
ವಿಜಯಪುರ, 24 ಜೂನ್ (ಹಿ.ಸ.) :
ಆಂಕರ್ : ಹನಿಟ್ರ್ಯಾಪ್ ಮೂಲಕ ಯುವಕನೊಬ್ಬನನ್ನು ಅಪಹರಿಸಿ ₹12 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸರು ಕೇವಲ ಎರಡು ದಿನಗಳಲ್ಲಿ ಭೇದಿಸಿ, ಅಪಹರಣಕ್ಕೊಳಗಾಗಿದ್ದ ಯುವಕನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಜೂನ್ 19ರಂದು ಕಸ್ತೂರಿ ಕಾಲೋನಿಯ ಮಮ್ತಾಜ್ ಇಮಾಮಜಾಪರ್ ಚಪ್ಪರಬಂದ ಅವರು ತಮ್ಮ ಪುತ್ರ ಸಾಹಿಲ್ (22) ಕಾಣೆಯಾಗಿರುವ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಿದ್ದರು ಎಂದು ಹೇಳಿದರು.
ತನಿಖೆ ವೇಳೆ ಸಾಹಿಲ್ ಅವರ ಕುಟುಂಬ ಇತ್ತೀಚೆಗೆ ಎರಡು ಎಕರೆ ಜಮೀನನ್ನು ಸುಮಾರು ₹26 ಲಕ್ಷಕ್ಕೆ ಮಾರಾಟ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ವಿಚಾರ ಸಾಹಿಲ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಮಹಮ್ಮದ್ ರಫೀಕ್ಗೆ ತಿಳಿದಿತ್ತು. ಹಣದ ಆಸೆಯಿಂದ ಆರೋಪಿಗಳು ಸಾಹಿಲ್ ಅವರನ್ನು ಹನಿಟ್ರ್ಯಾಪ್ ಮೂಲಕ ಸೆರೆಹಿಡಿದು ಅಪಹರಿಸುವ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ವಿಜಯಲಕ್ಷ್ಮೀ ಎಂಬ ಯುವತಿಯ ಮೂಲಕ ಸಾಹಿಲ್ ಅವರೊಂದಿಗೆ ಸ್ನೇಹ ಬೆಳೆಸಿ, ಜೂನ್ 18ರಂದು ರಾತ್ರಿ ವಿಜಯಪುರದ ಸರ್ಕಾರಿ ಆಸ್ಪತ್ರೆ ಹಿಂಭಾಗದ ಖಾಲಿ ಪ್ರದೇಶಕ್ಕೆ ಕರೆಸಿಕೊಂಡಿದ್ದರು. ಅಲ್ಲಿ ಸಿದ್ಧವಾಗಿದ್ದ ಆರೋಪಿಗಳು ಸ್ಕಾರ್ಪಿಯೋ ವಾಹನದಲ್ಲಿ ಸಾಹಿಲ್ ಅವರನ್ನು ಅಪಹರಿಸಿ ಕರೆದೊಯ್ದಿದ್ದರು.
ಅಪಹರಣದ ಬಳಿಕ ಆರೋಪಿಗಳು ಸಾಹಿಲ್ ಅವರ ಮೊಬೈಲ್ ಮೂಲಕ ಅವರ ತಾಯಿಗೆ ಕರೆ ಮಾಡಿಸಿ, ನಿಮ್ಮ ಮಗ ನಮ್ಮ ಬಳಿ ಇದ್ದಾನೆ, ಬಿಡುಗಡೆ ಮಾಡಬೇಕಾದರೆ ₹12 ಲಕ್ಷ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು ಎಂದು ಎಸ್ಪಿ ಮಾಹಿತಿ ನೀಡಿದರು.
ಅಪಹರಣಕಾರರು ವಿಜಯಪುರದಿಂದ ಗದಗ, ನಂತರ ಗೋವಾ ಮಾರ್ಗವಾಗಿ ಬೆಳಗಾವಿ ಜಿಲ್ಲೆಯ ಘಟಪ್ರಭಾ ಪ್ರದೇಶಕ್ಕೆ ತೆರಳಿದ್ದರು. ಮೊಬೈಲ್ ಕರೆಗಳ ಜಾಡು ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಸ್ಥಳ ಪತ್ತೆಹಚ್ಚಿ ದಾಳಿ ನಡೆಸಿ ಸಾಹಿಲ್ ಅವರನ್ನು ರಕ್ಷಿಸಿದ್ದಾರೆ.
ಪ್ರಕರಣದಲ್ಲಿ ಗೋಪಾಲ ಯಮನಪ್ಪ ಮಾದರ, ನಿಂಗಪ್ಪ ಭೂತಾಳಿ ನಾವದಗಿ, ಮಹಮ್ಮದ್ ರಫೀಕ್ ನಧಾಪ, ವಿಜಯಲಕ್ಷ್ಮೀ ತೊನಶ್ಯಾಳ, ದಶರಥ ಸೋಮಪ್ಪ ಮಾದರ, ಶಿವಾನಂದ ನಂದಿಕೋಲಮಠ, ಸುನೀಲ್ ನಾವಿ ಹಾಗೂ ಶಿವಕುಮಾರ ಹೊಸಟ್ಟಿ ಸೇರಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ MH-06-AW-7474 ಸಂಖ್ಯೆಯ ಸ್ಕಾರ್ಪಿಯೋ ವಾಹನ ಹಾಗೂ 7 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣವನ್ನು ತ್ವರಿತವಾಗಿ ಪತ್ತೆಹಚ್ಚಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಗಾಂಧಿಚೌಕ್ ಪೊಲೀಸ್ ಠಾಣೆಯ ಪಿಐ ಪ್ರದೀಪ ತಳಕೇರಿ, ಪಿಎಸ್ಐ ಸುಷ್ಮಾ ನಂದಿಗೋಣ ಹಾಗೂ ತನಿಖಾ ತಂಡದ ಸಿಬ್ಬಂದಿಯ ಕಾರ್ಯವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande