

ಬಳ್ಳಾರಿ, 22 ಜೂನ್ (ಹಿ.ಸ.) :
ಆ್ಯಂಕರ್: ಖ್ಯಾತ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಅವರ ಹೆಸರಿನಲ್ಲಿ ಪ್ರಸಕ್ತ ಸಾಲಿನಿಂದ ಉದಯೋನ್ಮುಖ ಚಿತ್ರಕಲಾವಿದರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದು ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಅವರು ತಿಳಿಸಿದ್ದಾರೆ.
`ಸ್ನೇಹ ಸಂಪುಟ'ದ ಸಭಾಂಗಣದಲ್ಲಿ ನಡೆದ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಹಳೆಯ ದರೋಜಿ ನಾಡೋಜ ಬುರಕಥಾ ಈರಮ್ಮ ಫೌಂಡೇಷನ್, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ ಬಳ್ಳಾರಿ ಹಾಗೂ ಶ್ರೀ ಮಹಾದೇವತಾತ ಕಲಾ ಸಂಘ ಹಂದ್ಯಾಳ್ ಅವರ ಜಂಟಿ ಆಶ್ರಯದಲ್ಲಿ ನಡೆದ `ವರ್ಣಶ್ರೀ' ಪ್ರಶಸ್ತಿ ಪುರಸ್ಕೃತ ಲಿಂಗೈಕ್ಯ ಮಂಜುನಾಥ ಗೋವಿಂದವಾಡ ಅವರ `ನುಡಿ ನಮನ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲಾವಿದ ಮಂಜುನಾಥ ಗೋವಿಂದವಾಡ ಅವರು ಎರಡೂವರೆ ದಶಕಗಳ ಕಾಲ ಚಿತ್ರಕಲಾ ಕ್ಷೇತ್ರ ಹಾಗೂ ಸಾಂಸ್ಕೃತಿಕ ಸಂಘಟನೆಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಕಲಾವಿದ ಮಂಜುನಾಥ್ ಅವರ ಸಾಧನೆ - ನೈಪುಣ್ಯತೆಯು ಅನೇಕರಿಗೆ ಸ್ಫೂರ್ತಿಯಾಗಿ ಚಿರಕಾಲ ಉಳಿಯಲು ಪ್ರಯತ್ನ ಮಾಡುವ ನಿಟ್ಟಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ ಎಂದರು.
ಮುಖ್ಯ ಅತಿಥಿ ಕಸಾಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಟಿ.ಕೊಟ್ರಪ್ಪ, ತುಂಗಭದ್ರಾ ರೈತ ಸಂಘದ ದರೂರು ಪುರುಷೋತ್ತಮಗೌಡ, ಹಿರಿಯ ಪತ್ರಕರ್ತ ಕೆ.ಎಂ. ಮಂಜುನಾಥ ಅವರು, ಕಲಾವಿದ ಮಂಜುನಾಥ ಅವರ ಕುಟುಂಬಕ್ಕೆ, ಮಕ್ಕಳಿಗೆ ಶೈಕ್ಷಣಿಕ ಮತ್ತು ಕುಟುಂಬ ನಿರ್ವಹಣೆಗಾಗಿ ಆರ್ಥಿಕ ನೆರವಿನ ಅಗತ್ಯವಿದೆ. ದಾನಿಗಳು ಉದಾರವಾಗಿ ದೇಣಿಗೆ ನೀಡಿ, ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಕಮ್ಮರಚೇಡು ಶ್ರೀ ಕಲ್ಯಾಣ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಕವನ ವಾಚನ: ವಿಶ್ರಾಂತ ಡಿಡಿಪಿಐ, ಸಾಹಿತಿ ಎಚ್.ಎಂ. ಮಲ್ಲಿಕಾರ್ಜುನಸ್ವಾಮಿ ಅವರು ಗೋವಿಂದವಾಡ ಅವರ ಕುರಿತು ಕವಿತೆಯನ್ನು ಸಿ. ಮಂಜುನಾಥ ಮತ್ತು ಸತ್ಯಂ ಬಿಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆಲಂ ಭಾಷಾ ಅವರು ಸ್ವ ರಚನೆಯ ಕವನ ವಾಚಿಸಿ ಗಮನ ಸೆಳೆದರು.
ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್ ಅಧ್ಯಕ್ಷ ಡಾ. ಅಶ್ವರಾಮು ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಭರತನಾಟ್ಯ ಕಲಾವಿದೆ ಅವನೀ ಗಂಗಾವತಿ ಅವರು ಪ್ರಾರ್ಥನೆ ಸಲ್ಲಿಸಿದರು.
ಹಂದ್ಯಾಳ್ ಶ್ರೀ ಮಹಾದೇವತಾತ ಕಲಾ ಸಂಘದ ಅಧ್ಯಕ್ಷರಾಗಿರುವ ಪುರುಷೋತ್ತಮ ಹಂದ್ಯಾಳ್ ಅವರು ವಂದಿಸಿದರು.
ಆಸಕ್ತ ಕಲಾಪೋಷಕರು ಮತ್ತು ದಾನಿಗಳು ಈ ಸಂಖ್ಯೆಗೆ ಕರೆ ಮಾಡಿ, ನೆರವಾಗಿ : 8217076696.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್