
ಯಲ್ಲಾಪುರ, 02 ಜೂನ್ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿಗಳಲ್ಲಿ ಸಾಧಿಸುವ ಸಂಕಲ್ಪ ಮತ್ತು ಪ್ರಾಮಾಣಿಕ ಪ್ರಯತ್ನವಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ, ಪ್ರತಿ ವಿದ್ಯಾರ್ಥಿ ಗಳಿಸುವ ಆ ಯಶಸ್ಸಿನಿಂದ ಭಾರತ ಮತ್ತೆ ವಿಶ್ವಗುರುವಾಗಲು ಸಾಧ್ಯ ಇಂದು ಖ್ಯಾತ ಕೈಗಾರಿಕೋದ್ಯಮಿ ಡಾ.ವಿ.ಎಸ್.ವಿ. ಪ್ರಸಾದ ಹೇಳಿದರು
ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಕೇಂದ್ರೀಯ ಶಾಲೆಯ ಕಲಿಕಾ ಪ್ರಾರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆ ಎಂದರೆ ದೇವರ ಆಲಯವಿದ್ದಂತೆ, ಇಲ್ಲಿ ಬರಲು ದೇವರ ಆಶಿರ್ವಾದ ಬೇಕು. ಬೆಂಗಳೂರು ಹುಬ್ಬಳ್ಳಿಯಂತಹ ಮಹಾನಗರಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟವಲ್ಲ, ಆದರೆ ಯಲ್ಲಾಪುರದಂತಹ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ರೇಷ್ಠ ಸಂಗತಿ.
12ನೇ ಶತಮಾನದಲ್ಲಿ ಭಾರತ ವಿಶ್ವಗುರುವಾಗಿತ್ತು. ಇಂದಿನ ವಿದ್ಯಾರ್ಥಿಗಳ ದೃಢ ನಿಶ್ಚಯ ಮತ್ತು ಪರಿಶ್ರಮದಿಂದ ಭಾರತವನ್ನು ಮತ್ತೊಮ್ಮೆ ವಿಶ್ವಗುರುವಾಗಿಸಲು ಸಾಧ್ಯವಿದೆ.
ಉತ್ತಮ ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಧಿಸಬೇಕೆಂಬ ಸಂಕಲ್ಪ ಮತ್ತು ಪ್ರಾಮಾಣಿಕ ಪ್ರಯತ್ನ ಇದ್ದಲ್ಲಿ ಯಶಸ್ಸು ಸಾಧ್ಯ. ಕಲಿಕೆಯೊಂದಿಗೆ ಉತ್ತಮ ಹವ್ಯಾಸವಿದ್ದರೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ಮಕ್ಕಳು ತಮ್ಮ ಜೀವನದ ಹೆಚ್ಚು ಸಮಯವನ್ನು ಶಿಕ್ಷಕರೊಂದಿಗೆ ಕಳೆಯುತ್ತಾರೆ. ಭವಿಷ್ಯದ ಪೀಳಿಗೆಯನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಶ್ರೀ ಹರಿಪ್ರಕಾಶ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿ ನಮಗೆ ಮಹಾಪುರುಷರ ಜೀವನದಿಂದ ಪ್ರೇರಣೆ ಸಿಗುತ್ತದೆ. ಸಮಾಜಕ್ಕೆ ಸಮರ್ಪಿತ ವ್ಯಕ್ತಿಗಳ ಬದುಕಿನಿಂದ ಜೀವನೋತ್ಸಾಹ ದೊರಕುತ್ತದೆ. ಆಂಧ್ರದ ವಿಜಯವಾಡದಲ್ಲಿ ಜನಿಸಿ ಹುಬ್ಬಳ್ಳಿಯನ್ನು ಕರ್ಮಭೂಮಿಯಾಗಿಸಿಕೊಂಡ ಉದ್ಯಮಿ ಪ್ರಸಾದ್ ಅವರ ಸಮಾಜಮುಖಿ ಜೀವನದಿಂದ ನಮಗೆ ಆದರ್ಶವಾಗಿದ್ದಾರೆ.
ಅಂತಹ ಶ್ರೇಷ್ಠ ವ್ಯಕ್ತಿ, ಮಹಾನ್ ಸಾಧಕರೊಬ್ಬರು ನಮ್ಮ ಶಾಲೆಯ ಆರಂಭೋತ್ಸವದ ದೀಪಬೆಳಗಿದ್ದು ಸಂತಸದ ಸಂಗತಿ.
ವಿಶ್ವದರ್ಶನ ಸಂಸ್ಥೆಯ ಕೇಂದ್ರೀಯ ಶಾಲೆ(CBSE)ಯಲ್ಲಿ ಈ ವರ್ಷದಿಂದ 6ನೇ ತರಗತಿಯಿಂದಲೇ CET/ನೀಟ್/JEE/CA/CS ಮತ್ತು IAS/KAS ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಫೌಂಡೇಶನ್ ತರಬೇತಿ ಪ್ರಾರಾಭಿಸಲಾಗುತ್ತಿದೆ.
ಈ ಸಾಲಿನಿಂದ ಪಿಯು ವಸತಿ ಶಾಲೆ ಮತ್ತು MCA ಕೋರ್ಸ್ ಆರಂಭಿಸಲಾಗಿದೆ ಎಂದು ಹರಿಪ್ರಕಾಶ ಪ್ರಕಟಿಸಿದರು.
ಇಂದು ನಮ್ಮಲ್ಲಿನ ವಿದ್ಯಾರ್ಥಿಗಳು ಬೇರೆ ಬೇರೆ ರೀತಿಯ ಸಾಧನೆ ಮಾಡುತ್ತಿದ್ದಾರೆ. ಎಲ್ಲ ಸಾಧನೆಗಳ ಶ್ರೇಯಸ್ಸು ಪಾಲಕರಿಗೆ ಮತ್ತು ಶಿಕ್ಷಕರಿಗೆ ಸಲ್ಲಬೇಕು. ನಮ್ಮಲ್ಲಿನ ಸಿಬಿಎಸ್ ಶಾಲೆಯ ಎರಡನೇ ಬ್ಯಾಚ್ ಮೊದಲ ಬ್ಯಾಚಿಗಿಂತ ಉತ್ತಮ ಸಾಧನೆ ಮಾಡಿದೆ ಮತ್ತು ಈ ವರ್ಷದಿಂದ ವಸತಿ ಸಹಿತ ಪದವಿಪೂರ್ವ ಕಾಲೇಜು ಆರಂಭವಾಗಿರುವುದು ನಮ್ಮ ವಿಶೇಷತೆ ಎಂದರು.
ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೇಂದ್ರಿಯ ಶಾಲೆಯ ಉಪಪ್ರಾಂಶುಪಾಲೆ ಆಸ್ಮಾ ಶೇಕ್ ನಿರ್ವಹಿಸಿದರು. ಪ್ರಾಂಶುಪಾಲೆ ಮಹಾದೇವಿ ಭಟ್ ವಂದಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ವಿಎಸ್ ವಿ ಪ್ರಸಾದ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಚಿಗುರುಪತಿ ಅನೂಷಾ ಅವರನ್ನು ಸನ್ಮಾನಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh.M.B.