

ಹಂಪಿ, 24 ಜೂನ್ (ಹಿ.ಸ.) :
ಆ್ಯಂಕರ್ : ಸಂಸದ ಈ. ತುಕಾರಾಂ ಅವರು ಕನ್ನಡ ವಿಶ್ವವಿದ್ಯಾಲಯ, ಹಂಪಿಗೆ ಭೇಟಿ ನೀಡಿದ್ದಾರೆ. ಮಾನ್ಯ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರು ಸಂಸದರನ್ನು ಸ್ವಾಗತಿಸಿದರು.
ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದಲ್ಲಿರುವ ಕ್ರಿಯಾಶಕ್ತಿ ಕಟ್ಟಡದ ಸಿಂಡಿಕೇಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಗೌರವ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುತ್ತಿದ್ದು, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯವನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು. ವಿಶ್ವವಿದ್ಯಾಲಯದ 686 ಎಕರೆ ಭೂಮಿಯ ಸುತ್ತ ಚೈನ್ಲಿಂಕ್ ಬೇಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ವಿಶ್ವವಿದ್ಯಾಲಯಕ್ಕೆ ಆಗಮಿಸಿ, ಮಾನ್ಯ ಕುಲಪತಿಗಳು ಹಾಗೂ ಕುಲಸಚಿವರೊಡನೆ ಚರ್ಚಿಸಿ ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ, ಅಭಿವೃದ್ಧಿ ಹಾಗೂ ಅನುದಾನ ಇವುಗಳ ಕುರಿತು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಅನುದಾನ ಹಾಗೂ ಅಗತ್ಯ ನೆರವನ್ನು ಒದಗಿಸಿಕೊಡುವ ಭರವಸೆಯನ್ನು ನೀಡಿದರು.
ತಾತ್ಕಾಲಿಕ ನೌಕರರ ವೇತನ, ಜಮೀನು ಕಳೆದುಕೊಂಡವರಿಗೆ ಉದ್ಯೋಗ, ಹೊರಗುತ್ತಿಗೆ ನೌಕರರ ವೇತನ, ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಮನವಿ ಪತ್ರವನ್ನು ಕೊಡಲಾಯಿತು. ತಾತ್ಕಾಲಿಕ ಸಿಬ್ಬಂದಿಗಳ ವೇತನದ ಕುರಿತು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಿಸಲಾದ ಹೈದರಾಬಾದ್ ಕರ್ನಾಟಕ ಭಾಗದ ಪುಸ್ತಕಗಳನ್ನು ಮರುಮುದ್ರಿಸಲು ಬಳ್ಳಾರಿ ಲೋಕಸಭಾ ಸದಸ್ಯರ ಅನುದಾನದಲ್ಲಿ ರೂ.16,50,000/- ಹಣವನ್ನು ಬಿಡುಗಡೆ ಮಾಡಿರುವುದರ ಕುರಿತು ಶ್ಲಾಘಿಸಿದ ಮಾನ್ಯ ಕುಲಸಚಿವರು ವಿಶ್ವವಿದ್ಯಾಲಯದ ಪರವಾಗಿ ಸಂಸದರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಸಾರಾಂಗ, ಅಧ್ಯಯನಾಂಗದ ನಿರ್ದೇಶಕರು, ಡೀನರು, ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿಯವರು ಮತ್ತು ಸ್ಥಳೀಯ ನಾಗರೀಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್