ಮಹೇಶ್ ತಳವಾರ್ಗೆ ಪೊಲೀಸರ ಗುಂಡೇಟು
ವಿಜಯಪುರ, 22 ಜೂನ್ (ಹಿ.ಸ.) : ಆಂಕರ್ : ಭೀಮಾತೀರವನ್ನು ಮತ್ತೆ ಬೆಚ್ಚಿಬೀಳಿಸಿದ್ದ ವಿಜಯಪುರ ಜಿಲ್ಲೆಯ ಗೋವಿಂದಪುರ ಸಾಮೂಹಿಕ ಹತ್ಯಾಕಾಂಡ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಆರು ಜನರ ಬರ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾದ ಮಹೇಶ್. ತಳವಾರ್ನನ್ನು ಚಡಚಣ ಪೊಲೀಸರು ಕಾರ್ಯಾಚರಣ
Arrest


ವಿಜಯಪುರ, 22 ಜೂನ್ (ಹಿ.ಸ.) :

ಆಂಕರ್ : ಭೀಮಾತೀರವನ್ನು ಮತ್ತೆ ಬೆಚ್ಚಿಬೀಳಿಸಿದ್ದ ವಿಜಯಪುರ ಜಿಲ್ಲೆಯ ಗೋವಿಂದಪುರ ಸಾಮೂಹಿಕ ಹತ್ಯಾಕಾಂಡ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಆರು ಜನರ ಬರ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾದ ಮಹೇಶ್. ತಳವಾರ್ನನ್ನು ಚಡಚಣ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧನದ ವೇಳೆ ನಡೆದ ಮುಖಾಮುಖಿಯಲ್ಲಿ ಆರೋಪಿಯ ಕಾಲಿಗೆ ಗುಂಡು ತಗುಲಿದ್ದು, ಸದ್ಯ ಆತನನ್ನು ಪೊಲೀಸ್ ಭದ್ರತೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇ 29ರಂದು ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಭೀಕರ ಘಟನೆಯಲ್ಲಿ ನಿರಾಳೆ ಕುಟುಂಬದ ಐವರು ಸೇರಿ ಒಟ್ಟು ಆರು ಜನರು ಹತ್ಯೆಯಾಗಿದ್ದರು. ಈ ಘಟನೆ ವಿಜಯಪುರ ಜಿಲ್ಲೆಯಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಾಗಿ ಶೋಧ ನಡೆಸುತ್ತಿದ್ದರು.

ಪೊಲೀಸ್ ಮಾಹಿತಿಯ ಪ್ರಕಾರ, ಭಾನುವಾರ ತಡರಾತ್ರಿ ಇಟ್ಟಿಂಗಿಹಾಳ ಗ್ರಾಮದ ಹೊರವಲಯದಲ್ಲಿ ಮಹೇಶ್ ತಳವಾರ್ ಇರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಚಡಚಣ ಸಿಪಿಐ ಪರಶುರಾಮ್ ಮನಗೂಳಿ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆಯಲು ಮುಂದಾಗಿತ್ತು.

ಈ ವೇಳೆ ಆರೋಪಿ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರ ಸೂಚನೆಗೂ ಸ್ಪಂದಿಸದೆ ಕಲ್ಲು ತೂರಾಟ ನಡೆಸಿದ್ದಾನೆ ಎನ್ನಲಾಗಿದೆ. ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದು, ಆರೋಪಿಯ ಬಲಗಾಲಿಗೆ ಗುಂಡೇಟು ತಗುಲಿದೆ ಎಂದು ತಿಳಿದುಬಂದಿದೆ.

ಕಾರ್ಯಾಚರಣೆಯಲ್ಲಿ ಚಡಚಣ ಪೊಲೀಸ್ ಠಾಣೆಯ ಸಿಬ್ಬಂದಿ ಶೇಖರ್ ಪವಾರ್ ಹಾಗೂ ವಿಜಯಕುಮಾರ್ ಬನಸೋಡೆ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

₹15 ಲಕ್ಷ ಸುಪಾರಿ ಆರೋಪದ ತನಿಖೆ

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೋವಿಂದಪುರ ಹತ್ಯಾಕಾಂಡದ ಹಿಂದೆ ಸುಪಾರಿ ಕೋನ ಇರುವ ಶಂಕೆ ವ್ಯಕ್ತವಾಗಿದೆ. ಸುಮಾರು ₹15 ಲಕ್ಷ ಮೊತ್ತದ ಸುಪಾರಿ ಪಡೆದು ಕೃತ್ಯ ನಡೆಸಲಾಗಿದೆ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಆದರೆ ಪ್ರಕರಣದ ಸಂಪೂರ್ಣ ಸತ್ಯಾಂಶ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ.

ಮಹೇಶ್ ತಳವಾರ್ ಬಂಧನದೊಂದಿಗೆ ಪ್ರಕರಣದ ತನಿಖೆಗೆ ಹೊಸ ದಿಕ್ಕು ಸಿಕ್ಕಿದ್ದು, ಹತ್ಯೆಯ ಹಿಂದಿರುವ ಇತರ ಆರೋಪಿಗಳು ಹಾಗೂ ಸಂಚಿನ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಭೀಮಾತೀರದಲ್ಲಿ ಮತ್ತೆ ಆತಂಕ

ದಶಕಗಳ ಕಾಲ ಅಪರಾಧ ಚಟುವಟಿಕೆಗಳಿಗೆ ಸುದ್ದಿಯಾಗಿದ್ದ ಭೀಮಾತೀರ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಾಂತಿ ನೆಲೆಸಿತ್ತು. ಆದರೆ ಗೋವಿಂದಪುರದ ಸಾಮೂಹಿಕ ಹತ್ಯೆ ಪ್ರಕರಣ ಮತ್ತೆ ಆತಂಕದ ವಾತಾವರಣ ನಿರ್ಮಿಸಿತ್ತು. ಪ್ರಮುಖ ಆರೋಪಿಯ ಬಂಧನದಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗಿದೆ.

ಆದರೆ, ಈ ಪ್ರಕರಣದ ಹಿಂದಿರುವ ಸಂಪೂರ್ಣ ಜಾಲ ಹಾಗೂ ಹತ್ಯೆಯ ನಿಜವಾದ ಕಾರಣಗಳನ್ನು ಪೊಲೀಸರು ಬಹಿರಂಗಪಡಿಸಬೇಕಿದೆ. ಗಾಯಗೊಂಡ ಆರೋಪಿ ವಿಚಾರಣೆ ಬಳಿಕ ಪ್ರಕರಣದ ಇನ್ನಷ್ಟು ರಹಸ್ಯಗಳು ಹೊರಬರುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande