
ರಾಯರಂಗಪುರ, 20 ಜೂನ್ (ಹಿ.ಸ.) :
ಆ್ಯಂಕರ್ : ಪೂರ್ವ ಭಾರತವು ದೇಶದ ಅಭಿವೃದ್ಧಿಯ ಹೊಸ ಕೇಂದ್ರವಾಗಿ ರೂಪುಗೊಳ್ಳುತ್ತಿದ್ದು, ಒಡಿಶಾಗೆ ‘ಉತ್ಕರ್ಷ ಒಡಿಶಾ’ ಯೋಜನೆಯಡಿ ಸುಮಾರು ₹20 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವನೆಗಳು ಬಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಒಡಿಶಾ ಸರ್ಕಾರದ ಎರಡು ವರ್ಷಗಳ ಸಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ₹47,600 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಡಿಶಾ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರಪತಿ ಮುರ್ಮು ಅವರ ಜನ್ಮದಿನದ ಅಂಗವಾಗಿ ಅವರ ಸ್ವಗ್ರಾಮ ಪಹಾಡ್ಪುರವನ್ನು ‘ಸೂರ್ಯ ಗ್ರಾಮ’ವನ್ನಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ ಪ್ರಧಾನಿ, ಸೌರಶಕ್ತಿ ಆಧಾರಿತ ಮಾದರಿ ಗ್ರಾಮ ನಿರ್ಮಾಣದಿಂದ ಉದ್ಯೋಗ ಮತ್ತು ಸ್ವಾವಲಂಬನೆಗೆ ಉತ್ತೇಜನ ಸಿಗಲಿದೆ ಎಂದರು.
2036ರಲ್ಲಿ ಒಡಿಶಾ ರಾಜ್ಯ ರಚನೆಯ ಶತಮಾನೋತ್ಸವ ಹಾಗೂ 2047ರಲ್ಲಿ ಭಾರತದ ಸ್ವಾತಂತ್ರ್ಯದ ಶತಮಾನೋತ್ಸವ ಹಿನ್ನೆಲೆ, ಒಡಿಶಾದ ಅಭಿವೃದ್ಧಿಯೇ ಭಾರತದ ಅಭಿವೃದ್ಧಿಗೆ ಬಲ ನೀಡಲಿದೆ ಎಂದು ಹೇಳಿದರು.
ಸುಭದ್ರಾ ಯೋಜನೆ, ಆಯುಷ್ಮಾನ್ ಭಾರತ, ಪಿಎಂ ಜನಮನ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಮಹಿಳೆಯರು, ಆದಿವಾಸಿಗಳು ಮತ್ತು ಬಡವರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ ಎಂದು ಮೋದಿ ತಿಳಿಸಿದರು.
ಮಯೂರಭಂಜ್ ಜಿಲ್ಲೆಗೆ ಮತ್ತೊಂದು ನವೋದಯ ವಿದ್ಯಾಲಯ ಮಂಜೂರು ಮಾಡಿರುವುದಾಗಿ ಘೋಷಿಸಿದ ಅವರು, ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.