
ಬಾಗಲಕೋಟೆ, 20 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ಲಕ್ಕಮ್ಮದೇವಿ ದೇವಸ್ಥಾನದ ಸಮೀಪ ಅಪರೂಪದ ದೃಶ್ಯವೊಂದು ಸಾರ್ವಜನಿಕರ ಗಮನ ಸೆಳೆದಿದೆ. ದೇವಸ್ಥಾನದ ಹತ್ತಿರದ ರಸ್ತೆಯಲ್ಲಿ ದೊಡ್ಡ ಗಾತ್ರದ ಊಸರವಳ್ಳಿ (ಗೋಸುಂಬೆ) ನಿಧಾನವಾಗಿ ತೆವಳುತ್ತ ರಸ್ತೆ ದಾಟುತ್ತಿರುವುದು ಕಂಡು ಬಂದಿದೆ.
ರಸ್ತೆ ಬದಿಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಹಾಗೂ ಸ್ಥಳೀಯರು ಈ ದೃಶ್ಯವನ್ನು ಗಮನಿಸಿ ಕೆಲ ಕಾಲ ಅಚ್ಚರಿಗೊಂಡರು. ಸಾಮಾನ್ಯವಾಗಿ ಪೊದೆ, ಮರಗಿಡಗಳ ನಡುವೆ ಕಾಣಿಸಿಕೊಳ್ಳುವ ಊಸರವಳ್ಳಿ ಜನವಸತಿ ಪ್ರದೇಶದ ಸಮೀಪ ರಸ್ತೆ ದಾಟುತ್ತಿರುವುದು ಕುತೂಹಲ ಮೂಡಿಸಿತು.
ಕೆಲವರು ಈ ಅಪರೂಪದ ಕ್ಷಣವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವ ಸರೀಸೃಪಗಳ ಸಂರಕ್ಷಣೆ ಅಗತ್ಯವಾಗಿದ್ದು, ಇಂತಹ ಜೀವಿಗಳು ಕಂಡು ಬಂದಾಗ ಅವುಗಳಿಗೆ ತೊಂದರೆ ನೀಡದೆ ಸುರಕ್ಷಿತವಾಗಿ ಸಾಗಲು ಅವಕಾಶ ಕಲ್ಪಿಸಬೇಕು ಎಂದು ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.
ಲಕ್ಕಮ್ಮದೇವಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸಿರು ವಾತಾವರಣ ಇರುವುದರಿಂದ ವಿವಿಧ ಜಾತಿಯ ಜೀವಿಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ರಸ್ತೆ ದಾಟಿದ ಊಸರವಳ್ಳಿಯ ದೃಶ್ಯ ಸ್ಥಳೀಯರಿಗೆ ವಿಶೇಷ ಅನುಭವವಾಗಿ ಪರಿಣಮಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande