
ಕೋಲಾರ, ಜೂ. ೨೨ (ಹಿ.ಸ) :
ಆ್ಯಂಕರ್ : ಬಾಲ್ಯವಿವಾಹವನ್ನು ತಡೆದು ಇಲಾಖೆಗೆ ಮಾಹಿತಿ ನೀಡಿದ್ದಕ್ಕೆ ಆಕ್ರೋಶಗೊಂಡ ಅಪ್ರಾಪ್ತ ಬಾಲಕಿಯೊಬ್ಬಳು, ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಯ ಕುತ್ತಿಗೆಗೆ ವೇಲ್ (ದುಪಟ್ಟಾ) ಬಿಗಿದು ಕೊಲೆಗೆ ಯತ್ನಿಸಿರುವ ಭೀಕರ ಘಟನೆ ಕೋಲಾರ ಜಿಲ್ಲೆಯಲ್ಲಿ ಜರುಗಿದೆ.
ಮುಳಬಾಗಿಲು ತಾಲ್ಲೂಕಿನ ಜಿ. ಕುರುಬರಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಹಲ್ಲೆಗೊಳಗಾದ ದುರ್ದೈವಿ. ಸದ್ಯ ತೀವ್ರವಾಗಿ ಅಸ್ವಸ್ಥಗೊಂಡಿರುವ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿ. ಕುರುಬರಹಳ್ಳಿ ಗ್ರಾಮದಲ್ಲಿ ಕೆಲವು ತಿಂಗಳುಗಳ ಹಿಂದೆ ಬಾಲ್ಯವಿವಾಹ ನಡೆಯುತ್ತಿದ್ದ ಕುರಿತು ಪದ್ಮಾವತಿ ಅವರು ತಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಬಾಲ್ಯವಿವಾಹವನ್ನು ಯಶಸ್ವಿಯಾಗಿ ತಡೆದಿದ್ದರು. ಅಲ್ಲದೆ, ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ ಕೆ.ಜಿ.ಎಫ್.ನ ಬಾಲಮಂದಿರಕ್ಕೆ ಒಪ್ಪಿಸಿದ್ದರು.
ಬಾಲಮಂದಿರದಲ್ಲಿದ್ದ ಬಾಲಕಿಯನ್ನು ಆರು ತಿಂಗಳ ಬಳಿಕ ಪೋಷಕರು ಇತ್ತೀಚೆಗಷ್ಟೇ ವಾಪಸ್ ಮನೆಗೆ ಕರೆತಂದಿದ್ದರು. ಆದರೆ, ತನ್ನ ಮದುವೆ ಮುರಿಯಲು ಕಾರಣಳಾದವಳು ಇದೇ ಅಂಗನವಾಡಿ ಕಾರ್ಯಕರ್ತೆ ಎಂಬ ದ್ವೇಷ ಸಾಧಿಸಿದ ಬಾಲಕಿ, ಪದ್ಮಾವತಿ ಅವರು ದೇವಸ್ಥಾನದಲ್ಲಿದ್ದ ವೇಳೆ ಏಕಾಏಕಿ ದಾಳಿ ಮಾಡಿದ್ದಾಳೆ. ತನ್ನ ವೇಲ್ನಿಂದ ಪದ್ಮಾವತಿ ಅವರ ಕುತ್ತಿಗೆಯನ್ನು ಬಲವಾಗಿ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾಳೆ.
ದಾಳಿಯಿಂದಾಗಿ ತೀವ್ರವಾಗಿ ಅಸ್ವಸ್ಥಗೊಂಡ ಪದ್ಮಾವತಿ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಘಟನೆಗೆ ಸಂಬAಧಿಸಿದAತೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಸ್ತುತ ಪ್ರಕರಣವು ತನಿಖಾ ಹಂತದಲ್ಲಿದ್ದು, ಆಸ್ಪತ್ರೆಯ ವೈದ್ಯಾಧಿಕಾರಿಗಳು ನೀಡುವ ವೈದ್ಯಕೀಯ ವರದಿಯ ಆಧಾರದ ಮೇಲೆ ಸೂಕ್ತ ಕಾನೂನು ಸೆಕ್ಷನ್ಗಳನ್ನು ಜಾರಿಗೊಳಿಸುವುದಾಗಿ ಪೊಲೀಸರು ಸಂತ್ರಸ್ತೆಯ ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಆದರೆ, ಘಟನೆಯು ಅತ್ಯಂತ ತೀವ್ರ ಸ್ವರೂಪದ್ದಾಗಿದ್ದು, ಪ್ರಾಣಕ್ಕೇ ಕಂಟಕ ತಂದಿರುವುದರಿAದ ಆರೋಪಿಗಳ ವಿರುದ್ಧ ಕಡ್ಡಾಯವಾಗಿ ಕೊಲೆ ಯತ್ನ ಸೆಕ್ಷನ್ ಅಳವಡಿಸಬೇಕು ಮತ್ತು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪದ್ಮಾವತಿ ಅವರ ಕುಟುಂಬಸ್ಥರು ಹಾಗೂ ಕರ್ನಾಟಕ ದಲಿತ ರಕ್ಷಣಾ ಸಮೀತಿ ಸಂಘಟನೆ ಬಲವಾಗಿ ಆಗ್ರಹಿಸಿದ್ದಾರೆ.
ಕರ್ನಾಟಕ ದಲಿತ ರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯ ಕಾರ್ಯದರ್ಶಿ ಎಂ.ಎಸ್ ನಾರಾಯಣಸ್ವಾಮಿ ಮಾತನಾಡಿ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗಿನ ವಿರುದ್ಧ ಕಾನೂನುಬದ್ಧವಾಗಿ ಹೋರಾಡಿ, ಮದುವೆ ತಡೆದಿದ್ದಕ್ಕೆ ಕಾರ್ಯಕರ್ತೆಯ ಮೇಲೆ ಈ ರೀತಿ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಖಂಡನೀಯ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ರಕ್ಷಣೆ ಇಲ್ಲದಂತಾಗಿದೆ ಕೇವಲ ಹಲ್ಲೆಯಷ್ಟೇ ಅಲ್ಲದೆ, ಕುತ್ತಿಗೆ ಹಿಸುಕಿ, ತಲೆಯನ್ನು ಗೋಡೆಗೆ ಚಚ್ಚಿ ಕೊಲೆ ಮಾಡಲು ಯತ್ನಿಸಲಾಗಿದೆ. ಸಂತ್ರಸ್ತೆ ಸದ್ಯ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ದಾಳಿ ನಡೆಸಿದ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಕರ್ತವ್ಯ ನಿರತ ಮಹಿಳಾ ನೌಕರರ ಸುರಕ್ಷತೆಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು. ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಜೈಲಿಗಟ್ಟದಿದ್ದರೆ, ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿವಿಧ ಸಂಘಟನೆಗಳನ್ನು ಒಟ್ಟುಗೂಡಿಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ಪದ್ಮಾವತಿ ಸಹೋದರ ಗೋಂವಿರಾಜು ಕರ್ನಾಟಕ ದಲಿತ ರಕ್ಷಣಾ ಸಮಿತಿಯರಾಜ್ಯ ಕಾರ್ಯಧ್ಯಕ್ಷರು ಕಲ್ಕೆರೆ ವಿಜಯ್ ಕುಮಾರ್, ಸುನಿಲ್ ಮತ್ತು ಕುಟುಂಬಸ್ಥರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್