
ವಿಜಯಪುರ, 19 ಜೂನ್ (ಹಿ.ಸ.) :
ಆಂಕರ್ : SIR (Special Intensive Revision) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಉಂಟಾಗಿರುವ ಆಕ್ಷೇಪಣೆಗಳು, ಗೊಂದಲಗಳು ಹಾಗೂ ವಿವಿಧ ಸಮಸ್ಯೆಗಳ ಕುರಿತು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಖಂಡರು ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಉಂಟಾಗಬಹುದಾದ ಗೊಂದಲಗಳನ್ನು ನಿವಾರಿಸುವುದು, ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಪಾರದರ್ಶಕ ಪ್ರಕ್ರಿಯೆ ನಡೆಸುವ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಮತದಾರರ ಪಟ್ಟಿಯಲ್ಲಿ ಕಂಡುಬರುವ ಯಾವುದೇ ಸಣ್ಣ ಅಥವಾ ಅತಿ ಸಣ್ಣ ವ್ಯತ್ಯಾಸಗಳನ್ನು ದೊಡ್ಡದಾಗಿ ಬಿಂಬಿಸಿ, ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ರೀತಿಯ ಕ್ರಮಗಳು ನಡೆಯಬಾರದು ಎಂದು ಮನವಿ ಮಾಡಿದರು.
ಮತದಾರರ ಪಟ್ಟಿಯಿಂದ ಅರ್ಹ ನಾಗರಿಕರನ್ನು ಯಾವುದೇ ಕಾರಣಕ್ಕೂ ಹೊರಗಿಡುವಂತಿಲ್ಲ. ಪ್ರತಿಯೊಬ್ಬ ಅರ್ಹ ಮತದಾರನಿಗೂ ತನ್ನ ಮತದಾನದ ಹಕ್ಕು ಉಳಿಯುವಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.
SIR ಪ್ರಕ್ರಿಯೆಯಲ್ಲಿ ದಾಖಲೆ ಪರಿಶೀಲನೆ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆಗಳ ವಿಲೇವಾರಿ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ನಿಯೋಗವು ಜಿಲ್ಲಾಧಿಕಾರಿಗಳೊಂದಿಗೆ ಸಕಾರಾತ್ಮಕವಾಗಿ ಚರ್ಚೆ ನಡೆಸಿದ್ದು, ಮತದಾರರ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande