ. ಅವರು ಈ ವಾರ ಉತ್ತಮವಾಗಿ ಅಭ್ಯಾಸ ನಡೆಸಿದ್ದು, ಪಂದ್ಯಕ್ಕೆ ಸಂಪೂರ್ಣ ಸಿದ್ಧರಾಗಿದ್ದಾರೆ. ಅವರ ಮರಳುವಿಕೆಯಿಂದ ನಾವು ತುಂಬಾ ಸಂತೋಷಗೊಂಡಿದ್ದೇವೆ. ಅವರ ಗುಣಮಟ್ಟ ಮತ್ತು ಅನುಭವ ತಂಡಕ್ಕೆ ಬಹಳ ಉಪಯುಕ್ತವಾಗಲಿದೆ” ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, “ನೇಮರ್ ಅವರನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಗಾಯದಿಂದ ಶೀಘ್ರ ಚೇತರಿಸಿಕೊಳ್ಳಲು ಅವರು ಅಪಾರ ಶ್ರಮವಹಿಸಿದ್ದಾರೆ. ಅವರು ಮೈದಾನಕ್ಕಿಳಿಯದಿದ್ದರೂ ಸಹ ಅವರ ಅನುಭವ ಮತ್ತು ಆಟದ ಅರಿವು ಯುವ ಆಟಗಾರರಿಗೆ ಮಾರ್ಗದರ್ಶನವಾಗಲಿದೆ” ಎಂದರು.

ನೇಮರ್ ಎಷ್ಟು ಸಮಯ ಆಡಬಹುದು ಎಂಬ ಪ್ರಶ್ನೆಗೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ ಅಂಚೆಲೊಟ್ಟಿ, “ಅವರು 90 ನಿಮಿಷಗಳ ಕಾಲ ಆಡಬಹುದು, ಆದರೆ ನಡೆಯುತ್ತ ಆಡಬೇಕಾಗಬಹುದು,” ಎಂದು ನಗುತ್ತಾ ಹೇಳಿದರು. “ಅವರು ಈಗ ಸಂಪೂರ್ಣ ಫಿಟ್ ಆಗಿದ್ದು, ಅತ್ಯುತ್ತಮ ಅಭ್ಯಾಸ ನಡೆಸಿದ್ದಾರೆ” ಎಂದರು.

ಬ್ರೆಜಿಲ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ 1-1 ಗೋಲುಗಳ ಸಮಬಲ ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಹೈಟಿಯನ್ನು 3-0 ಅಂತರದಿಂದ ಮಣಿಸಿತ್ತು. ಸ್ಕಾಟ್ಲೆಂಡ್ ವಿರುದ್ಧ ಜಯ ಸಾಧಿಸಿದರೆ ಬ್ರೆಜಿಲ್ ಅಂತಿಮ 32ರ ಹಂತಕ್ಕೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.

“ಮೊದಲ ಪಂದ್ಯದಲ್ಲಿ ನಮ್ಮ ಪ್ರದರ್ಶನ ಅತ್ಯುತ್ತಮವಾಗಿರಲಿಲ್ಲ. ಎರಡನೇ ಪಂದ್ಯದಲ್ಲಿ ಸುಧಾರಣೆ ಕಂಡುಬಂದಿತು. ಮೂರನೇ ಪಂದ್ಯದಲ್ಲಿ ಇದುವರೆಗಿನ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸ ನಮ್ಮಲ್ಲಿದೆ,” ಎಂದು ಅಂಚೆಲೊಟ್ಟಿ ಹೇಳಿದರು.

ಇದೇ ವೇಳೆ ಹ್ಯಾಮ್ಸ್ಟ್ರಿಂಗ್ ಗಾಯದಿಂದ ರಾಫಿನ್ಹಾ ತಂಡದಿಂದ ಹೊರಗುಳಿದಿರುವುದು ಬ್ರೆಜಿಲ್ಗೆ ಹಿನ್ನಡೆಯಾಗಿದೆ. ಆದರೆ ಅವರ ಸ್ಥಾನದಲ್ಲಿ ಯಾರು ಆಡಲಿದ್ದಾರೆ ಎಂಬುದನ್ನು ಅಂಚೆಲೊಟ್ಟಿ ಬಹಿರಂಗಪಡಿಸಲು ನಿರಾಕರಿಸಿದರು.

ಸ್ಕಾಟ್ಲೆಂಡ್ ಕುರಿತು ಮಾತನಾಡಿದ ಅವರು, “ಸ್ಕಾಟ್ಲೆಂಡ್ ಬಲಿಷ್ಠ ಹಾಗೂ ಶಿಸ್ತುಬದ್ಧ ತಂಡವಾಗಿದೆ. ಅವರ ಬಳಿ ಅನುಭವಿ ಆಟಗಾರರಿದ್ದಾರೆ ಮತ್ತು ಹೋರಾಟದ ಮನೋಭಾವವೂ ಇದೆ. ವಿಶ್ವಕಪ್ನಲ್ಲಿ ಯಾವುದೇ ಪಂದ್ಯ ಸುಲಭವಲ್ಲ. ಆದ್ದರಿಂದ ನಾವು ಕಠಿಣ ಸವಾಲಿಗೆ ಸಿದ್ಧರಾಗಿದ್ದೇವೆ” ಎಂದು ಹೇಳಿದರು.

ನ್ಯೂಜೆರ್ಸಿಯಿಂದ ಮಿಯಾಮಿಗೆ ಆಗಮಿಸುವ ವೇಳೆ ಬ್ರೆಜಿಲ್ ತಂಡಕ್ಕೆ ವಿಳಂಬವಾಗಿದ್ದು, ಅದರ ಪರಿಣಾಮ ಅಂಚೆಲೊಟ್ಟಿ ಅವರ ಸುದ್ದಿಗೋಷ್ಠಿಯೂ ತಡವಾಗಿ ಆರಂಭವಾಯಿತು. ಆದಾಗ್ಯೂ, ಕೋಚ್ ಆಗಿ ತಮ್ಮ ಮೊದಲ ವಿಶ್ವಕಪ್ ಅನುಭವವನ್ನು ಅವರು ಸಂಪೂರ್ಣವಾಗಿ ಆನಂದಿಸುತ್ತಿರುವುದಾಗಿ ಹೇಳಿದರು.

“ಇಂದಿನ ಸಣ್ಣ ತೊಂದರೆಯನ್ನು ಹೊರತುಪಡಿಸಿದರೆ ಎಲ್ಲವೂ ಅದ್ಭುತವಾಗಿದೆ. ನಮ್ಮ ತಂಡದಲ್ಲಿ ಗುಣಮಟ್ಟವೂ ಇದೆ, ಆತ್ಮವಿಶ್ವಾಸವೂ ಇದೆ. ಈ ವಿಶ್ವಕಪ್ ನಮ್ಮ ಪಾಲಿಗೆ ಸ್ಮರಣೀಯವಾಗಬಹುದು ಎಂಬ ನಂಬಿಕೆ ಇದೆ. ಫುಟ್ಬಾಲ್ನಲ್ಲಿ ಏನು ಬೇಕಾದರೂ ಸಂಭವಿಸಬಹುದು. ಆದರೆ ಈ ಅನುಭವ ಮಾತ್ರ ಖಂಡಿತವಾಗಿಯೂ ಅತ್ಯಂತ ಸುಂದರವಾಗಿರಲಿದೆ,” ಎಂದು ಅಂಚೆಲೊಟ್ಟಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande