
ಬಾಗಲಕೋಟೆ, 20 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ವಿಧಾನ ಸಭಾ ಕ್ಷೇತ್ರದ ಮುಚಖಂಡಿ ತಾಂಡಾದ ಯುವಕ ರಾಹುಲ್ ಬಸವರಾಜ್ ರಾಠೋಡ ಅವರು ಭಾರತೀಯ ಸೇನೆಯ ಮಹತ್ವಾಕಾಂಕ್ಷೆಯ ಅಗ್ನಿವೀರ್ ಹುದ್ದೆಗೆ ಆಯ್ಕೆಯಾಗಿರುವುದು ಗ್ರಾಮಸ್ಥರು, ಕುಟುಂಬಸ್ಥರು ಹಾಗೂ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ.
ದೇಶ ಸೇವೆಯ ಕನಸನ್ನು ಹೊತ್ತು ಶ್ರಮಿಸಿದ ರಾಹುಲ್ ರಾಠೋಡ ಅವರು ತಮ್ಮ ಪರಿಶ್ರಮ, ಶಿಸ್ತು ಹಾಗೂ ಬದ್ಧತೆಯ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ಈ ಯಶಸ್ಸಿನಿಂದ ಮುಚಖಂಡಿ ತಾಂಡಾ ಮಾತ್ರವಲ್ಲದೆ ಇಡೀ ಬಾಗಲಕೋಟೆ ಕ್ಷೇತ್ರಕ್ಕೆ ಗೌರವ ಹೆಚ್ಚಾಗಿದೆ.
ಯುವಕರು ದೇಶ ಸೇವೆಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲು ರಾಹುಲ್ ಅವರ ಸಾಧನೆ ಪ್ರೇರಣೆಯಾಗಲಿದೆ. ಗ್ರಾಮೀಣ ಭಾಗದ ಯುವಕರಲ್ಲಿಯೂ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಕೊರತೆಯಿಲ್ಲ ಎಂಬುದನ್ನು ಅವರು ತಮ್ಮ ಸಾಧನೆಯ ಮೂಲಕ ತೋರಿಸಿದ್ದಾರೆ.
ಈ ಸಂದರ್ಭದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮೇಶ್ ಮೇಟಿ ಅವರು ರಾಹುಲ್ ಬಸವರಾಜ್ ರಾಠೋಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. “ರಾಹುಲ್ ಅವರು ತಮ್ಮ ಕುಟುಂಬಕ್ಕೆ, ಗ್ರಾಮಕ್ಕೆ ಹಾಗೂ ಬಾಗಲಕೋಟೆ ಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ.
ಅವರ ಮುಂದಿನ ಸೇನಾ ಸೇವಾ ಜೀವನ ಯಶಸ್ವಿಯಾಗಲಿ, ದೇಶ ಸೇವೆಯಲ್ಲಿ ಮತ್ತಷ್ಟು ಉನ್ನತ ಸ್ಥಾನಗಳನ್ನು ಪಡೆಯಲಿ” ಎಂದು ಶುಭ ಹಾರೈಸಿದ್ದಾರೆ.
ರಾಹುಲ್ ಅವರ ಆಯ್ಕೆಯ ಸುದ್ದಿ ಮುಚಖಂಡಿ ತಾಂಡಾದಲ್ಲಿ ಸಂಭ್ರಮದ ವಾತಾವರಣ ಮೂಡಿಸಿದ್ದು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande