
ಬಳ್ಳಾರಿ, 02 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಕಪ್ಪಗಲ್ಲು ರಸ್ತೆಯ 9ನೇ ಕ್ರಾಸ್ನಲ್ಲಿ ದುಷ್ಕರ್ಮಿಗಳು ಎರೆಡು ಗೋವಿನ ತಲೆಗಳನ್ನು ಕತ್ತರಿಸಿ ರುಂಡಗಳನ್ನು ರಸ್ತೆಗೆ ಎಸೆದು ಪರಾರಿಯಾಗಿದ್ದಾಗ ಪ್ರತಿಭಟನೆ ನಡೆಸಿದ್ದ ಬಿಜೆಪಿಯ 11 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು ಮೋಕಾ ಅವರ ನೇತೃತ್ವದಲ್ಲಿ 11 ಜನರು ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ್ದು, ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದಲೇ ದುಷ್ಕರ್ಮಿಗಳು ಎರೆಡು ಗೋವುಗಳ ತಲೆಗಳನ್ನು ಕತ್ತರಿಸಿ ಕಪ್ಪಗಲ್ಲು ರಸ್ತೆಯ 9ನೇ ಕ್ರಾಸ್ನಲ್ಲಿರಿಸಿದ್ದರು. ಇದನ್ನು ಖಂಡಿಸಿ, ಅತ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ, ಹಿಂದೂ ಪದ್ಧತಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದೇವೆ ಎಂದರು.
ಇಡೀ ಪ್ರಕರಣದಲ್ಲಿ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳುವ ಬದಲು ಅನಿಲ್ ಕುಮಾರ್ ನಾಯ್ಡು, ಮೋತ್ಕರ್ ಶ್ರೀನಿವಾಸ್, ಗುರ್ರಂ ವೆಂಕಟರಮಣ, ಮಾರುತಿ ಪ್ರಸಾದ್, ಅರ್ಜುನ್ಸಿಂಗ್, ಗೋವಿಂದ (ಆಚಾರಿ), ಮಂಜು, ಕೇಶವ, ಶ್ರೀಮತಿ ಸುಗುಣ, ಭಾಗ್ಯಲಕ್ಷ್ಮಿ, ಸೋಮು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿ, ಬೆದರಿಸುವ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕರನ್ನು ರಕ್ಷಿಸಬೇಕಾಗಿರುವ ಪೊಲೀಸರು ಮತ್ತು ಪೊಲೀಸ್ ಅಧಿಕಾರಿಗಳು ಸಾರ್ವಜನಿಕರನ್ನು ಬಾಧಿಸುವವರಾಗಿ ಬದಲಾಗುತ್ತಿರುವುದು ಅತ್ಯಂತ ವಿಷಾಧನೀಯ ಎಂದರು.
ಬಳ್ಳಾರಿ ನಗರಾದ್ಯಂತ ಅನಧಿಕೃತ ಬಿರಿಯಾನಿ ಅಂಗಡಿಗಳಿವೆ. ಕಸಾಯಿಕಾನೆಗಳ ಸಂಖ್ಯೆ ಮಿತಿ ಮೀರಿದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ 200 ಕ್ಕೂ ಹೆಚ್ಚಿನ ದನಕರುಗಳು ಕಾಣೆಯಾಗಿವೆ. ಹಿಂದೂ ಕಾರ್ಯಕರ್ತರು ಮತ್ತು ಗೋ ಸಂರಕ್ಷರು ಒಟ್ಟಾಗಿ ಕೌಲ್ಬಜಾರ್ ಪ್ರದೇಶದಲ್ಲಿ ಅಕ್ರಮವಾಗಿ ಹಿಡಿದಿಟ್ಟುಕೊಂಡಿದ್ದ ದನಕರುಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಗಮನ ನೀಡಬೇಕಾಗಿದ್ದ ಪೊಲೀಸ್, ಶಾಂತಿಯುತವಾಗಿ ಗೋವಿನ ತಲೆಗಳನ್ನು ಅಂತ್ಯಸಂಸ್ಕಾರ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸಿರುವುದು ಹಾಸ್ಯಾಸ್ಪದ ಎಂದರು.
ಕಾರ್ಪೊರೇಟರ್ಗಳಾದ ಶ್ರೀನಿವಾಸ್ ಮೋತ್ಕರ್, ಹನುಮಂತಪ್ಪ, ಗುಡಿಗಂಡಿ ಹನುಮಂತಪ್ಪ, ಮುಖಂಡರಾದ ಬಿ.ಕೆ. ಸುಂದರ್, ಕೆ.ಎಸ್. ಅಶೋಕ್, ಎಸ್. ಮಲ್ಲನಗೌಡ, ಗುರ್ರಂ ವೆಂಕಟರಮಣ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್