
ಹಾಸನ, 02 ಜೂನ್ (ಹಿ.ಸ.) :
ಆ್ಯಂಕರ್ : ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ನಿಖರ ಹಾಗೂ ಆರೋಗ್ಯಕರ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಸೂಚಿಸಿದರು.
ನಗರದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜುದಲ್ಲಿ ಸೋಮವಾರ ಆಯೋಜಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತರಬೇತಿಯಲ್ಲಿ ತಿಳಿಸಲಾದ ಮಾರ್ಗಸೂಚಿಗಳನ್ನು ಬಿ.ಎಲ್.ಓ.ಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ಮತದಾರರು ಭರ್ತಿ ಮಾಡಿ ಸಲ್ಲಿಸುವ ನಮೂನೆಗಳನ್ನು ವಿಳಂಬವಾಗದಂತೆ ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವ ಜವಾಬ್ದಾರಿಯನ್ನು ಬಿ.ಎಲ್.ಓ.ಗಳು ಸಮರ್ಪಕವಾಗಿ ನಿರ್ವಹಿಸಬೇಕು. ಯಾವುದೇ ಅರ್ಹ ನಾಗರಿಕ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರಜಾಪ್ರತಿನಿಧಿ ಕಾಯ್ದೆಯಡಿ ಮತದಾರರ ಪಟ್ಟಿ ಸಿದ್ಧಪಡಿಸುವುದು ಶಾಸನಬದ್ಧ ಕರ್ತವ್ಯವಾಗಿದ್ದು, ಈ ಕಾರ್ಯಕ್ಕಾಗಿ ಅಗತ್ಯ ಪೂರ್ವಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದರು.
ಜೂನ್ 30ರಿಂದ ಜುಲೈ 29ರವರೆಗೆ ಬಿ.ಎಲ್.ಓ.ಗಳು ಮನೆಮನೆಗೆ ಭೇಟಿ ನೀಡಿ ಮತದಾರರ ವಿವರಗಳಿರುವ ನಮೂನೆಗಳನ್ನು ಎರಡು ಪ್ರತಿಗಳಲ್ಲಿ ವಿತರಿಸಲಿದ್ದಾರೆ. ಮತದಾರರು ಅದರಲ್ಲಿ ನೀಡಿರುವ ಮಾಹಿತಿಯನ್ನು ಪರಿಶೀಲಿಸಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಅಂಟಿಸಿ, ಕಡ್ಡಾಯವಾಗಿ ಸಹಿ ಮಾಡಿ ನಮೂನೆಯನ್ನು ಹಿಂದಿರುಗಿಸಬೇಕು ಎಂದು ತಿಳಿಸಿದರು.
ಪರಿಷ್ಕರಣೆ ಪ್ರಕ್ರಿಯೆಯ ಪೂರ್ವಸಿದ್ಧತೆಯ ಭಾಗವಾಗಿ ಮತಗಟ್ಟೆ ಅಧಿಕಾರಿಗಳು ಹಾಗೂ ಮತಗಟ್ಟೆ ಏಜೆಂಟ್ಗಳಿಗೆ ತರಬೇತಿ ನೀಡಲಾಗುವುದು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದ್ದು, ಏಜೆಂಟ್ಗಳು ಕಾರ್ಯವಿಧಾನವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಬಿ.ಎಲ್.ಓ.ಗಳು ಮನೆಗೆ ಭೇಟಿ ನೀಡುವ ಮುನ್ನವೇ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಚುನಾವಣಾ ಸಂಬಂಧಿತ ಮಾಹಿತಿ ಹಾಗೂ ನೆರವಿಗಾಗಿ ಚುನಾವಣಾ ಸಹಾಯವಾಣಿ 1950 ಸಂಖ್ಯೆಯನ್ನು ಸಂಪರ್ಕಿಸಿ ಸದುಪಯೋಗಪಡಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.