
ಹಾಸನ, 02 ಜೂನ್ (ಹಿ.ಸ.) :
ಆ್ಯಂಕರ್ : ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹಾಸನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ರಾಕ್ಷಾಯಿಣಿ ಜಿ.ಕೆ. ಹೇಳಿದರು.
ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ–2026ರ ಅಂಗವಾಗಿ ನಗರದ ಮಹಾರಾಜ ಪಾರ್ಕ್ನಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪರಿಸರವು ವಿವಿಧ ರೀತಿಯ ಮಾಲಿನ್ಯಗಳಿಂದ ಹಾನಿಗೊಳಗಾಗುತ್ತಿದ್ದು, ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕಾಗಿದೆ. ಕೈಗಾರಿಕೆಗಳ ವಿಸ್ತರಣೆ, ನಗರೀಕರಣ ಹಾಗೂ ಅರಣ್ಯ ನಾಶದಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಪರಿಸರ ಸಂರಕ್ಷಣೆ ಮನೆಯಿಂದಲೇ ಆರಂಭವಾಗಬೇಕು ಎಂದು ಹೇಳಿದರು. ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಕಸ ಮತ್ತು ಒಣ ಕಸ ಎಂದು ಪ್ರತ್ಯೇಕಿಸಿ ವಿಲೇವಾರಿ ಮಾಡಬೇಕು. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಪ್ರವೃತ್ತಿಯನ್ನು ತೊರೆದು ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪರಿಸರ ಅಧಿಕಾರಿ ಭಾಸ್ಕರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಿ.ಟಿ. ಮಾನವ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.