
ನವದೆಹಲಿ, 13 ಜೂನ್ (ಹಿ.ಸ.) :
ಆ್ಯಂಕರ್ : ಕೃಷಿ ಜೈವಿಕ ವೈವಿಧ್ಯತೆಯ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಗೆ ಸಂಬಂಧಿಸಿದ ವಿಷಯಗಳಲ್ಲಿ ಪರಿಣಿತ ಸಲಹೆ ನೀಡುವ ಉದ್ದೇಶದಿಂದ ರಾಷ್ಟ್ರೀಯ ಜೈವಿಕ ವೈವಿಧ್ಯತೆ ಪ್ರಾಧಿಕಾರ (ಎನ್ಬಿಎ) ಕೃಷಿ ಜೈವಿಕ ವೈವಿಧ್ಯತೆ ತಜ್ಞರ ಸಮಿತಿಯನ್ನು ಒಂದು ವರ್ಷದ ಅವಧಿಗೆ ಪುನಾರಚನೆ ಮಾಡಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಶನಿವಾರ ಪ್ರಕಟಣೆ ಹೊರಡಿಸಿದ್ದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಕೃಷಿ ವಿಜ್ಞಾನಿ ಡಾ. ಪಿ.ಎಲ್. ಗೌತಮ್ ಅವರನ್ನು ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ. ಡಾ. ಗೌತಮ್ ಅವರು ಈ ಹಿಂದೆ ರಾಷ್ಟ್ರೀಯ ಜೈವಿಕ ವೈವಿಧ್ಯತೆ ಪ್ರಾಧಿಕಾರ ಹಾಗೂ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರದ (ಪಿಪಿವಿಎಫ್ಆರ್ಎ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪಿಪಿವಿಎಫ್ಆರ್ಎಯ ಹಾಲಿ ಅಧ್ಯಕ್ಷರು ಸಮಿತಿಯ ಸಹಾಧ್ಯಕ್ಷರಾಗಿರಲಿದ್ದಾರೆ.
ಎನ್ಬಿಎ ಮಾಹಿತಿ ಪ್ರಕಾರ, 2005ರಿಂದ ಕಾರ್ಯನಿರ್ವಹಿಸುತ್ತಿರುವ ಈ ಸಮಿತಿಯು ಕೃಷಿ ಆನುವಂಶಿಕ ಸಂಪನ್ಮೂಲಗಳು, ಬೀಜಗಳ ರಫ್ತು, ಲಾಭ ಹಂಚಿಕೆ ವ್ಯವಸ್ಥೆ (ಎಬಿಎಸ್), ಸಾಂಪ್ರದಾಯಿಕ ಸಸ್ಯ ತಳಿ ಅಭಿವೃದ್ಧಿ ಹಾಗೂ ಜೈವಿಕ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಂಶೋಧನಾ ಸಹಕಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಮಾರ್ಗದರ್ಶನ ನೀಡುತ್ತಿದೆ.
ಸಮಿತಿಯ ಶಿಫಾರಸುಗಳು ಜೈವಿಕ ವೈವಿಧ್ಯತೆ ಸಂರಕ್ಷಣೆ ಮತ್ತು ಕೃಷಿ ಸಂಶೋಧನೆ ನಡುವಿನ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಪ್ರಾಧಿಕಾರ ತಿಳಿಸಿದೆ.
ಪುನರ್ರಚಿಸಲಾದ ಸಮಿತಿಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್), ತಮಿಳುನಾಡು ಕೃಷಿ ವಿಶ್ವವಿದ್ಯಾಲಯ, ನ್ಯಾಷನಲ್ ಇನೋವೇಶನ್ ಫೌಂಡೇಶನ್ ಹಾಗೂ ನಲ್ಸಾರ್ ಕಾನೂನು ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ತಜ್ಞರು ಮತ್ತು ಹಿರಿಯ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ಸೇರಿಸಲಾಗಿದೆ.
ಕೃಷಿ ಜೈವಿಕ ವೈವಿಧ್ಯತೆಯ ಸಂರಕ್ಷಣೆ, ರೈತರ ಹಕ್ಕುಗಳ ರಕ್ಷಣೆ ಹಾಗೂ ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಮಿತಿಯು ಮುಂದಿನ ದಿನಗಳಲ್ಲಿ ಮಹತ್ವದ ಸಲಹೆಗಳನ್ನು ನೀಡುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.