
ಬಾಗಲಕೋಟೆ, 24 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ನಗರದ ಎಂಆರ್ಎನ್ ಆಯುರ್ವೇದ ಕಾಲೇಜಿನಲ್ಲಿ ಜೂನ್ 27 ಮತ್ತು 28ರಂದು ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಆಯುರ್ವೇದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಾಲೇಜಿನ ಚೇರಮನ್ ಡಾ. ಗಂಗಾಲ ತಿಳಿಸಿದ್ದಾರೆ.
ಆಯುರ್ವೇದದ ಪ್ರಾಚೀನ ಜ್ಞಾನ, ಆಧುನಿಕ ಸಂಶೋಧನೆಗಳು ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ದೇಶ-ವಿದೇಶಗಳ ಆಯುರ್ವೇದ ತಜ್ಞರು, ಸಂಶೋಧಕರು, ವೈದ್ಯರು ಹಾಗೂ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಸಂಶೋಧನೆಗಳು, ಔಷಧೀಯ ಸಸ್ಯಗಳ ಬಳಕೆ, ಪರಂಪರಾಗತ ಚಿಕಿತ್ಸಾ ಪದ್ಧತಿಗಳು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದದ ಮಹತ್ವ ಕುರಿತು ಉಪನ್ಯಾಸಗಳು ನಡೆಯಲಿವೆ.
ಆಯುರ್ವೇದದ ವೈಜ್ಞಾನಿಕ ಬೆಳವಣಿಗೆಗೆ ಉತ್ತೇಜನ ನೀಡುವ ಜೊತೆಗೆ ವಿದ್ಯಾರ್ಥಿಗಳು ಹಾಗೂ ವೈದ್ಯರಿಗೆ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಮ್ಮೇಳನವು ಉತ್ತಮ ವೇದಿಕೆಯಾಗಲಿದೆ ಎಂದು ಡಾ. ಗಂಗಾಲ ಹೇಳಿದರು.
ಸಮ್ಮೇಳನದ ಯಶಸ್ವಿ ಆಯೋಜನೆಗಾಗಿ ಕಾಲೇಜಿನ ಆಡಳಿತ ಮಂಡಳಿ, ಬೋಧಕ ಹಾಗೂ ಸಿಬ್ಬಂದಿ ವರ್ಗ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande