ಹಳೆಯ ಕುಸ್ತಿ ತರಬೇತಿ ವ್ಯವಸ್ಥೆಯನ್ನೇ ಮುಂದುವರಿಸಿ : ಕೃಷ್ಣಾ ಹಡಪದ ಆಗ್ರಹ
ಗದಗ, 22 ಜೂನ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ವಸತಿ ನಿಲಯದಲ್ಲಿ ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದ ಸಾಂಪ್ರದಾಯಿಕ ಕುಸ್ತಿ ತರಬೇತಿ ವ್ಯವಸ್ಥೆಯನ್ನು ಹೊಸ ನಿಯಮಗಳ ಹೆಸರಿನಲ್ಲಿ ಸ್ಥಗಿತಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಜಿಲ್
ಫೋಟೋ


ಗದಗ, 22 ಜೂನ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ವಸತಿ ನಿಲಯದಲ್ಲಿ ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದ ಸಾಂಪ್ರದಾಯಿಕ ಕುಸ್ತಿ ತರಬೇತಿ ವ್ಯವಸ್ಥೆಯನ್ನು ಹೊಸ ನಿಯಮಗಳ ಹೆಸರಿನಲ್ಲಿ ಸ್ಥಗಿತಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಜಿಲ್ಲೆಯ ಕುಸ್ತಿ ಕ್ರೀಡಾಪ್ರೇಮಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಬಡ ಹಾಗೂ ಗ್ರಾಮೀಣ ಹಿನ್ನೆಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವಂತಹ ಈ ನಿರ್ಧಾರವನ್ನು ಸರ್ಕಾರ ಹಾಗೂ ಕ್ರೀಡಾ ಇಲಾಖೆ ತಕ್ಷಣವೇ ಹಿಂಪಡೆಯಬೇಕು ಎಂದು ಪ್ರಮುಖ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಆಗ್ರಹಿಸಿದ್ದಾರೆ.

ಈ ಕುರಿತು ಗದಗ ಜಿಲ್ಲಾ ಕುಸ್ತಿಪಟುಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಸಂತ ಪರಸಪ್ಪ ಸಿದ್ದಮ್ಮನಹಳ್ಳಿ, ಗದಗ ಜಿಲ್ಲಾ ಭಾರತೀಯ ಶೈಲಿ ಕುಸ್ತಿ ಪೈಲ್ವಾನರ ಸಂಘದ ಅಧ್ಯಕ್ಷ ದೇವಪ್ಪ ಗಡೆದ, ಕುಸ್ತಿ ತರಬೇತಿ ಪಡೆಯುತ್ತಿರುವ ಮಕ್ಕಳ ಪಾಲಕರು ಹಾಗೂ ಹಲವು ಹಿರಿಯ ಪೈಲ್ವಾನರೊಂದಿಗೆ ಜಂಟಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಗದಗ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ 5ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಕುಸ್ತಿ ತರಬೇತಿ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತಿತ್ತು. ಈ ವ್ಯವಸ್ಥೆಯ ಮೂಲಕ ನೂರಾರು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.

ಆದರೆ ಈಗ ಕ್ರೀಡಾ ಇಲಾಖೆಯು ‘ಬುನಾದಿ ತರಬೇತಿ’ ಎಂಬ ಹೊಸ ನಿಯಮವನ್ನು ಜಾರಿಗೆ ತಂದು ಕೇವಲ 5ರಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ತರಬೇತಿಯನ್ನು ಸೀಮಿತಗೊಳಿಸಲು ಮುಂದಾಗಿದೆ. ಈ ನಿರ್ಧಾರವು ಕುಸ್ತಿ ಕ್ರೀಡೆಯ ಬೆಳವಣಿಗೆಗೆ ಮಾರಕವಾಗಿದ್ದು, 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತರಬೇತಿ ದೊರೆಯದಿದ್ದರೆ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ಹೇಗೆ ಸಿದ್ಧರಾಗಲು ಸಾಧ್ಯ ಎಂಬ ಪ್ರಶ್ನೆಯನ್ನು ಅವರು ಎತ್ತಿದರು. ಕುಸ್ತಿ ಎಂಬುದು ಕೇವಲ ಆಟವಲ್ಲ; ಅದು ದೈಹಿಕ ಸಾಮರ್ಥ್ಯ, ಮಾನಸಿಕ ದೃಢತೆ ಮತ್ತು ನಿರಂತರ ಅಭ್ಯಾಸವನ್ನು ಬೇಡುವ ಕ್ರೀಡೆಯಾಗಿದೆ.

ಹದಿಹರೆಯದ ಹಂತದಲ್ಲಿ ನಿರಂತರ ತರಬೇತಿ ದೊರೆಯದಿದ್ದರೆ ಕ್ರೀಡಾಪಟುಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆದ್ದರಿಂದ 5ರಿಂದ 10ನೇ ತರಗತಿಯವರೆಗಿನ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದ ಹಳೆಯ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಒಂದು ವರ್ಷದಿಂದ ಕೋಚ್ ಇಲ್ಲ; ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ

ಗದಗಿನ ಹಿರಿಯ ನಾಯಕ ಹಾಗೂ ಸಚಿವ ಎಚ್.ಕೆ. ಪಾಟೀಲ ಅವರ ಮುತುವರ್ಜಿಯಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಕುಸ್ತಿ ಅಖಾಡ ಹಾಗೂ ಅಗತ್ಯ ಕ್ರೀಡಾ ಪರಿಕರಗಳು ಲಭ್ಯವಿದ್ದರೂ, ಕಳೆದ ಸುಮಾರು ಒಂದು ವರ್ಷದಿಂದ ತರಬೇತುದಾರರೇ ಇಲ್ಲದಿರುವುದು ಇಲಾಖೆಯ ನಿರ್ಲಕ್ಷ್ಯದ ಪರಾಕಾಷ್ಠೆಯಾಗಿದೆ ಎಂದು ಕೃಷ್ಣಾ ಹಡಪದ ಆರೋಪಿಸಿದರು.

ವಸತಿ ನಿಲಯದಲ್ಲಿ ತರಬೇತಿ ವ್ಯವಸ್ಥೆ ಇಲ್ಲದ ಕಾರಣ ಬಡ ಕುಟುಂಬಗಳ ಮಕ್ಕಳು ಹೆಚ್ಚಿನ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ನಿರ್ಮಿಸಿರುವ ಮೂಲಸೌಕರ್ಯ ಬಳಕೆಯಾಗದೆ ಉಳಿದಿದ್ದು, ಪ್ರತಿಭಾವಂತ ಮಕ್ಕಳ ಕ್ರೀಡಾ ಬದುಕು ಕತ್ತಲೆಯತ್ತ ಸಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಮಟ್ಟದ ಸಾಧಕರನ್ನು ನೀಡಿದ ಗದಗ ಕುಸ್ತಿ ನಿಲಯ ಗದಗ ಕ್ರೀಡಾ ವಸತಿ ನಿಲಯವು ರಾಜ್ಯದ ಪ್ರಮುಖ ಕುಸ್ತಿ ತರಬೇತಿ ಕೇಂದ್ರಗಳಲ್ಲಿ ಒಂದಾಗಿದ್ದು, ಇಲ್ಲಿಂದ ಅನೇಕ ಸಾಧಕರು ಹೊರಹೊಮ್ಮಿದ್ದಾರೆ. ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿ, ಏಕಲವ್ಯ ಪ್ರಶಸ್ತಿ ಪಡೆದ ಕು. ಪ್ರೇಮಾ ಹುಚ್ಚಣ್ಣವರ, ರಾಷ್ಟ್ರೀಯ ಚಿನ್ನದ ಪದಕ ವಿಜೇತೆ ಹಾಗೂ ಕರ್ನಾಟಕ ಕೇಸರಿ ಪ್ರಶಸ್ತಿ ಪುರಸ್ಕೃತ ಕು. ಶಾರದಾ ಬೇಲೇರಿ, ಕರ್ನಾಟಕ ಕುಮಾರ ಪ್ರಶಸ್ತಿ ವಿಜೇತ ಕು. ಪಾಲಾಕ್ಷಗೌಡ ಬೇಲೇರಿ, ರಾಷ್ಟ್ರೀಯ ಮಟ್ಟದ ಪದಕ ವಿಜೇತರಾದ ಕು. ಪ್ರಥಮಗೌಡ ಬೇಲೇರಿ ಹಾಗೂ ಕು. ಅನಿಲ್ ದರ್ವೇಷಿ ಸೇರಿದಂತೆ ಹಲವಾರು ಕ್ರೀಡಾಪಟುಗಳು ಈ ವಸತಿ ನಿಲಯದ ಕೊಡುಗೆಯ ಫಲವಾಗಿದ್ದಾರೆ.

ಇಂತಹ ಸಾಧಕರನ್ನು ದೇಶಕ್ಕೆ ನೀಡಿರುವ ಸಂಸ್ಥೆಯನ್ನೇ ದುರ್ಬಲಗೊಳಿಸುವುದು ಜಿಲ್ಲೆಯ ಕ್ರೀಡಾ ಪರಂಪರೆಗೆ ಹೊಡೆತ ನೀಡಿದಂತಾಗುತ್ತದೆ ಎಂದು ಕುಸ್ತಿ ಅಭಿಮಾನಿಗಳು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿಗಳ ಪತ್ರಕ್ಕೂ ಸ್ಪಂದಿಸದ ಇಲಾಖೆ

ಈ ಗಂಭೀರ ಸಮಸ್ಯೆಯನ್ನು ಮನಗಂಡಿರುವ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಕೂಡ ಕುಸ್ತಿ ವಿಭಾಗವನ್ನು ಮುಂದುವರಿಸುವಂತೆ ಕ್ರೀಡಾ ಇಲಾಖೆಯ ಆಯುಕ್ತರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಆದರೆ ಜಿಲ್ಲಾಡಳಿತದ ಮನವಿಗೂ ಕ್ರೀಡಾ ಇಲಾಖೆ ಸೂಕ್ತ ಸ್ಪಂದನೆ ನೀಡದಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದು ಕೃಷ್ಣಾ ಹಡಪದ ಟೀಕಿಸಿದರು.

ಸಚಿವ ಎಚ್.ಕೆ. ಪಾಟೀಲ ಮಧ್ಯಪ್ರವೇಶಕ್ಕೆ ಒತ್ತಾಯ

ಈ ಸಂದರ್ಭದಲ್ಲಿ ಲಕ್ಕುಂಡಿಯ ಮಾಜಿ ಪೈಲ್ವಾನ್ ರಮೇಶ ಬಾವಿ, ಹಾತಲಗೇರಿಯ ಸೋಮಪ್ಪ ಮೇಲ್ಮನಿ, ಬಾಲೇಸಾಬ್ ನದಾಫ್, ಪರಶುರಾಮ ಹಟ್ಟಿ, ಮಾಂತೇಶ ಗುಂಜಾಳ, ರವಿ ವಾಲ್ಮೀಕಿ, ಮಾಬುಸಾಬ ಹರಿವಾಣ, ಬಸವರಾಜ ಹಾತಲಗೇರಿ, ಜಗದೀಶ ಆಡವಿಸೋಲ್ಲಾಪುರ, ದೇವಪ್ಪ ವಾಲ್ಮೀಕಿ, ಪುಂಡಲಿಕ ಹಾತಲಗೇರಿ ಹಾಗೂ ಈರಣ್ಣ ಇಮ್ಮಡಿಯವರ ಸೇರಿದಂತೆ ನೂರಾರು ಪಾಲಕರು ಮತ್ತು ಕುಸ್ತಿ ಅಭಿಮಾನಿಗಳು ಉಪಸ್ಥಿತರಿದ್ದರು.

ಎಲ್ಲರೂ ಒಕ್ಕೊರಲಿನಿಂದ ಸಚಿವ ಎಚ್.ಕೆ. ಪಾಟೀಲ ಅವರು ತಕ್ಷಣವೇ ಮಧ್ಯಪ್ರವೇಶಿಸಿ ಕ್ರೀಡಾ ಇಲಾಖೆಗೆ ಅಗತ್ಯ ನಿರ್ದೇಶನ ನೀಡಬೇಕು. ಈ ಹಿಂದೆ ಇದ್ದಂತೆ 5ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕುಸ್ತಿ ತರಬೇತಿ ಮತ್ತು ವಸತಿ ಸೌಲಭ್ಯವನ್ನು ಮುಂದುವರಿಸಬೇಕು. ಜೊತೆಗೆ ಖಾಲಿ ಇರುವ ತರಬೇತುದಾರರ ಹುದ್ದೆಗೆ ಅನುಭವಿ ಕೋಚ್ರನ್ನು ತಕ್ಷಣವೇ ನೇಮಕ ಮಾಡಿ ಗದಗ ಜಿಲ್ಲೆಯ ಕುಸ್ತಿ ಪರಂಪರೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

ಗದಗ ಜಿಲ್ಲೆಯ ಕುಸ್ತಿ ಕ್ರೀಡೆಗೆ ಸುದೀರ್ಘ ಇತಿಹಾಸವಿದ್ದು, ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸಿರುವ ಈ ವ್ಯವಸ್ಥೆಯನ್ನು ಉಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕ್ರೀಡಾ ಇಲಾಖೆಯ ಹೊಸ ನಿಯಮಗಳಿಂದ ಗ್ರಾಮೀಣ ಭಾಗದ ಬಡ ಪ್ರತಿಭೆಗಳು ಅವಕಾಶ ವಂಚಿತರಾಗದಂತೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಕುಸ್ತಿ ಸಂಘಟನೆಗಳು ಮತ್ತು ಪಾಲಕರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande