
ಡೆಹ್ರಾಡೂನ್, 13 ಜೂನ್ (ಹಿ.ಸ.) :
ಆ್ಯಂಕರ್ : ರಾಷ್ಟ್ರಪತಿ ಹಾಗೂ ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ದ್ರೌಪದಿ ಮುರ್ಮು ಅವರು ಯುವ ಸೇನಾ ಅಧಿಕಾರಿಗಳು ರಾಷ್ಟ್ರಸೇವೆಯನ್ನು ಪರಮ ಕರ್ತವ್ಯವೆಂದು ಪರಿಗಣಿಸಿ, ದೇಶದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಯ ರಕ್ಷಣೆಗೆ ಸದಾ ಸಜ್ಜಾಗಿರಬೇಕು ಎಂದು ಕರೆ ನೀಡಿದರು.
ಬದಲಾಗುತ್ತಿರುವ ಭದ್ರತಾ ಸವಾಲುಗಳು, ತಾಂತ್ರಿಕ ಪ್ರಗತಿ ಹಾಗೂ ಸಂಕೀರ್ಣ ಜಾಗತಿಕ ಪರಿಸ್ಥಿತಿಗಳ ಈ ಯುಗದಲ್ಲಿ ಭಾರತೀಯ ಸೇನೆ ಭವಿಷ್ಯಕ್ಕೆ ಸಿದ್ಧವಾಗಿದ್ದು, ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಶನಿವಾರ ಡೆಹ್ರಾಡೂನ್ನ ಭಾರತೀಯ ಸೇನಾ ಅಕಾಡೆಮಿಯಲ್ಲಿ ನಡೆದ 158ನೇ ನಿಯಮಿತ ಕೋರ್ಸ್ ಮತ್ತು 141ನೇ ತಾಂತ್ರಿಕ ಪದವಿ ಕೋರ್ಸ್ನ ಪಾಸಿಂಗ್ ಔಟ್ ಪೆರೇಡ್ನ್ನು ಪರಿಶೀಲಿಸಿ ಮಾತನಾಡಿದ ರಾಷ್ಟ್ರಪತಿ, 481 ಭಾರತೀಯ ಜೆಂಟಲ್ಮನ್ ಕೆಡೆಟ್ಗಳು ಸೇನಾ ಅಧಿಕಾರಿಗಳಾಗಿ ಹೊರಹೊಮ್ಮಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ದೇಶದ ಅತ್ಯಂತ ಕಠಿಣ ತರಬೇತಿ ಕಾರ್ಯಕ್ರಮಗಳಲ್ಲಿ ಒಂದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಮಹತ್ವದ ಸಾಧನೆಯಾಗಿದೆ ಎಂದು ಅವರು ಶ್ಲಾಘಿಸಿದರು.
ಪೆರೇಡ್ನಲ್ಲಿ ಭಾಗವಹಿಸಿದ್ದ ಒಂಬತ್ತು ಮಹಿಳಾ ಕೆಡೆಟ್ಗಳನ್ನು ವಿಶೇಷವಾಗಿ ಉಲ್ಲೇಖಿಸಿದ ರಾಷ್ಟ್ರಪತಿ, ಇದು ಭಾರತೀಯ ಸೇನಾ ಅಕಾಡೆಮಿಯ ಇತಿಹಾಸದಲ್ಲೇ ಐತಿಹಾಸಿಕ ಕ್ಷಣವಾಗಿದೆ ಎಂದು ಹೇಳಿದರು.
ಇದು ಕೇವಲ ಭಾರತೀಯ ರಕ್ಷಣಾ ಪಡೆಗಳ ಇತಿಹಾಸದ ಮಹತ್ವದ ಘಟ್ಟವಲ್ಲ, ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ಭಾರತ ಸಾಧಿಸುತ್ತಿರುವ ಪ್ರಗತಿಯ ಸಂಕೇತವೂ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳೆಯರು ಸೇನಾ ಅಕಾಡೆಮಿಗೆ ಸೇರ್ಪಡೆಗೊಂಡು ನಾಯಕತ್ವ ವಹಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಭಾರತೀಯ ಸೇನಾ ಅಕಾಡೆಮಿ ಗೌರವ, ಶೌರ್ಯ ಮತ್ತು ನಿಸ್ವಾರ್ಥ ರಾಷ್ಟ್ರಸೇವೆಯ ಪ್ರತೀಕವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.
ಈ ಪ್ರತಿಷ್ಠಿತ ಸಂಸ್ಥೆಯು ಅನೇಕ ಶ್ರೇಷ್ಠ ಸೇನಾ ನಾಯಕರನ್ನು ರೂಪಿಸಿದ್ದು, ಅವರು ಸಂಕಷ್ಟದ ಸಂದರ್ಭಗಳಲ್ಲಿ ದೇಶದ ಗಡಿಗಳನ್ನು ರಕ್ಷಿಸುವ ಮೂಲಕ ಭಾರತದ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಶ್ಲಾಘಿಸಿದರು. ಅಕಾಡೆಮಿಯ ಕಮಾಂಡೆಂಟ್, ತರಬೇತುದಾರರು ಹಾಗೂ ಸಿಬ್ಬಂದಿಯ ಸೇವೆಯನ್ನು ಅವರು ಪ್ರಶಂಸಿಸಿದರು.
ಸ್ನೇಹ ರಾಷ್ಟ್ರಗಳಿಂದ ತರಬೇತಿಗಾಗಿ ಬಂದಿರುವ ವಿದೇಶಿ ಕೆಡೆಟ್ಗಳಿಗೂ ಅಭಿನಂದನೆ ಸಲ್ಲಿಸಿದ ರಾಷ್ಟ್ರಪತಿ, ಅವರಿಗೆ ಅತ್ಯುನ್ನತ ಮಟ್ಟದ ಸೇನಾ ತರಬೇತಿ ನೀಡುವ ಜವಾಬ್ದಾರಿಯನ್ನು ಭಾರತಕ್ಕೆ ವಹಿಸಿರುವುದು ಆ ರಾಷ್ಟ್ರಗಳ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದರು. ಈ ಕೆಡೆಟ್ಗಳು ತಮ್ಮ ದೇಶಗಳ ಸೇನೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಗೌರವ ಸಂಪಾದಿಸುವ ವಿಶ್ವಾಸವಿದೆ ಎಂದು ಹೇಳಿದರು.
ಯುವ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅವರ ಪಯಣವು ಶಿಸ್ತು, ತ್ಯಾಗ ಮತ್ತು ಸಹನೆಯ ಸಂಕೇತವಾಗಿದೆ ಎಂದು ಹೇಳಿದರು.
ಸೇನಾ ನಾಯಕತ್ವ ಎಂದರೆ ಕೇವಲ ಆದೇಶ ನೀಡುವುದು ಮಾತ್ರವಲ್ಲ, ಅದು ವ್ಯಕ್ತಿತ್ವ, ಕರುಣೆ ಮತ್ತು ಬದ್ಧತೆಯ ಪ್ರತೀಕವೂ ಆಗಿದೆ. ಅಧಿಕಾರಿಗಳು ತಮ್ಮ ಸೈನಿಕರಿಗೆ ಮಾರ್ಗದರ್ಶನ ನೀಡಬೇಕು, ಅವರ ಕಲ್ಯಾಣದ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ತಮ್ಮ ನಡೆ-ನುಡಿಗಳ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಾಚರಣಾ ದಕ್ಷತೆ ಮತ್ತು ಸೈನಿಕರ ಕಲ್ಯಾಣದ ನಡುವೆ ಸಮತೋಲನ ಸಾಧಿಸಿದಾಗ ಮಾತ್ರ ಸೇನಾ ಘಟಕಗಳ ಯುದ್ಧ ಸಾಮರ್ಥ್ಯ ಮತ್ತಷ್ಟು ಬಲವಾಗುತ್ತದೆ ಎಂದು ರಾಷ್ಟ್ರಪತಿ ಹೇಳಿದರು.
ಯುವ ಅಧಿಕಾರಿಗಳು ಮುಂಚೂಣಿಯಲ್ಲಿ ನಿಂತು ನಾಯಕತ್ವ ವಹಿಸಿ, ಭಾರತೀಯ ಸಶಸ್ತ್ರ ಪಡೆಗಳ ಗೌರವಯುತ ಪರಂಪರೆಯನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.
ಭಾರತೀಯ ಸೇನಾ ಅಕಾಡೆಮಿಯ ಧ್ಯೇಯವಾಕ್ಯವಾದ ‘ವೀರತೆ ಮತ್ತು ವಿವೇಕ’ ಪ್ರತಿಯೊಬ್ಬ ಅಧಿಕಾರಿಯ ಜೀವನದ ಮಾರ್ಗದರ್ಶಕವಾಗಬೇಕು ಎಂದು ರಾಷ್ಟ್ರಪತಿ ಹೇಳಿದರು.
ಯಶಸ್ಸಿನ ಸಂದರ್ಭದಲ್ಲಿ ವಿನಯಶೀಲತೆ ಮತ್ತು ಸಂಕಷ್ಟದ ಸಂದರ್ಭದಲ್ಲಿ ಧೈರ್ಯವನ್ನು ಕಾಪಾಡಿಕೊಂಡು ಭಾರತೀಯ ಸೇನೆ ಹಾಗೂ ರಾಷ್ಟ್ರದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆ ಅವರು ಕರೆ ನೀಡಿದರು.
ನೂತನವಾಗಿ ಸೇನಾ ಅಧಿಕಾರಿಗಳಾಗಿ ನೇಮಕಗೊಂಡ ಎಲ್ಲರಿಗೂ ಶುಭಾಶಯ ಕೋರಿದ ರಾಷ್ಟ್ರಪತಿ, ರಾಷ್ಟ್ರಭಕ್ತಿ, ಕರ್ತವ್ಯನಿಷ್ಠೆ ಮತ್ತು ಸೇವಾ ಮನೋಭಾವದೊಂದಿಗೆ ದೇಶದ ರಕ್ಷಣೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಆಶಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.