
ರಾಯ್ಪುರ್, 13 ಜೂನ್ (ಹಿ.ಸ.) :
ಆ್ಯಂಕರ್ : ಛತ್ತೀಸ್‌ಗಢದ ಬಿಜಾಪುರ ಮತ್ತು ಗರಿಯಾಬಂದ್ ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ನಕ್ಸಲರು ಅಡಗಿಸಿಟ್ಟಿದ್ದ 8 ರಹಸ್ಯ ಶಸ್ತ್ರಾಸ್ತ್ರ ಸಂಗ್ರಹಗಳನ್ನು ಪತ್ತೆಹಚ್ಚಿ, ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳು ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿವೆ.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಹಾಗೂ ಪೊಲೀಸ್ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಈ ಮಹತ್ವದ ಯಶಸ್ಸು ದೊರೆತಿದೆ. ಸಿಆರ್ಪಿಎಫ್ನ 199ನೇ ಪಡೆಯ ಕಮಾಂಡೆಂಟ್ ಆನಂದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ದ್ವಿತೀಯ ಕಮಾಂಡ್ ಅಧಿಕಾರಿ ಕುಮಾರ್ ನೀರಜ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಬಿ/199 ಕಂಪನಿ ಮತ್ತು ಯಂಗ್ ಪ್ಲಾಟೂನ್ ತಂಡವನ್ನು ಕಂಪನಿ ಕಮಾಂಡರ್ ರಾಜೀವ್ ಕುಮಾರ್ ಮುನ್ನಡೆಸಿದರೆ, ಎಫ್/199 ಕಂಪನಿಗೆ ಇನ್ಸ್ಪೆಕ್ಟರ್ ಕೆ.ಬಿ. ಪಾಂಡಾ ನೇತೃತ್ವ ವಹಿಸಿದ್ದರು.
ಜಂಟಿ ತಂಡವು ಪೀಡಿಯಾ ಮತ್ತು ಕುಪ್ಪಾಗುಡಾ ವ್ಯಾಪ್ತಿಯ ಅಡ್ರಿ, ಹರ್ರಾ ಹಾಗೂ ಮದುಂಪಾರಾ ಗ್ರಾಮಗಳ ದಟ್ಟ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ಭವಿಷ್ಯದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಉದ್ದೇಶದಿಂದ ನಕ್ಸಲರು ಅಡಗಿಸಿಟ್ಟಿದ್ದ ಒಟ್ಟು 8 ಡಂಪ್ಗಳನ್ನು ಪತ್ತೆ ಹಚ್ಚಲಾಗಿದೆ.
ಶೋಧ ಕಾರ್ಯಾಚರಣೆಯಲ್ಲಿ ಬ್ಯಾರೆಲ್ ಗ್ರೆನೇಡ್ ಲಾಂಚರ್ ರೈಫಲ್ಗಳು, .303 ರೈಫಲ್, ಏರ್ ಗನ್ ಸುತ್ತುಗಳು, 21 ಐಇಡಿ ಸಾಧನಗಳು, ಕಾರ್ಡೆಕ್ಸ್ ವೈರ್, ಸೇಫ್ಟಿ ಫ್ಯೂಸ್, ವಿದ್ಯುತ್ ತಂತಿಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಒಟ್ಟು 58 ಬಗೆಯ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲರ ಬಳಕೆಯ ಉಡುಪುಗಳು ಹಾಗೂ ದೈನಂದಿನ ಬಳಕೆಯ ವಸ್ತುಗಳನ್ನೂ ಜಪ್ತಿ ಮಾಡಲಾಗಿದೆ.
ಸಿಆರ್ಪಿಎಫ್ 199ನೇ ಪಡೆಯು ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿ ಕಾಪಾಡುವ ಬದ್ಧತೆಯನ್ನು ಪುನರುಚ್ಚರಿಸಿದ್ದು, ಮುಂದಿನ ದಿನಗಳಲ್ಲಿ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಇನ್ನಷ್ಟು ಪರಿಣಾಮಕಾರಿ ಕಾರ್ಯಾಚರಣೆಗಳನ್ನು ನಡೆಸಲಾಗುವುದು ಎಂದು ತಿಳಿಸಿದೆ.
ಇನ್ನೊಂದೆಡೆ, ಗರಿಯಾಬಂದ್ ಜಿಲ್ಲೆಯ ದಂಡೈಪಾನಿ ಮತ್ತು ಗೋಬ್ರಾ ಅರಣ್ಯ ಪ್ರದೇಶಗಳಲ್ಲಿ ನಡೆದ ಮತ್ತೊಂದು ಜಂಟಿ ಕಾರ್ಯಾಚರಣೆಯಲ್ಲಿ 4 ಕೆ.ಜಿ. ತೂಕದ ಪ್ರೆಶರ್ ಐಇಡಿ, ಕುಕ್ಕರ್ ಬಾಂಬ್, ಚೀನಾ ಬಾಂಬ್, ಭಾರೀ ಪ್ರಮಾಣದ ಗನ್ ಪೌಡರ್ ಹಾಗೂ ವಾಣಿಜ್ಯ ಬಳಕೆಯ ಕಾರ್ಡೆಕ್ಸ್ ವೈರ್ಗಳನ್ನು ಪತ್ತೆಹಚ್ಚಲಾಗಿದೆ. ಭದ್ರತಾ ಪಡೆಗಳು ಸ್ಥಳದಲ್ಲೇ ಸ್ಫೋಟಕ ಸಾಧನಗಳನ್ನು ನಿಷ್ಕ್ರಿಯಗೊಳಿಸಿ ಸಂಭವನೀಯ ಅಪಾಯವನ್ನು ತಪ್ಪಿಸಿವೆ.
ಕಾರ್ಯಾಚರಣೆಯ ವೇಳೆ ಔಷಧಿಗಳು ಹಾಗೂ ನಕ್ಸಲರ ದೈನಂದಿನ ಬಳಕೆಯ ಹಲವು ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ನಕ್ಸಲರ ಚಟುವಟಿಕೆಗಳಿಗೆ ದೊಡ್ಡ ಹೊಡೆತ ನೀಡಿದ್ದು, ಪ್ರದೇಶದಲ್ಲಿ ಭದ್ರತಾ ಪಡೆಗಳ ಪ್ರಾಬಲ್ಯ ಮತ್ತಷ್ಟು ಬಲಗೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.