ದಾವಣಗೆರೆಯಲ್ಲಿ ಶಂಕಿತ ಉಗ್ರ ಬಂಧನ ; ಅಯೋಧ್ಯೆ ರಾಮಮಂದಿರ ಗುರಿಯಾಗಿಸಿದ್ದ ಸಂಚು ಬಹಿರಂಗ
ಬೆಂಗಳೂರು, 24 ಜೂನ್ (ಹಿ.ಸ.) : ಆ್ಯಂಕರ್ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಅಡಗಿದ್ದ ಶಂಕಿತ ಉಗ್ರನ ಬಂಧನದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಬಂಧಿತ ಆರೋಪಿ ಅಯೋಧ್ಯೆಯ ರಾಮ ಮಂದಿರವನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸುವ ಉದ್ದೇಶ ಹೊಂದಿದ್ದಾನೆ ಎಂಬ ಮಾಹಿತಿ ತನ
ಶಂಕಿತ ಉಗ್ರ ಸುಹೇಲ್ ಚಿತ್ರ


ಬೆಂಗಳೂರು, 24 ಜೂನ್ (ಹಿ.ಸ.) :

ಆ್ಯಂಕರ್ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಅಡಗಿದ್ದ ಶಂಕಿತ ಉಗ್ರನ ಬಂಧನದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಬಂಧಿತ ಆರೋಪಿ ಅಯೋಧ್ಯೆಯ ರಾಮ ಮಂದಿರವನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸುವ ಉದ್ದೇಶ ಹೊಂದಿದ್ದಾನೆ ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಕೇಂದ್ರ ಗುಪ್ತಚರ ಇಲಾಖೆ ಹಾಗೂ ದಾವಣಗೆರೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶ ಮೂಲದ ಸುಹೇಲ್ (20) ಎಂಬಾತನನ್ನು ಬಂಧಿಸಲಾಗಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಈತನ ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ದೇಶದಲ್ಲಿ ದೊಡ್ಡ ಮಟ್ಟದ ಸಮಾಜಘಾತಕ ಕೃತ್ಯಗಳನ್ನು ಎಸಗುವ ಸಂಚಿನಲ್ಲಿ ಈತ ಭಾಗಿಯಾಗಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ವಿಚಾರಣೆ ವೇಳೆ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಬಾಂಬ್ ಸ್ಫೋಟದ ಮೂಲಕ ಗುರಿಯಾಗಿಸಲು ಬಯಸಿದ್ದೆ ಎಂದು ಆರೋಪಿ ಹೇಳಿರುವ ಮಾಹಿತಿ ಲಭ್ಯವಾಗಿದೆ. ಆದರೆ ಈ ಹೇಳಿಕೆಗಳ ಸತ್ಯಾಸತ್ಯತೆಯನ್ನು ತನಿಖಾ ಸಂಸ್ಥೆಗಳು ಇನ್ನೂ ಪರಿಶೀಲಿಸುತ್ತಿವೆ.

ಮೂಲತಃ ಉತ್ತರ ಪ್ರದೇಶದವನಾದ ಸುಹೇಲ್ ಸುಮಾರು 15 ದಿನಗಳ ಹಿಂದೆ ಹರಿಹರಕ್ಕೆ ಬಂದಿದ್ದನು. ಯಾರಿಗೂ ಅನುಮಾನ ಬಾರದಂತೆ ಸ್ಥಳೀಯ ಕಾರ್ಖಾನೆಯೊಂದರಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡು ಬನ್ನಿಕೋಡು ಗ್ರಾಮದಲ್ಲಿ ವಾಸವಾಗಿದ್ದನು ಎಂದು ತಿಳಿದುಬಂದಿದೆ.

ಜೂನ್ 3ರಂದು ದಾವಣಗೆರೆಯಲ್ಲಿ ಬಂಧಿತರಾಗಿದ್ದ ಇತರ ಶಂಕಿತ ವ್ಯಕ್ತಿಗಳ ವಿಚಾರಣೆ ವೇಳೆ ಸುಹೇಲ್ ಹೆಸರು ಹೊರಬಂದಿತ್ತು. ಅದರ ಆಧಾರದ ಮೇಲೆ ಅಧಿಕಾರಿಗಳು ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮೊಬೈಲ್ ಡೇಟಾ ಪರಿಶೀಲನೆ ವೇಳೆ ಪಾಕಿಸ್ತಾನ ಮೂಲದ ಸಂಪರ್ಕಗಳಿರುವ ಸುಳಿವುಗಳು ಪತ್ತೆಯಾಗಿವೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ಆತನ ಮೊಬೈಲ್ನಲ್ಲಿ ಪಾಕಿಸ್ತಾನದ ದೇಶ ಕೋಡ್ (+92) ಹೊಂದಿರುವ ಸಂಖ್ಯೆಯನ್ನು “ರಾಣಾ ಭಾಯ್” ಎಂಬ ಹೆಸರಿನಲ್ಲಿ ಸಂಗ್ರಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ““ಮೆಮನ್ ಮತ್ತು ಜುಟ್ಟು-333”” ಹಾಗೂ “ರಾಣಾಭಾಯಿ-333” ಎಂಬ ಗುಂಪುಗಳಲ್ಲಿ ಸಕ್ರಿಯನಾಗಿದ್ದನೆಂಬ ಮಾಹಿತಿಯೂ ದೊರೆತಿದೆ. ಅಲ್ಲದೆ, ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡಿರುವ ಹಲವು ಫೋಟೋಗಳು ಹಾಗೂ ಕೆಲವು ಆಕ್ಷೇಪಾರ್ಹ ಡಿಜಿಟಲ್ ದಾಖಲೆಗಳೂ ಮೊಬೈಲ್ನಲ್ಲಿ ಪತ್ತೆಯಾಗಿವೆ ಎಂದು ಹೇಳಲಾಗಿದೆ.

ಬಂಧನದ ನಂತರ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಬಳಿಕ ಪ್ರಕರಣದ ದಾಖಲಾತಿ ಹಾಗೂ ಮುಂದಿನ ತನಿಖೆಗಾಗಿ ಮತ್ತೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತನಿಖೆ ಮುಂದುವರಿದಿದೆ.

ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ಪ್ರಾಥಮಿಕ ಮಾಹಿತಿಯ ಪ್ರಕಾರ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ ಕೆಲಸ ಹುಡುಕಿಕೊಂಡು ದಾವಣಗೆರೆಗೆ ಬಂದಿದ್ದನು. ಪ್ರಾಥಮಿಕ ತನಿಖೆಯಲ್ಲಿ ಆತ ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ಚಾಟ್ ಮೂಲಕ ಸಂಪರ್ಕ ಹೊಂದಿದ್ದಾನೆ ಎಂಬುದು ಗೊತ್ತಾಗಿದೆ. ಆತನ ಮೊಬೈಲ್ನಲ್ಲಿ ಕೆಲವು ಆಕ್ಷೇಪಾರ್ಹ ವಿಷಯಗಳು ಪತ್ತೆಯಾಗಿವೆ. ಸದ್ಯ ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಮುಂದುವರಿದಿದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಹೊರಬರಲಿದೆ” ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande