ರಾಜ್ಯ ಮಟ್ಟದ ಸ್ಲಂ ಪ್ರತಿನಿಧಿಗಳ ಸಮ್ಮೇಳನದಲ್ಲಿ ಆಕ್ರೋಶ
ಗದಗ, 22 ಜೂನ್ (ಹಿ.ಸ.) : ಆ್ಯಂಕರ್ : ಬಡಜನರ ಕಲ್ಯಾಣ, ಉಚಿತ ಶಿಕ್ಷಣ, ಆರೋಗ್ಯ ಹಾಗೂ ವಸತಿ ಭರವಸೆ ನೀಡುತ್ತಾ ಅಧಿಕಾರಕ್ಕೆ ಬಂದ ಸರ್ಕಾರಗಳು ನಂತರ ಶ್ರೀಮಂತರು ಹಾಗೂ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವುದು ಅತ್ಯಂತ ವಿಷಾದನೀಯ ಬೆಳವಣಿಗೆ ಎಂದು ಬೇಲೂರು ಗುರುಬಸವೇಶ್ವರ ಮಠದ ಪರಮಪೂಜ್ಯ ಡ
ಫೋಟೋ


ಗದಗ, 22 ಜೂನ್ (ಹಿ.ಸ.) :

ಆ್ಯಂಕರ್ : ಬಡಜನರ ಕಲ್ಯಾಣ, ಉಚಿತ ಶಿಕ್ಷಣ, ಆರೋಗ್ಯ ಹಾಗೂ ವಸತಿ ಭರವಸೆ ನೀಡುತ್ತಾ ಅಧಿಕಾರಕ್ಕೆ ಬಂದ ಸರ್ಕಾರಗಳು ನಂತರ ಶ್ರೀಮಂತರು ಹಾಗೂ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವುದು ಅತ್ಯಂತ ವಿಷಾದನೀಯ ಬೆಳವಣಿಗೆ ಎಂದು ಬೇಲೂರು ಗುರುಬಸವೇಶ್ವರ ಮಠದ ಪರಮಪೂಜ್ಯ ಡಾ. ಪ್ರಭು ಮಹಾಂತ ಮಹಾಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗದಗ ನಗರದ ಲಾಯನ್ಸ್ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಸಹಯೋಗದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿನಿಧಿಗಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಗಳು ಚುನಾವಣಾ ಸಮಯದಲ್ಲಿ ನೀಡುವ ಭರವಸೆಗಳು ಅಧಿಕಾರಕ್ಕೆ ಬಂದ ನಂತರ ಮರೆಯಾಗುತ್ತಿರುವುದು ದುರಂತವಾಗಿದ್ದು, ವಿಶೇಷವಾಗಿ ಗ್ಯಾರಂಟಿ ಯೋಜನೆಗಳ ಆಧಾರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವೇ ಇದೀಗ ಫಲಾನುಭವಿಗಳ ಮರುಪರಿಶೀಲನೆ ನಡೆಸುತ್ತಿರುವುದು ಬಡವರನ್ನು ವಂಚಿಸುವ ಪ್ರಯತ್ನವೆಂದು ಅವರು ಆರೋಪಿಸಿದರು. ಸ್ಲಂ ನಿವಾಸಿಗಳ ಹಕ್ಕುಗಳು, ವಸತಿ ಭದ್ರತೆ ಹಾಗೂ ಮೂಲಸೌಕರ್ಯಗಳನ್ನು ಸರ್ಕಾರಗಳು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.

“ಬಡವರ ಹೋರಾಟಗಳಿಗೆ ನಾನು ಸದಾ ಬೆಂಬಲವಾಗಿ ನಿಲ್ಲುತ್ತೇನೆ. ಸಮಾಜದ ಅಂಚಿನಲ್ಲಿರುವ ಸ್ಲಂ ಜನರ ಬದುಕು ಸುಧಾರಣೆ ಆಗದೆ ಯಾವುದೇ ಅಭಿವೃದ್ಧಿ ಅರ್ಥವಿಲ್ಲ,” ಎಂದು ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮ್ಮೇಳನದ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಸರ್ಕಾರಗಳು ಮರೆತಿರುವುದು ನೇರವಾಗಿ ಜನವಂಚನೆಯಾಗಿದೆ ಎಂದು ಆರೋಪಿಸಿದರು. ಸ್ಲಂ ನಿವಾಸಿಗಳಿಗೆ ಉಚಿತ ಮನೆ, ನಿವೇಶನ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಹೇಳಿದರು.

ಬಡವರ ಬದುಕು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದ್ದು, ಸರ್ಕಾರಗಳು ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಮಾತನಾಡಿ, ದೇಶದಲ್ಲಿ ಸಾರ್ವಜನಿಕ ಆಸ್ತಿಗಳ ಖಾಸಗೀಕರಣ ವೇಗವಾಗಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು. ಇದರ ಪರಿಣಾಮವಾಗಿ ಬಡವರು ಇನ್ನೂ ಮನೆ ಹಾಗೂ ನಿವೇಶನಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ಮುಂದುವರಿದಿದ್ದು, ಇದು ಸರ್ಕಾರಗಳ ಸಾಮಾಜಿಕ ನ್ಯಾಯದ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮ್ಮೇಳನಕ್ಕೂ ಮುನ್ನ ಗದಗ–ಬೆಟಗೇರಿ ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬೃಹತ್ ಜಾಥಾ ನಡೆಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಪ್ರತಿನಿಧಿಗಳು ಭಾಗವಹಿಸಿದ ಈ ಜಾಥಾ ನಗರದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಸ್ಲಂ ಜನರ ಹಕ್ಕುಗಳು, ವಸತಿ ಹಕ್ಕು ಮತ್ತು ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದರು.

ಕಾರ್ಯಕ್ರಮದಲ್ಲಿ ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್. ಹಡಪದ, ಬಸವರಾಜ ಪೂಜಾರ, ಪೂರ್ಣ ರವಿಶಂಕರ್, ವೆಂಕಟೇಶಯ್ಯ, ಶೇಖಣ್ಣ ಕವಳಿಕಾಯಿ, ಇಮ್ಮಿಯಾಜ್ ಆರ್. ಮಾನ್ವಿ, ಅಶೋಕ ಕುಡತಿನಿ, ಜನಾರ್ಧನ ಹಳ್ಳಿಬೆಂಚಿ, ಶೋಭಾ ಕಮತರ, ರೇಣುಕಾ ಸರಡಗಿ ಸೇರಿದಂತೆ ಅನೇಕ ಮುಖಂಡರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಮ್ಮೇಳನದ ಅಂತ್ಯದಲ್ಲಿ ಸರ್ಕಾರವು ತಕ್ಷಣ ಸ್ಲಂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದು, ಫಲಾನುಭವಿಗಳ ಮರುಪರಿಶೀಲನೆ ಪ್ರಕ್ರಿಯೆಯನ್ನು ಕೈಬಿಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande