
ನವದೆಹಲಿ, 20 ಜೂನ್ (ಹಿ.ಸ.) :
ಆ್ಯಂಕರ್ : ಫ್ರಾನ್ಸ್ ನಲ್ಲಿ ಜೂನ್ 15ರಿಂದ 17ರವರೆಗೆ ನಡೆದ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕವು ಭಾರತದ ಹಿತಾಸಕ್ತಿಗೆ ವಿರುದ್ಧವಾದ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಶನಿವಾರ ನವದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಅಮೆರಿಕದ ಕ್ರಮಗಳ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಜಿ-7 ಶೃಂಗಸಭೆಯ ಅವಧಿಯಲ್ಲಿ ಭಾರತಕ್ಕೆ ಸಂಬಂಧಿಸಿದ ಮೂರು ಪ್ರಮುಖ ಬೆಳವಣಿಗೆಗಳು ನಡೆದಿವೆ. ಮೊದಲನೆಯದಾಗಿ, ಅಮೆರಿಕವು ತನ್ನ 'ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್' ಹೆಸರನ್ನು 'ಯುಎಸ್ ಪೆಸಿಫಿಕ್ ಕಮಾಂಡ್' ಎಂದು ಬದಲಾಯಿಸಿದೆ. ಎರಡನೆಯದಾಗಿ, ಅಮೆರಿಕ ಪ್ರಕಟಿಸಿದ ನಕ್ಷೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶವನ್ನು ಪಾಕಿಸ್ತಾನದ ಭಾಗವಾಗಿ ತೋರಿಸಲಾಗಿದೆ. ಮೂರನೆಯದಾಗಿ, ಅಮೆರಿಕದ ವಿದೇಶಾಂಗ ಇಲಾಖೆ 2026ರ ಜುಲೈ ವೀಸಾ ಬುಲೆಟಿನ್ನಲ್ಲಿ ಭಾರತೀಯರಿಗೆ ನೀಡಲಾಗುತ್ತಿದ್ದ ಇಬಿ-2 ಮತ್ತು ಇಬಿ-5 ವೀಸಾ ವರ್ಗಗಳನ್ನು ಸ್ಥಗಿತಗೊಳಿಸಿದೆ ಎಂದು ಅವರು ಹೇಳಿದರು.
ಈ ಎಲ್ಲ ಬೆಳವಣಿಗೆಗಳ ನಡುವೆಯೂ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಭಾರತದ ಹಿತಾಸಕ್ತಿಗೆ ಸಂಬಂಧಿಸಿದ ಸೂಕ್ಷ್ಮ ಮತ್ತು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸದೇ ಮೌನ ವಹಿಸಿದ್ದಾರೆ ಎಂದು ಖೇರಾ ಟೀಕಿಸಿದರು.
ಇದೇ ವೇಳೆ, ಭಾರತದ ಅತಿಥಿಯಾಗಿದ್ದ ಐಆರ್ಐಎಸ್ ಡೆನಾ ನೌಕೆಯನ್ನು ಅಮೆರಿಕ ಮುಳುಗಿಸಿತ್ತು ಎಂದು ಉಲ್ಲೇಖಿಸಿದ ಅವರು, ಆ ವಿಚಾರದಲ್ಲಿಯೂ ಪ್ರಧಾನಿ ಟ್ರಂಪ್ ಅವರನ್ನು ಪ್ರಶ್ನಿಸಿಲ್ಲ ಎಂದು ಆರೋಪಿಸಿದರು.
ಹಿಂದಿನ ಸರ್ಕಾರಗಳ ನಿಲುವುಗಳನ್ನು ಉಲ್ಲೇಖಿಸಿದ ಖೇರಾ, 1986ರಲ್ಲಿ ಶ್ರೀಲಂಕಾದಲ್ಲಿ ಭಾರತದ ಕರಾವಳಿಯ ಸಮೀಪ ವಾಯ್ಸ್ ಆಫ್ ಅಮೆರಿಕಾ ಪ್ರಸಾರ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆಯನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ದೇಶದ ಸಾರ್ವಭೌಮತ್ವದ ಹಿತದೃಷ್ಟಿಯಿಂದ ತಿರಸ್ಕರಿಸಿದ್ದರು ಎಂದು ಹೇಳಿದರು.
ಅದೇ ರೀತಿ, ಭಾರತೀಯ ರಾಜತಾಂತ್ರಿಕ ದೇವಯಾನಿ ಖೋಬ್ರಾಗಡೆ ಪ್ರಕರಣದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅಮೆರಿಕಕ್ಕೆ ನೀಡಿದ್ದ ಕಠಿಣ ಸಂದೇಶ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು ಎಂದು ಅವರು ನೆನಪಿಸಿದರು.
ಪಾಕಿಸ್ತಾನವನ್ನು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ನ ಬೂದು ಪಟ್ಟಿಗೆ ಸೇರಿಸುವಲ್ಲಿ ಯುಪಿಎ ಸರ್ಕಾರದ ಪಾತ್ರ ಪ್ರಮುಖವಾಗಿತ್ತು. ಆದರೆ ಇಂದು 'ಆಪರೇಷನ್ ಸಿಂಧೂರ್' ಬಳಿಕ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಔತಣಕೂಟಕ್ಕೆ ಆಹ್ವಾನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಮಾತುಕತೆಯ ವೇಳೆ ಟ್ರಂಪ್ ನೀಡಿದ, ಮೋದಿ ಪ್ರಧಾನಿಯಾಗಿರುವವರೆಗೆ ಭಾರತದ ಮೇಲೆ ಯಾರಾದರೂ ದಾಳಿ ಮಾಡಿದರೆ ಅಮೆರಿಕ ನೆರವಿಗೆ ಬರುತ್ತದೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ಖೇರಾ, ಭಾರತವು ಅಮೆರಿಕದ ಅಧೀನ ರಾಷ್ಟ್ರವಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು. ಭಾರತವು ತನ್ನ ಸ್ವಂತ ಸಾಮರ್ಥ್ಯದ ಆಧಾರದಲ್ಲೇ ಹಲವು ಯುದ್ಧಗಳನ್ನು ಗೆದ್ದಿದೆ ಎಂದು ಅವರು ಒತ್ತಿಹೇಳಿದರು.
ಅಮೆರಿಕದ ಕ್ರಮಗಳಿಂದ ಭಾರತೀಯ ನಾವಿಕರು ಸಾವನ್ನಪ್ಪಿದ ಸಂದರ್ಭದಲ್ಲಿಯೂ ಟ್ರಂಪ್ ಯಾವುದೇ ವಿಷಾದ ವ್ಯಕ್ತಪಡಿಸಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್, ಕೇಂದ್ರ ಸರ್ಕಾರವು ದೇಶದ ಹಿತಾಸಕ್ತಿಗಳ ವಿಷಯದಲ್ಲಿ ಹೆಚ್ಚು ದೃಢ ನಿಲುವು ತಾಳಬೇಕೆಂದು ಆಗ್ರಹಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.