
ಗದಗ, 22 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಕೈಗೊಳ್ಳುತ್ತಿರುವ ಪರಿಷ್ಕರಣೆ ಕ್ರಮಗಳು ಮಹಿಳೆಯರಿಗೆ ನೇರವಾಗಿ ಅನ್ಯಾಯ ಮಾಡುತ್ತಿವೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ತೀವ್ರ ಆರೋಪ ಮಾಡಿದ್ದಾರೆ. ಜೊತೆಗೆ ಯೋಜನೆಯ ಅನುಷ್ಠಾನದಲ್ಲಿನ ಗೊಂದಲಗಳು ರಾಜ್ಯದ ಆರ್ಥಿಕ ಸ್ಥಿತಿಯ ಹದಗೆಟ್ಟ ಪರಿಸ್ಥಿತಿಯನ್ನು ಬಹಿರಂಗಪಡಿಸುತ್ತಿವೆ ಎಂದು ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಲ್ಲಿ ಅನರ್ಹ ಫಲಾನುಭವಿಗಳು ಇದ್ದಾರೆ ಎಂದು ಸರ್ಕಾರವೇ ಹೇಳುತ್ತಿರುವುದು ಗಂಭೀರ ವಿರೋಧಾಭಾಸವಾಗಿದೆ ಎಂದು ಪ್ರಶ್ನಿಸಿದರು. “ಯೋಜನೆಯನ್ನು ಜಾರಿಗೆ ತಂದದ್ದೇ ಇದೇ ಸರ್ಕಾರ. ಈಗ ಅನರ್ಹರು ಇದ್ದಾರೆ ಎಂದು ಹೇಳುವುದಾದರೆ, ಕಳೆದ ಮೂರು ವರ್ಷಗಳಿಂದ ಹಣ ಹಂಚಿಕೆಯಾದ ರೀತಿಗೆ ಹೊಣೆ ಯಾರು?” ಎಂದು ಅವರು ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದರು.
ರಾಜ್ಯದ ಹಣಕಾಸು ಸ್ಥಿತಿಯ ಕುರಿತು ಸರ್ಕಾರವೇ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಅವರು, ಬೊಕ್ಕಸವನ್ನು ತಾವೇ ದುರುಪಯೋಗ ಮಾಡಿಕೊಂಡು ಈಗ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳುವುದು ಜನರ ಮುಂದೆ ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು. ಗೃಹಲಕ್ಷ್ಮಿ ಯೋಜನೆಗಾಗಿ ಮೀಸಲಿಟ್ಟಿರುವ ಸುಮಾರು 5 ಸಾವಿರ ಕೋಟಿ ರೂಪಾಯಿಗಳ ಬಳಕೆಯ ಕುರಿತು ಇದುವರೆಗೆ ಸರ್ಕಾರ ಸ್ಪಷ್ಟ ಲೆಕ್ಕ ನೀಡಿಲ್ಲ ಎಂದು ಅವರು ಹೇಳಿದರು. ವಿಧಾನಸಭೆಯಲ್ಲಿ ಶಾಸಕರು ಈ ಕುರಿತು ಪ್ರಶ್ನೆ ಕೇಳಿದರೂ ಸಮರ್ಪಕ ಉತ್ತರ ನೀಡಲು ಸರ್ಕಾರ ವಿಫಲವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿಬ್ಬಂದಿ ಕಡಿತ ಕ್ರಮಕ್ಕೂ ವಿರೋಧ
ವಿಧಾನಸಭೆಯಲ್ಲಿ ನೂರಾರು ಸಿಬ್ಬಂದಿಯನ್ನು ದಿಢೀರ್ ಕಡಿತಗೊಳಿಸಿರುವ ಕ್ರಮವನ್ನು ಸಹ ಸಿ.ಸಿ. ಪಾಟೀಲ ಟೀಕಿಸಿದರು. ಸಿಬ್ಬಂದಿಗೆ ಕೆಲಸವೇ ಇರಲಿಲ್ಲ ಎಂದಾದರೆ ಇಷ್ಟು ವರ್ಷ ಅವರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ ಎಂದು ಅವರು ಹೇಳಿದರು. ಇದು ಸಾರ್ವಜನಿಕರ ತೆರಿಗೆ ಹಣದ ದುರುಪಯೋಗವೇ ಹೊರತು ಮತ್ತೇನೂ ಅಲ್ಲ ಎಂದು ಆರೋಪಿಸಿದರು.
ಸಚಿವ ಸಂಪುಟದ ಕಾರ್ಯವೈಖರಿ ಬಗ್ಗೆ ಟೀಕೆ
ರಾಜ್ಯದ ಸಚಿವ ಸಂಪುಟದ ಕಾರ್ಯವೈಖರಿಯನ್ನೂ ಅವರು ತೀವ್ರವಾಗಿ ಟೀಕಿಸಿದರು. ಹಲವು ಸಚಿವರು ತಮ್ಮ ಖಾತೆಗಳ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಕೆಲವರು ನಿರ್ದಿಷ್ಟ ಖಾತೆ ಬೇಡ ಎಂದು ಹೇಳುತ್ತಿರುವುದು, ಮತ್ತೆ ಕೆಲವರು ಬೇರೆ ಖಾತೆ ಕೇಳುತ್ತಿರುವುದು ಆಡಳಿತದ ಅಸ್ಥಿರತೆಯನ್ನು ತೋರಿಸುತ್ತದೆ ಎಂದು ಹೇಳಿದರು.
“ಕೇವಲ 12 ಸಚಿವರಿರುವ ಸರ್ಕಾರದಲ್ಲೇ ಇಷ್ಟೊಂದು ಗೊಂದಲಗಳಿದ್ದರೆ, ಉಳಿದ ಖಾತೆಗಳ ಹಂಚಿಕೆಯ ನಂತರ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗುವುದು ಖಚಿತ” ಎಂದು ಅವರು ಲೇವಡಿ ಮಾಡಿದರು.
ಅಡ್ಡ ಮತದಾನ ಪ್ರಕರಣ ಕುರಿತು ಪ್ರತಿಕ್ರಿಯೆ
ಅಡ್ಡ ಮತದಾನ ಪ್ರಕರಣದ ಕುರಿತು ಸತ್ಯಶೋಧನಾ ಸಮಿತಿ ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರ ನಿಜಾಂಶ ಹೊರಬರಲಿದೆ ಎಂದು ಪಾಟೀಲ ಹೇಳಿದರು. ಪಕ್ಷಕ್ಕೆ ದ್ರೋಹ ಮಾಡಿದವರ ವಿರುದ್ಧ ವರಿಷ್ಠರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಕುರಿತು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಸಿ.ಸಿ. ಪಾಟೀಲ, ಆರ್ಎಸ್ಎಸ್ ಬಗ್ಗೆ ಟೀಕೆಗಳು ಹೊಸದಲ್ಲ ಎಂದು ಹೇಳಿದರು. “ಆರ್ಎಸ್ಎಸ್ ಇಂತಹ ನೂರಾರು ಗೃಹ ಸಚಿವರನ್ನು ನೋಡಿದೆ. ಸ್ವತಃ ಜವಾಹರಲಾಲ್ ನೆಹರೂ ಅವರೇ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ” ಎಂದು ಅವರು ಉಲ್ಲೇಖಿಸಿದರು.
ರಾಜ್ಯದ ಗೃಹ ಇಲಾಖೆಯು ಮೊದಲು ಕಾನೂನು ಸುವ್ಯವಸ್ಥೆ ಕಡೆ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. ರಾಜ್ಯದಲ್ಲಿ ಓಸಿ, ಮಟ್ಕಾ, ಡ್ರಗ್ಸ್ ದಂಧೆ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ತಡರಾತ್ರಿವರೆಗೆ ಬಾರ್–ಪಬ್ ಸಂಸ್ಕೃತಿ ನಿಯಂತ್ರಣವಿಲ್ಲದೆ ಮುಂದುವರಿಯುತ್ತಿದೆ ಎಂದು ಅವರು ಆರೋಪಿಸಿದರು. ಇವುಗಳನ್ನು ನಿಯಂತ್ರಿಸುವತ್ತ ಗಮನ ಹರಿಸುವ ಬದಲು ರಾಜಕೀಯ ಪತ್ರ ವ್ಯವಹಾರಗಳಲ್ಲಿ ಸಮಯ ಕಳೆಯುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತಿ
ಈ ಸುದ್ದಿಗೋಷ್ಠಿಯಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಹಾಗೂ ಮುಖಂಡರಾದ ಲಿಂಗರಾಜ ಪಾಟೀಲ, ಎಂ.ಎಂ. ಹಿರೇಮಠ, ಎಂ.ಎಸ್. ಕರಿಗೌಡ್ರ, ಉಷಾ ದಾಸರ, ಅನಿಲ ಅಬ್ಬಿಗೇರಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP