ಯೋಗ ಮಾನವ ಚೇತನೆಯೊಂದಿಗೆ ಸಂಪರ್ಕ ಸಾಧಿಸುವ ಮಾರ್ಗ : ಪ್ರಧಾನಿ ಮೋದಿ
ಕೋಲ್ಕತ್ತಾ, 21 ಜೂನ್ (ಹಿ.ಸ.) : ಆ್ಯಂಕರ್ : 12ನೇ ಯೋಗ ದಿನಾಚರಣೆಯ ಅಂಗವಾಗಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಐತಿಹಾಸಿಕ ರೆಡ್ ರೋಡ್ನಲ್ಲಿ ಭಾನುವಾರ ಭವ್ಯ ಯೋಗ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಸಾವಿರಾರು ಜನರೊಂದಿಗೆ ಸಾಮೂಹಿಕ ಯೋಗಾಭ್ಯಾಸ ನಡೆ
Yoga day pm


ಕೋಲ್ಕತ್ತಾ, 21 ಜೂನ್ (ಹಿ.ಸ.) :

ಆ್ಯಂಕರ್ : 12ನೇ ಯೋಗ ದಿನಾಚರಣೆಯ ಅಂಗವಾಗಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಐತಿಹಾಸಿಕ ರೆಡ್ ರೋಡ್ನಲ್ಲಿ ಭಾನುವಾರ ಭವ್ಯ ಯೋಗ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಸಾವಿರಾರು ಜನರೊಂದಿಗೆ ಸಾಮೂಹಿಕ ಯೋಗಾಭ್ಯಾಸ ನಡೆಸಿದರು.

ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ, ರಾಜ್ಯಪಾಲ ಆರ್.ಎನ್. ರವಿ, ವಿವಿಧ ಸಚಿವರು, ಶಾಸಕರು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಯೋಗ ಸಾಧಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ರೆಡ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗೆ ಅಂತರರಾಷ್ಟ್ರೀಯ ಯೋಗ ದಿನದ ಶುಭಾಶಯಗಳನ್ನು ಕೋರಿದರು. ಜೂನ್ 21 ವರ್ಷದಲ್ಲೇ ಅತ್ಯಂತ ದೀರ್ಘ ದಿನವಾಗಿದ್ದು, ಅಂತರರಾಷ್ಟ್ರೀಯ ಯೋಗ ದಿನವಾಗಿ ಜಾಗತಿಕ ಮಾನ್ಯತೆ ಪಡೆದ ನಂತರ ಇದರ ಮಹತ್ವ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದರು.

ಯೋಗವು ಜನರನ್ನು ಒಂದಾಗಿಸುವ ಶಕ್ತಿಯಾಗಿದೆ. ಇಂದು ಜೂನ್ 21 ವಿಶ್ವದ ಅತಿದೊಡ್ಡ ಜನಪರ ಆಚರಣೆಗಳಲ್ಲಿ ಒಂದಾಗಿ ರೂಪಾಂತರಗೊಂಡಿದೆ ಎಂದು ಅವರು ಹೇಳಿದರು. ಭಾರತದ ಪ್ರಾಚೀನ ಪರಂಪರೆಯಾಗಿದ್ದ ಯೋಗ ಈಗ ವಿಶ್ವದಾದ್ಯಂತ ಜನರ ಜೀವನಶೈಲಿಯ ಭಾಗವಾಗುತ್ತಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಹಿಮಾಲಯದಿಂದ ಹಿಂದೂ ಮಹಾಸಾಗರವರೆಗೆ, ಈಶಾನ್ಯ ರಾಜ್ಯಗಳಿಂದ ಪಶ್ಚಿಮದ ಸೌರಾಷ್ಟ್ರದವರೆಗೆ ಯೋಗದ ಶಕ್ತಿ ವ್ಯಾಪಿಸಿದೆ. ಕೋಲ್ಕತ್ತಾದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದು ತಮ್ಮ ಪಾಲಿಗೆ ಸೌಭಾಗ್ಯ ಎಂದು ಪ್ರಧಾನಿ ಹೇಳಿದರು.

ಪಶ್ಚಿಮ ಬಂಗಾಳದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಿದ ಮೋದಿ, ಇದು ಶ್ರೀ ಅರವಿಂದ, ಸ್ವಾಮಿ ವಿವೇಕಾನಂದ ಮತ್ತು ಶ್ರೀ ರಾಮಕೃಷ್ಣ ಪರಮಹಂಸರ ನೆಲವಾಗಿದೆ ಎಂದು ಹೇಳಿದರು. ಈ ಪವಿತ್ರ ನೆಲದಲ್ಲಿ ಯೋಗ ದಿನಾಚರಣೆ ನಡೆಸುವುದು ವಿಶೇಷ ಮಹತ್ವ ಹೊಂದಿದೆ ಎಂದರು.

ಶ್ರೀ ಅರವಿಂದರ ಚಿಂತನೆಗಳನ್ನು ಉಲ್ಲೇಖಿಸಿದ ಪ್ರಧಾನಿ, ತಮ್ಮ ಇಡೀ ಜೀವನವನ್ನು ಯೋಗಕ್ಕೆ ಸಮರ್ಪಿಸಿದ್ದ ಅವರು, ಯೋಗವನ್ನು ಮಾನವ ಚೇತನೆಯೊಂದಿಗೆ ಸಂಪರ್ಕ ಸಾಧಿಸುವ ಸಾಧನವೆಂದು ಬಣ್ಣಿಸಿದ್ದರು ಎಂದು ಹೇಳಿದರು. ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಮನಸ್ಸು, ದೇಹ ಮತ್ತು ಆತ್ಮವನ್ನು ಜೋಡಿಸುವ ಜೀವನ ವಿಧಾನವಾಗಿದೆ ಎಂದು ಅವರು ತಿಳಿಸಿದರು.

ಕೋಲ್ಕತ್ತಾ ನಾಗರಿಕರ ಶ್ರಮ ಮತ್ತು ಸಹಕಾರವನ್ನು ಪ್ರಶಂಸಿಸಿದ ಪ್ರಧಾನಿ, ಕಾರ್ಯಕ್ರಮದ ಯಶಸ್ಸಿಗಾಗಿ ನಗರದಲ್ಲಿ ಸ್ವಚ್ಛತೆ, ವ್ಯವಸ್ಥೆ ಮತ್ತು ನಾಗರಿಕ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಜನರು ತೋರಿದ ಬದ್ಧತೆ ಶ್ಲಾಘನೀಯ ಎಂದು ಹೇಳಿದರು.

ಯೋಗವನ್ನು ಕೇವಲ ಒಂದು ದಿನದ ಕಾರ್ಯಕ್ರಮವಾಗಿ ನೋಡದೆ, ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದರು. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ನೆರವಾಗುವುದರ ಜೊತೆಗೆ ಜೀವನದಲ್ಲಿ ಸಮತೋಲನ ತರಲು ಸಹಕಾರಿ ಎಂದು ಅವರು ಹೇಳಿದರು. ವಯಸ್ಸು ಹೆಚ್ಚಾದರೂ ಚೈತನ್ಯದಿಂದ ಬದುಕಲು ಯೋಗ ಸಹಕಾರಿಯಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಭಗವದ್ಗೀತೆಯಲ್ಲಿಯೂ ಶ್ರೀಕೃಷ್ಣ ಯೋಗದ ಮಹತ್ವವನ್ನು ವಿವರಿಸಿದ್ದಾರೆ ಎಂದು ಉಲ್ಲೇಖಿಸಿದ ಪ್ರಧಾನಿ, ಸಮಾಜ ಆರೋಗ್ಯವಂತರಾದರೆ ದೇಶವೂ ಆರೋಗ್ಯವಂತವಾಗುತ್ತದೆ ಎಂದು ಹೇಳಿದರು.

ಪ್ರಧಾನಿಯ ಭಾಷಣದ ಬಳಿಕ ರೆಡ್ ರೋಡ್ನಲ್ಲಿ ಸಾಮೂಹಿಕ ಯೋಗಾಭ್ಯಾಸ ಆರಂಭವಾಯಿತು. ಈ ವೇಳೆ ಮಾತನಾಡಿದ ಶುಭೇಂದು ಅಧಿಕಾರಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ, ಪಶ್ಚಿಮ ಬಂಗಾಳದಲ್ಲಿ ಯೋಗಕ್ಕೆ ದೀರ್ಘ ಇತಿಹಾಸವಿದೆ ಎಂದು ಹೇಳಿದರು.

ಪ್ರಧಾನಿಯವರ ಉಪಸ್ಥಿತಿಯಿಂದ ಈ ಬಾರಿಯ ಯೋಗ ದಿನಾಚರಣೆ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು. ರೆಡ್ ರೋಡ್ನಲ್ಲಿ ನಡೆದ ಯೋಗ ಕಾರ್ಯಕ್ರಮಕ್ಕೆ ಸುಮಾರು 2.57 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಬೆಳಿಗ್ಗೆ ಸುಮಾರು 6.30ಕ್ಕೆ ಆರಂಭವಾದ ಮುಖ್ಯ ಕಾರ್ಯಕ್ರಮದಲ್ಲಿ ಸುಮಾರು 35 ಸಾವಿರ ಜನರು ಪ್ರಧಾನಿಯವರೊಂದಿಗೆ ಯೋಗಾಭ್ಯಾಸ ನಡೆಸಲು ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ನಗರದ ವಿವಿಧ ಭಾಗಗಳಿಂದ ಜನರು ರೆಡ್ ರೋಡ್ ಕಡೆಗೆ ಆಗಮಿಸುತ್ತಿರುವ ದೃಶ್ಯ ಕಂಡುಬಂದಿತು.

ಭಾಗವಹಿಸಿದವರ ಅನುಕೂಲಕ್ಕಾಗಿ ಕೋಲ್ಕತ್ತಾ ಮೆಟ್ರೋ ಸೇವೆಯನ್ನು ಭಾನುವಾರ ಮುಂಜಾನೆಯೇ ಆರಂಭಿಸಲಾಗಿತ್ತು. ಬ್ಲೂ ಲೈನ್, ಗ್ರೀನ್ ಲೈನ್ ಸೇರಿದಂತೆ ನಗರದ ಎಲ್ಲಾ ಮೆಟ್ರೋ ಮಾರ್ಗಗಳಲ್ಲಿ ಬೆಳಿಗ್ಗೆ 4 ಗಂಟೆಯ ನಂತರವೇ ರೈಲು ಸಂಚಾರ ಆರಂಭಿಸಿ, ದೂರದ ಪ್ರದೇಶಗಳಿಂದ ಬರುವವರಿಗೆ ಅನುಕೂಲ ಕಲ್ಪಿಸಲಾಯಿತು.

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ರೆಡ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹುಹಂತದ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande