ಮೆಣಸಿನಕಾಯಿ : ತೋಟಗಾರಿಕೆ ಇಲಾಖೆಯ ಮುಂಜಾಗ್ರತಾ ಕ್ರಮ ಪಾಲನೆ ಕಡ್ಡಾಯ
ಬಳ್ಳಾರಿ, 22 ಜೂನ್ (ಹಿ.ಸ.) : ಆ್ಯಂಕರ್ : ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರು, ಬೀಜ ಮಾರಾಟಗಾರರು ಹಾಗೂ ನರ್ಸರಿ ಮಾಲೀಕರು ನಷ್ಟ ಮತ್ತು ಕಾನೂನು ಕ್ರಮಗಳಿಂದ ಪಾರಾಗಲು ಕಡ್ಡಾಯವಾಗಿ ತೋಟಗಾರಿಕೆ ಇಲಾಖೆಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನ
ಮೆಣಸಿನಕಾಯಿ : ತೋಟಗಾರಿಕೆ ಇಲಾಖೆಯ ಮುಂಜಾಗ್ರತಾ ಕ್ರಮ ಪಾಲನೆ ಕಡ್ಡಾಯ


ಬಳ್ಳಾರಿ, 22 ಜೂನ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರು, ಬೀಜ ಮಾರಾಟಗಾರರು ಹಾಗೂ ನರ್ಸರಿ ಮಾಲೀಕರು ನಷ್ಟ ಮತ್ತು ಕಾನೂನು ಕ್ರಮಗಳಿಂದ ಪಾರಾಗಲು ಕಡ್ಡಾಯವಾಗಿ ತೋಟಗಾರಿಕೆ ಇಲಾಖೆಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನೆ ಅವರು ತಿಳಿಸಿದ್ದಾರೆ.

*ಪ್ರಮುಖ ಸೂಚನೆಗಳು:*

ನರ್ಸರಿಗಳಲ್ಲಿ ಉತ್ತಮವಾಗಿ ಬೀಜೋಪಚಾರ ಮಾಡಿ ಬೆಳೆಸಿದ ಸಸಿಗಳನ್ನು ಮಾತ್ರ ಖರೀದಿಸುವುದು ಸೂಕ್ತ. ಬೀಜ ಪರವಾನಗಿ ಮತ್ತು ಜಿ.ಎಸ್.ಟಿ. ನೋಂದಾಯಿತ ಬೀಜ ಮಳಿಗೆ ಅಥವಾ ನರ್ಸರಿಗಳ ಮೂಲಕವೇ ಸಸಿ/ಬೀಜಗಳನ್ನು ಖರೀದಿಸಬೇಕು.

ಅಧಿಕೃತ ಕಂಪನಿ ಅಥವಾ ಮಾರಾಟಗಾರರಿಂದ ಖರೀದಿಸಿದ ಬೀಜಗಳ ಲಾಟ್ ನಂಬರ್ ನಮೂದಿಸಿರುವ ಮೂಲ ಬಿಲ್ಲನ್ನು ಪಡೆದು, ಬೆಳೆ ಮಾರಾಟವಾಗುವವರೆಗೂ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಬೀಜ ಮತ್ತು ಸಸಿಗಳನ್ನು ಪಹಣಿಯಲ್ಲಿರುವ ರೈತರ ಹೆಸರಿನಲ್ಲೇ ಖರೀದಿಸಿ ಬಿಲ್ ಪಡೆಯಬೇಕು.

ಯಾವುದೇ ಕಾರಣಕ್ಕೂ ಬಿಡಿ ಅಥವಾ ಅನಧಿಕೃತ ಮಾರಾಟಗಾರರಿಂದ ಬೀಜ/ಸಸಿಗಳನ್ನು ಖರೀದಿಸಬಾರದು. ಒಂದು ವೇಳೆ ಹಾಗೆ ಖರೀದಿಸಿ ನಷ್ಟ ಸಂಭವಿಸಿದರೆ ಅದಕ್ಕೆ ತೋಟಗಾರಿಕೆ ಇಲಾಖೆ ಅಥವಾ ಜಿಲ್ಲಾಡಳಿತ ಜವಾಬ್ದಾರಿಯಾಗುವುದಿಲ್ಲ.

*ಬೀಜ ಮಾರಾಟಗಾರರು ಮತ್ತು ನರ್ಸರಿ ಮಾಲೀಕರು ಪಾಲಿಸಬೇಕಾದ ನಿಯಮಗಳು:*

ಜಿಲ್ಲೆಯ ಎಲ್ಲಾ ಬೀಜ/ಸಸಿ ಮಾರಾಟಗಾರರಿಗೆ ಜಿ.ಎಸ್.ಟಿ. ನೋಂದಣಿ ಹಾಗೂ ಬೀಜ ಮಾರಾಟಗಾರರಿಗೆ ಬೀಜ ಪರವಾನಗಿ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.

ಅಧಿಕೃತ ಕಂಪನಿಗಳ ವಿತರಕರಾಗಿದ್ದರೆ, ಕೇವಲ ಆಯಾ ಕಂಪನಿಯ ಅಧಿಕೃತ ಬೀಜಗಳನ್ನು ಮಾತ್ರ ಮಾರಾಟ ಮಾಡಬೇಕು.

ನರ್ಸರಿಗಳಲ್ಲಿ ಬಳಸುವ ಬೀಜ, ಗೊಬ್ಬರ, ರೋಗ ಮತ್ತು ಕೀಟನಾಶಕಗಳ ಸಂಪೂರ್ಣ ವಿವರಗಳನ್ನು ವಹಿಯಲ್ಲಿ ನಮೂದಿಸಿ ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ರೈತರಿಂದ ಬೀಜ ಪಡೆದ ಮತ್ತು ಸಸಿ ವಿತರಿಸಿದ ದಿನಾಂಕಗಳ ವಹಿಯನ್ನೂ ಇಡಬೇಕು.

ಸಸಿಗಳನ್ನು ಉತ್ಪಾದಿಸಲು ಕೇವಲ ಶುದ್ಧೀಕರಿಸಿದ ತೆಂಗಿನ ನಾರನ್ನು ಮಾತ್ರ ಖರೀದಿಸಿ ಉಪಯೋಗಿಸಬೇಕು ಹಾಗೂ ಅದರ ಬಿಲ್ಲುಗಳ ವಿವರವನ್ನು ವಹಿಯಲ್ಲಿ ದಾಖಲಿಸಬೇಕು. ರೈತರು ತಂದುಕೊಡುವ ಬೀಜಗಳನ್ನು ನಾಟಿ ಮಾಡಿ ಸಸಿ ಸಿದ್ಧಪಡಿಸಿಕೊಡುವ ಮುನ್ನ, ರೈತರು ಯಾವ ಕಂಪನಿಯ ಬೀಜ ಖರೀದಿಸಿದ್ದಾರೆ ಎಂಬುದನ್ನು ಖಾತರಿಪಡಿಸಿಕೊಂಡು, ಆ ಖರೀದಿಯ ಬಿಲ್ನ ನಕಲು ಪ್ರತಿಯನ್ನು ಪಡೆದು ವಹಿಯಲ್ಲಿ ದಾಖಲಿಸುವುದು ಕಡ್ಡಾಯ.

ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಬಿಡಿ ಬೀಜಗಳನ್ನು ಮಾರಾಟ ಮಾಡಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿ ಅನಧಿಕೃತ ಮಾರಾಟ ಮಾಡುವುದು ಕಂಡುಬಂದಲ್ಲಿ ಅಥವಾ ವರದಿಯಾದಲ್ಲಿ ಅಂತಹ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande