
ಕೊಪ್ಪಳ, 21 ಜೂನ್ (ಹಿ.ಸ.):
ಆ್ಯಂಕರ್ : ಇದೆ 25ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲೋಕಾರ್ಪಣೆ ಮಾಡಲು ಬರುತ್ತಿದ್ದಾರೆ. ಈ ಜಲಾಶಯದ ನೀರು ಅಕ್ರಮವಾಗಿ ಕಬಳಿಸಿ, ನದಿಗೆ ಕಾರ್ಖಾನೆ ತ್ಯಾಜ್ಯ ಹರಿಬಿಟ್ಟು ಮೂರು ರಾಜ್ಯದ ಅಚ್ಚುಕಟ್ಟು ಪ್ರದೇಶದ ಒಂದೆ ಬೆಳೆಗೆ ನೀರು ಸೀಮಿತಗೊಳಿಸಿದೆ. ಕೋಟಿಗಟ್ಟಲೆ ಜನರು ಈ ನೀರು ಕುಡಿದು ರೋಗ ಬಾಧನೆಗೆ ತುತ್ತಾಗುತ್ತಿದ್ದಾರೆ.
ಕೊಪ್ಪಳ, ವಿಜಯನಗರ, ಬಳ್ಳಾರಿ, ಹಾವೇರಿ, ದಾವಣಗೆರೆ ಜಿಲ್ಲೆಯಲ್ಲಿರುವ ಫ್ಯಾಕ್ಟರಿಗಳು ವಿಷ ರಸಾಯನ, ತ್ಯಾಜ್ಯ ಹರಿಬಿಡುತ್ತಿದ್ದು, ಇವುಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಮುಖಂಡ ಶರಣು ಗಡ್ಡಿ ಧರಣಿ ವೇದಿಕೆಯಲ್ಲಿ ಮಾತನಾಡಿದರು.
ನಗರಸಭೆ ಆವರಣದಲ್ಲಿ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ, ಹೈಕೋರ್ಟ್ ಆದೇಶದಂತೆ ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ. ಕೇಂದ್ರ ಪರಿಸರ ಇಲಾಖೆಯ ಶಿಫಾರಸಿನಂತೆ ಕಾರ್ಖಾನೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ 234 ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ.
ಶರಣು ಮಾತು ಮುಂದುವರೆಸಿ ಮಾಲಿನ್ಯಕಾರಿ ಕಾರ್ಖಾನೆಗಳು ಕೇಂದ್ರಿಕರಣಗೊಂಡಿರುವ ಗಿಣಿಗೇರಿ, ಕನಕಾಪುರ, ಬೇವಿನಹಳ್ಳಿ, ಅಲ್ಲಾನಗರ, ಹಿರೇಬಗನಾಳ, ಕಾಸನಕಂಡಿ, ಚಿಕ್ಕಬಗನಾಳ, ಕುಣಿಕೇರಿ, ತಾಂಡಾ, ಹಾಲವರ್ತಿ ಇಲ್ಲಿಗೆ ಮುಖ್ಯಮಂತ್ರಿ ತುಂಗಭದ್ರಾ ಜಲಾಶಯದ ಗೇಟ್ ಉದ್ಘಾಟನೆ ಮಾಡಲು ಬಂದಾಗ ಖುದ್ದು ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ಅರಿಯಲಿ. ಮೂರು ದಶಕದಲ್ಲಿ ಈ ಕಾರ್ಖಾನೆಗಳಿಂದ ಶೇ. 95ರಷ್ಟು ಜನರಿಗೆ ಯಾವುದೆ ಅನುಕೂಲವಾಗಿಲ್ಲ. ಬದಲಾಗಿ ಜನರ ಆರೋಗ್ಯವಷ್ಟೇ ಅಲ್ಲದೆ ಇಡೀ ವಾತಾವರಣ ಹಾಳಾಗಿ ಬದುಕಲು ಸಾಧ್ಯವಿಲ್ಲ ಎನ್ನುವಷ್ಟು ಮಟ್ಟಿಗೆ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಿಜಾಂಶ ಅರಿತಿದ ಮೇಲೆ ಕಾರ್ಖಾನೆಗಳ ಮೇಲೆ ಕ್ರಮ ಜರುಗಿಸಲಿ ಎಂದರು.
ಧರಣಿಯಲ್ಲಿ ಹಿರಿಯ ಪತ್ರಕರ್ತರಾದ ಶರಣಪ್ಪ ಬಾಚಲಾಪುರ, ಅಗ್ನಿದಿವ್ಯ ಹುಸೇನ ಪಾಷಾ, ಪ್ರಕಾಶಕ ಡಿ.ಎಂ.ಬಡಿಗೇರ, ವೈ.ಬಿ.ಬಂಡಿ, ಸದಾನಂದಯ್ಯ ಬೀಳಗಿಮಠ, ರಾಜಶೇಖರ ಏಳುಬಾವಿ, ಮಹಾದೇವಪ್ಪ ಮಾವಿನಮಡು, ಮಖ್ಬುಲ್ ರಾಯಚೂರು, ಶಿವಪ್ಪ ಜಲ್ಲಿ, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಹಲಗೇರಿ ಇನ್ನಿತರರು ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್