
ಗದಗ, 19 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಸೂಚಿಸಿದರು.
ಗದಗ ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿಂದು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೈಸ್ಕೂಲ್ ಮತ್ತು ಪಿಯುಸಿ ಮಟ್ಟದಲ್ಲಿ 9, 10, 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಇಎಲ್ಸಿ ಕ್ಲಬ್ಗಳ ಮೂಲಕ ಜೂನ್ ತಿಂಗಳಿನಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲು ನಿರ್ದೇಶಿಸಲಾಗಿದೆ. ಕಾಲೇಜಿನ ಮುಖ್ಯಸ್ಥರು ಅಥವಾ ಪ್ರಾಂಶುಪಾಲರು ಇದರ ಅಧ್ಯಕ್ಷರಾಗಿದ್ದು, ಒಬ್ಬರು ಶಿಕ್ಷಕರು ಇದರ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಪೈಕಿ ಇಬ್ಬರನ್ನು 'ಕ್ಯಾಂಪಸ್ ಅಂಬಾಸಿಡರ್ಸ್' ಆಗಿ ನೇಮಕ ಮಾಡಲಾಗುವುದು. ಚುನಾವಣೆ ಆಯೋಗ ನೀಡಿರುವ ಶಾಲಾ-ಕಾಲೇಜುಗಳಲ್ಲಿ ಮತದಾನ ಜಾಗೃತಿ ಮತ್ತು ಕ್ಯಾಲೆಂಡರ್ ಆಫ್ ಇವೆಂಟ್ಸ್ 'ಕ್ಯಾಂಪಸ್ ಇವೆಂಟ್ಸ್' ಅಡಿಯಲ್ಲಿ ಜೂನ್ 30ರ ಒಳಗಾಗಿ ಎಸ್ಐಆರ್ ಗೆ ಸಂಬಂಧಿಸಿದ 30 ನಿಮಿಷಗಳ ಚಟುವಟಿಕೆಯನ್ನು ಎಲ್ಲಾ ಕ್ಲಬ್ಗಳಲ್ಲಿ ಕಡ್ಡಾಯವಾಗಿ ಹಮ್ಮಿಕೊಂಡು, ಅದರ ಫೋಟೋ ಮತ್ತು ವಿವರಗಳನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲು ತಿಳಿಸಿದರು.
ಜಿಲ್ಲೆಯಲ್ಲಿ ಮತದಾರರ ಜಾಗೃತಿಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ವಲಯಗಳಲ್ಲಿ 'ವೋಟರ್ಸ್ ಅವೇರ್ನೆಸ್ ಫೋರಂ' ಸ್ಥಾಪಿಸಲು ನಿರ್ಧರಿಸಲಾಗಿದೆ. ಎಲ್ಲಾ ಇಒ ಗಳಿಗೆ ಈ ಕುರಿತು ಲಾಗಿನ್ ಐಡಿ ನೀಡಲಾಗಿದ್ದು, ಮಾಸ್ಟರ್ ಟ್ರೈನರ್ಸ್ ಮೂಲಕ ಇವುಗಳನ್ನು ಶೀಘ್ರವಾಗಿ ಆಕ್ಟಿವೇಟ್ ಮಾಡಲು ಗಡುವು ನೀಡಲಾಗಿದೆ ಎಂದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸಿಬ್ಬಂದಿಗಳನ್ನು ಒಳಗೊಂಡಂತೆ ಸ್ವತಂತ್ರ ಫೋರಂ ರಚಿಸಿ, ಸ್ವೀಪ್ ಹಾಗೂ ಎಸ್ಐಆರ್ ಸಂಬಂಧಿತ ಆಡಿಯೋ, ವಿಡಿಯೋ ಮತ್ತು ಜಾಗೃತಿ ಸಾಮಗ್ರಿಗಳನ್ನು ಪ್ರಸಾರ ಮಾಡಲು ಕ್ರಮ ಕೈಗೊಳ್ಳಬೇಕು. ಸೋಮವಾರದ ಒಳಗಾಗಿ ಇದರ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಿದರು.
ಪ್ರತಿ ಬೂತ್ ಮಟ್ಟದಲ್ಲಿ 'ಚುನಾವಣಾ ಪಾಠಶಾಲೆ'
ಚುನಾವಣಾ ಸಾಕ್ಷರತೆಯನ್ನು ತಳಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಪ್ರತಿ ಬೂತ್ ಮಟ್ಟದಲ್ಲಿ 'ಚುನಾವಣಾ ಪಾಠಶಾಲೆ' (ಚುನಾವಣಾ ಜಾಗೃತಿ ಸಮಿತಿ) ಯನ್ನು ರಚಿಸಲಾಗುವುದು. ಇದರ ನೋಡಲ್ ಅಧಿಕಾರಿಯಾಗಿ ಆಯಾ ಭಾಗದ ಬಿಎಲ್ಒ ಅವರು ಕಾರ್ಯನಿರ್ವಹಿಸಲಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಸ್ಥಳೀಯ ಯುವಕರು, ರೈತರು, ಮಹಿಳೆಯರು ಮತ್ತು ಸಮುದಾಯದ ಇತರ ಸದಸ್ಯರನ್ನು ಈ ಸಮಿತಿಯಲ್ಲಿ ಒಳಗೊಳ್ಳುವ ಮೂಲಕ ವ್ಯಾಪಕ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ. ಎಸ್ಐಆರ್ ಪ್ರಕ್ರಿಯೆ ಮತ್ತು ಮನೆ ಮನೆ ಸಮೀಕ್ಷೆ ಮತದಾರರ ಪಟ್ಟಿಯ ನೈಜತೆ ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಎಸ್ಐಆರ್ ಪ್ರಕ್ರಿಯೆಯಡಿ ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.
2002ರ ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು, ಪ್ರಸ್ತುತ 2025ರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡಲಾಗಿದೆ. 2002ರ ನಂತರ ಹೊಸದಾಗಿ ಸೇರ್ಪಡೆಯಾದವರು ಅಥವಾ 18 ವರ್ಷ ತುಂಬಿದ ಯುವ ಮತದಾರರ ವಿವರಗಳನ್ನು ಅವರ ಪೋಷಕರು ಅಥವಾ ರಕ್ತಸಂಬಂಧಿಗಳ ವಿವರಗಳೊಂದಿಗೆ ಲಿಂಕ್ ಮಾಡುವ ಮೂಲಕ ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಿಖರವಾದ ಮಾಹಿತಿ ಸಂಗ್ರಹಕ್ಕಾಗಿ ಪ್ರತಿ ಬಿಎಲ್ಒಗಳು ಕನಿಷ್ಠ 3 ಬಾರಿ ಸಂಬಂಧಿತ ಮನೆಗಳಿಗೆ ಭೇಟಿ ನೀಡಬೇಕು. ಭೇಟಿ ನೀಡಿ ಫಾರ್ಮ್ ಪಡೆದ ಮನೆಗಳಿಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಚೌಕಾಕಾರದ ವಿಶೇಷ ಸ್ಟಿಕ್ಕರ್ ಅನ್ನು ಅಂಟಿಸಲಾಗುವುದು. ವಾಸವಿಲ್ಲದ ಅಥವಾ ಮೃತಪಟ್ಟ ಮತದಾರರ ವಿವರಗಳನ್ನು ಪಟ್ಟಿಯಿಂದ ಕೈಬಿಡಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಯ ಈ ಮೂರೂ ಸಮಿತಿಗಳನ್ನು (ಇಎಲ್ಸಿ ಕ್ಲಬ್, ವೋಟರ್ಸ್ ಅವೇರ್ನೆಸ್ ಫೋರಂ, ಚುನಾವಣಾ ಪಾಠಶಾಲೆ) ತಕ್ಷಣವೇ ಸಕ್ರಿಯಗೊಳಿಸಬೇಕು. ತಹಶೀಲ್ದಾರರು ಹಾಗೂ ಇಒಗಳು ಸಮನ್ವಯತೆಯಿಂದ ಕೆಲಸ ಮಾಡಿ, ನಿಗದಿತ ಗಡುವಿನೊಳಗೆ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಎ. ಎ. ಕಂಬಾಳಿಮಠ ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 536 ಇಎಲ್ಸಿ ಕ್ಲಬ್ಗಳಿದ್ದು, ಇದರಲ್ಲಿ 325 ಶಾಲೆಗಳು, 101 ಪಿಯು ಬೋರ್ಡ್, 57 ಕಾಲೇಜುಗಳು ಹಾಗೂ ಐಟಿಐ ಮತ್ತು ಡಿಪ್ಲೊಮಾ ಸೇರಿದಂತೆ 53 ಸ್ವತಂತ್ರ ಸಂಸ್ಥೆಗಳು ಒಳಗೊಂಡಿವೆ. ಇವುಗಳಲ್ಲಿ ಸದ್ಯ 402 ಕ್ಲಬ್ಗಳು ಸಕ್ರಿಯವಾಗಿದ್ದು, ಇನ್ನುಳಿದ 134 ಕ್ಲಬ್ಗಳನ್ನು ಶೀಘ್ರದಲ್ಲೇ ಸಕ್ರಿಯಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ವಿವಿಧ ಹಂತಗಳ ವೇಳಾಪಟ್ಟಿ:
ಜೂನ್ 20 ರಿಂದ ಜೂನ್ 29 ವರೆಗೆ ಪೂರ್ವಸಿದ್ಧತಾ ಕಾರ್ಯಗಳು ಮತ್ತು ತರಬೇತಿ ಪ್ರಕ್ರಿಯೆಗಳು ನಡೆಯಲಿವೆ. ಜೂನ್ 30 ರಿಂದ ಜುಲೈ 29 ಬಿಎಲ್ಒ ಗಳ ಮೂಲಕ ಮನೆ ಮನೆ ಸಮೀಕ್ಷೆ ನಡೆಸಿ, ನಮೂನೆಗಳನ್ನು ಪಡೆದು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುವುದು. ಜುಲೈ 29 ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಪ್ರಕ್ರಿಯೆ ನಡೆಯಲಿದೆ.
ಆಗಸ್ಟ್ 5 ಕರಡು ಮತದಾರರ ಪಟ್ಟಿಯ ಪ್ರಕಟಣೆ. ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 3 ರವರೆಗೆ ಸ್ವೀಕೃತವಾದ ಆಕ್ಷೇಪಣೆಗಳ ಇತ್ಯರ್ಥಗೊಳಿಸಬೇಕು,
ಅಕ್ಟೋಬರ್ 7 ಕ್ಕೆ ಅಂತಿಮ ಮತದಾರರ ಪಟ್ಟಿಯ ಅಧಿಕೃತವಾಗಿ ಪ್ರಕಟಣೆ ಮಾಡಬೇಕು ಎಂದರು.
ಪ್ರತಿಯೊಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಬಿಎಲ್ಒ ಸೌಲಭ್ಯ ಕೇಂದ್ರಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕು. ಈ ಕೇಂದ್ರಗಳಿಗೆ ಅಗತ್ಯವಿರುವ ಸಿಸ್ಟಮ್, ಸ್ಕ್ಯಾನರ್ ಹಾಗೂ ವೈ-ಫೈ ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಬೇಕು. ಇದರಿಂದಾಗಿ ಬಿಎಲ್ಒಗಳು ಫಾರ್ಮ್ಗಳನ್ನು ಸುಲಭವಾಗಿ ಅಪ್ಲೋಡ್ ಮಾಡಲು ಸಾಧ್ಯವಾಗುತ್ತದೆ. 2025ರ ಮತದಾರರ ಪಟ್ಟಿಯಲ್ಲಿರುವ ಯಾವುದೇ ಹೆಸರನ್ನು ಕರಡು ಪಟ್ಟಿಯಿಂದ ತೆಗೆದುಹಾಕಬೇಕಾದರೆ ಸೂಕ್ತ ಲಿಖಿತ ಆದೇಶ ಇರಬೇಕು ಎಂದು ಎ.ಎ ಕಂಬಾಳಿಮಠ ಅವರು ಸ್ಪಷ್ಟಪಡಿಸಿದರು.
ಮತದಾರರ ಪಟ್ಟಿಯಿಂದ ಯಾರ ಹೆಸರೂ ಬಿಟ್ಟುಹೋಗದಂತೆ ನೋಡಿಕೊಳ್ಳಲು ಜಾಗೃತಿ ಮತ್ತು ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು. ಇದಕ್ಕಾಗಿ ಪ್ರತಿ ಜಿಲ್ಲೆಗೆ ₹1,50,000 ಬಿಡುಗಡೆ ಮಾಡಲಾಗಿದ್ದು, ಪ್ರತಿ ಗ್ರಾಮ ಪಂಚಾಯತ್ನಲ್ಲಿ ಬ್ಯಾನರ್, ಪೋಸ್ಟರ್ಗಳನ್ನು ಅಳವಡಿಸಲಾಗುವುದು. ನಗರ ಮತ್ತು ಗ್ರಾಮೀಣ ಭಾಗದ ಕಸದ ಗಾಡಿಗಳ (ಮೈಕ್ ಮೂಲಕ) ಜಿಂಗಲ್ಸ್ ಹಾಗೂ ಡಂಗುರ ಸಾರುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಚುನಾವಣಾ ಆಯೋಗದಿಂದ ಬರುವ ಅಧಿಕೃತ ಆಡಿಯೋ, ವಿಡಿಯೋ ಮತ್ತು ಕರಪತ್ರಗಳನ್ನು ಮಾತ್ರ ಪ್ರಚಾರಕ್ಕೆ ಬಳಸಬೇಕು. ಕಾಲೇಜುಗಳು ಮತ್ತು ಶಾಲೆಗಳ ವ್ಯಾಪ್ತಿಯಲ್ಲಿ ಇಎಲ್ಸಿ ಕ್ಲಬ್ಗಳನ್ನು ಸಕ್ರಿಯಗೊಳಿಸಿ ಜುಲೈ ಮೊದಲ ವಾರದಲ್ಲಿ ಯುವ ಮತದಾರರ ನೋಂದಣಿಗೆ ವಿಶೇಷ ಒತ್ತು ನೀಡಲಾಗುವುದು. ಸ್ತ್ರೀ ಶಕ್ತಿ ಸಂಘಗಳು, ಎನ್ಆರ್ಎಲ್ಎಂ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಈ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಾಗುವುದು.
ಸಾರ್ವಜನಿಕರು ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವುದೇ ದೂರು ಅಥವಾ ನೆರವಿಗಾಗಿ ಚುನಾವಣಾ ಸಹಾಯವಾಣಿ ಸಂಖ್ಯೆ 1950 ಕ್ಕೆ ಕರೆ ಮಾಡಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ. ಎ. ಕಂಬಾಳಿಮಠ ತಿಳಿಸಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮತ್ತು ಸ್ವೀಪ್ ಚಟುವಟಿಕೆಗಳ ಮಾಹಿತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ ಕೊಟೂರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧ ಮಣ್ಣೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಆರ್. ಎಸ್. ಬುರಡಿ, ಪದವಿ-ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್. ಬಿ ಮಾಸ ನಾಯಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಜಿಲ್ಲಾಧಿಕಾರಿ ಮಹೆಬೂಬ ಬೈ ತುಂಬರಮಟ್ಟಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅಮಿತ ಬಿದರಿ, ತಾಲೂಕು ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಡಾ. ಎಚ್.ಎಸ್.ಜಿನಗ, ಯುವಜನ ಸೇವ ಮತ್ತು ಕ್ರೀಡಾ ಇಲಾಖೆಯ ಅಧಿಕ್ಷಕರು ಜಗದೀಶ ಹುಳ್ಳಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP